More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

    ಚನ್ನರಾಯಪಟ್ಟಣ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ತಿಳಿಸಿದರು.

    ಮಾ. 25 ರಿಂದ ಏಪ್ರಿಲ್ 6 ರವರೆಗೆ ಪರೀಕ್ಷೆ ನಡೆಯಲಿದೆ. ಪಟ್ಟಣದಲ್ಲಿ 3 ಕೇಂದ್ರಗಳು ಸೇರಿದಂತೆ ತಾಲೂಕಿನಾದ್ಯಂತ 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಶ್ರವಣಬೆಳಗೊಳ ಮತ್ತು ಹಿರೀಸಾವೆಯಲ್ಲಿ ತಲಾ ಎರಡು ಕೇಂದ್ರಗಳು ಹಾಗೂ ನುಗ್ಗೇಹಳ್ಳಿ, ಕೆಂಬಾಳು, ಬಾಗೂರು ಮತ್ತು ಉದಯಪುರದಲ್ಲಿ ತಲಾ ಒಂದು ಕೇಂದ್ರ ತೆರೆಯಲಾಗುವುದು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ಬಾರಿ ಪರೀಕ್ಷೆಗೆ 2974 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 2925 ಶಾಲಾ ವಿದ್ಯಾರ್ಥಿಗಳಿದ್ದು, ಉಳಿದ 49 ವಿದ್ಯಾರ್ಥಿಗಳಲ್ಲಿ 17 ಖಾಸಗಿಯಾಗಿ ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. 30 ವಿದ್ಯಾರ್ಥಿಗಳು ಮರು ಪರೀಕ್ಷೆ ಎದುರಿಸುತ್ತಿದ್ದಾರೆ. ಪ್ರತಿ 24 ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಂತೆ 124 ಕೊಠಡಿಗಳನ್ನು ಗುರುತಿಸಲಾಗಿದೆ. 136 ಕೊಠಡಿ ಮೇಲ್ವಿಚಾರಕರಿದ್ದು, 13 ಮುಖ್ಯ ಅಧೀಕ್ಷಕರು, 11 ಪ್ರಶ್ನೆಪತ್ರಿಕೆ ಅಭಿರಕ್ಷಕರು, 12 ಸ್ಥಾನಿಕ ಜಾಗೃತ ದಳ ಅಧಿಕಾರಿಗಳು ಹಾಗೂ 11 ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳಿರುತ್ತಾರೆ. ಪ್ರತಿಯೊಂದು ಕೇಂದ್ರಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

    ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ತಾಲೂಕು ದಂಡಾಧಿಕಾರಿ ನೇತೃತ್ವದಲ್ಲಿ ತಾಪಂ , ಕೆಎಸ್‌ಆರ್‌ಟಿ ಸಿ, ಸಹಕಾರ ಕೋರಿದ್ದು, ಗ್ರಾಮೀಣ ಭಾಗದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಸೂಚಿಸಲಾಗಿದೆ. ಪ್ರತಿ ಪರೀಕ್ಷೆ ಕೇಂದ್ರದಲ್ಲೂ ಕುಡಿಯುವ ನೀರು, ಆಸನಗಳು, ಶೌಚಗೃಹ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆಗೆ ಪತ್ರ ಬರೆದು ಪ್ರತಿ ಪರೀಕ್ಷೆ ಕೇಂದ್ರಕ್ಕೆ ಒಬ್ಬ ಆರೋಗ್ಯ ಸಹಾಯಕರನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದರು.

    2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ತಾಲೂಕು ಮಟ್ಟದಲ್ಲಿ ‘ಟಾರ್ಗೆಟ್ 625’ ಹಾಗೂ ಫಲಿತಾಂಶ ಹೆಚ್ಚಿಸಲು ‘ಟಾರ್ಗೆಟ್ 50’ ಎಂಬ ಕಾರ್ಯಕ್ರಮ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದಲ್ಲಿ ತರಬೇತಿ ನೀಡಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts