More

    ಹಲಗಾದಲ್ಲಿ ಎಸ್‌ಟಿಪಿ ಘಟಕ ಕಾಮಗಾರಿ ಆರಂಭ

    ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಫಲವತ್ತಾದ ಕೃಷಿ ಭೂಮಿಯಲ್ಲಿ ವರ್ಷದ ಬಳಿಕ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಕಾಮಗಾರಿ ಸೋಮವಾರ ಆರಂಭವಾಯಿತು.

    ಮತ್ತೊಂದೆಡೆ, ಕಾಮಗಾರಿಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಸರ್ಕಾರ ಮತ್ತು ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರು. ಕೇಂದ್ರ ಸರ್ಕಾರ ಅಮೃತ ಯೋಜನೆಯಡಿ ಸುಮಾರು 156 ಕೋಟಿ ರೂ. ವೆಚ್ಚದಲ್ಲಿ ಹಲಗಾ ಗ್ರಾಮದಲ್ಲಿ ಎಸ್‌ಟಿಪಿ ಘಟಕ ಸ್ಥಾಪನೆಗಾಗಿ 2015ರಲ್ಲಿಯೇ 19.20 ಎಕರೆ ಭೂಮಿಯನ್ನು ನಗರಾಭಿವೃದ್ಧಿ ಇಲಾಖೆ ಸ್ವಾಧೀನಪಡಿಸಿಕೊಂಡಿದೆ. ಬಳಿಕ 2016ರಲ್ಲಿ ಕಾಮಗಾರಿಗೆ ಸರ್ಕಾರ ಕಾರ್ಯಾದೇಶ ನೀಡಿತ್ತು. ಆದರೆ, ರೈತರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ಕೈಬಿಡಲಾಗಿತ್ತು. 2017ರಲ್ಲಿ ರೈತರ ಮೇಲ್ಮನವಿ ಅರ್ಜಿ ವಜಾಗೊಳಿಸಿ ನ್ಯಾಯಾಲಯ ಅನುಮತಿ ನೀಡಿತ್ತು. 2019ರಲ್ಲಿ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಸ ಆರಂಭಿಸಿರಲಿಲ್ಲ.

    ಪರಿಹಾರ ಭರವಸೆ: ಇದೀಗ ಎಸ್‌ಟಿಪಿ ಘಟಕಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪೈಕಿ 17ಎಕರೆ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಲಾಗಿದೆ. ಘಟಕ ನಿರ್ಮಾಣಕ್ಕೆ ವಿರೋಧಿಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಮತ್ತೆ ಪರಿಹಾರ ನೀಡುವ ಕುರಿತು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಕುರಿತು ಭರವಸೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮತ್ತು ಪಾಲಿಕೆ ಇಂಜಿನಿಯರ್‌ಗಳು ತಿಳಿಸಿದ್ದಾರೆ.
    ರೈತರ ಪರ ಯಾರೂ ಇಲ್ಲ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ, ಸುವರ್ಣಸೌಧ ನಿರ್ಮಾಣಕ್ಕೆ ನೂರಾರು ಎಕರೆ ಭೂಮಿ ಬಿಟ್ಟುಕೊಟ್ಟ ಮೇಲೆ ಇದೀಗ ಎಸ್‌ಟಿಪಿ ಘಟಕಕ್ಕೆ 17.37 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಆರಂಭಿಸಿದೆ. ಕೃಷಿ ಭೂಮಿ ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಆದರೆ, ನಮಗೆ ನ್ಯಾಯ ಸಿಗುತ್ತಿಲ್ಲ. 2010ರಿಂದ ಎಸ್‌ಟಿಪಿ ಘಟಕ ಸ್ಥಳಾಂತರ ಮತ್ತು ಕೃಷಿ ಭೂಮಿ ಸ್ವಾಧೀನ ಕೈಬಿಡುವಂತೆ ಹೋರಾಟ ನಡೆಸುತ್ತ, ಸ್ಥಳೀಯ ಶಾಸಕರು ಸೇರಿ ಸಚಿವರು, ಮುಖ್ಯಮಂತ್ರಿಗಳವರೆಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾರೂ ರೈತರ ಪರವಾಗಿ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

    ಈಗಾಗಲೇ ಎಸ್‌ಟಿಪಿ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ 19.20 ಎಕರೆ ಜಮೀನಿನ ಪೈಕಿ 17 ಎಕರೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಭೂ ಸ್ವಾಧೀನ ವಿಷಯದಲ್ಲಿ ರೈತರ ವಿರೋಧವಿದೆ. ಅವರಿಗೆಲ್ಲ ಕಾನೂನಾತ್ಮಕವಾಗಿ ನೀಡಬೇಕಾಗಿರುವುದನ್ನು ನೀಡಲಾಗುವುದು ಎಂದು ಹೇಳಿದ್ದೇವೆ. ಅಲ್ಲದೆ, ಬೇರೆ ಬೇಡಿಕೆಗಳಿದ್ದರೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ಅದಕ್ಕೆಲ್ಲ ಅವರು ಒಪ್ಪಿಕೊಂಡಿದ್ದಾರೆ.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts