More

    ರಾಜ್ಯವನ್ನು ದಿವಾಳಿ ಮಾಡುವ ದಿನಗಳು ದೂರವಿಲ್ಲ

    ಚನ್ನರಾಯಪಟ್ಟಣ : ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುವ ದಿನಗಳು ದೂರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಪಟ್ಟಣದಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಅಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ನಾವುಗಳು ತಪ್ಪು ಮಾಡಿದಾಗ ತಿದ್ದಿದವರು ನೀವು, ನಾವು ನಿಮ್ಮ ಮಕ್ಕಳು, ಸಣ್ಣಪುಟ್ಟ ತಪ್ಪಾಗಿದ್ರೆ ಕ್ಷಮಿಸಿ ಅವಕಾಶ ಕೊಡಿ ಎಂದು ಕೇಳಲು ಬಂದಿದ್ದೇನೆ. ನಿಮ್ಮ ಶಕ್ತಿಯನ್ನು ನಾವು ಎಂದಿಗೂ ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ, ನಾನು ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ. ಆದರೆ ಜನರು ಒತ್ತಡ ಹಾಕಿ ನಿಲ್ಲಿಸಿದ್ದಾರೆ. ಅದು ದೇವರ ಇಚ್ಛೆಯಾಗಿತ್ತು ಅನ್ನಿಸುತ್ತದೆ. ಮೋದಿ ಅವರೊಂದಿಗೆ ಕೆಲಸ ಮಾಡುವ ಅವಕಾಶದೊಂದಿಗೆ ದೇಶದ ರೈತರ ಬೆಳೆಗೆ ಎಂಎಸ್‌ಪಿ ದರ ನಿಗದಿಯೊಂದಿಗೆ ದೇಶದ ರೈತರನ್ನು ಸಂಕಷ್ಟದಿಂದ ಪಾರು ಮಾಡಲೇಂದೆ ಭಗವಂತನ ಕೃಪೆ ಇರಬೇಕೇನೊ ಎಂದು ತಾವು ಲೋಕಸಭೆಗೆ ಸ್ಪರ್ಧಿಸುತ್ತಿರುವ ಕುರಿತಾಗಿ ಸ್ಪಷ್ಟನೆ ನೀಡಿದರು.

    ಹೋದಲೆಲ್ಲ, ಬಂದಲೆಲ್ಲ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಕುರಿತಾಗಿ ಮಾತನಾಡುವುದು ಬಿಟ್ಟು, ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಸಾಧನೆ ಏನು ಎಂಬುದರ ಕುರಿತು ಮಾತನಾಡುವುದಿಲ್ಲ. ಗ್ಯಾರಂಟಿಯನ್ನು ಅವರ ಪಕ್ಷದ ಖಜಾನೆಯಿಂದ ಕೊಡುತ್ತಿದ್ದರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮದ್ಯದ ದರ ಜಾಸ್ತಿ ಮಾಡಿ ನಿಮ್ಮ ಗಂಡಂದಿರ ದುಡ್ಡು ನಿಮಗೆ ವಾಪಸ್ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಇದು ಪಿಕ್ ಪ್ಯಾಕೆಟ್ ಸರ್ಕಾರವೆಂದು ಟೀಕಿಸಿದ ಎಚ್‌ಡಿಕೆ, ಉಚಿತ ವಿದ್ಯುತ್‌ನಿಂದಾಗಿ ಕೆಇಬಿ ಕಚೇರಿಗಳು ಮುಚ್ಚುವ ಕಾಲ ದೂರ ಇಲ್ಲ, ಜಮೀನು ನೋಂದಣಿ ಸೇರಿ ಎಲ್ಲ ದರಗಳು ದುಪ್ಟಟ್ಟು ಆಗಿವೆ. ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿ, ಜನರಿಂದಲೇ ಕಿತ್ತು ನೀಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದರು.

    ಎರಡು ಸಾವಿರ ಜತೆ 4 ಗ್ಯಾರಂಟಿ ಕೊಡುತ್ತಿದ್ದಾರೆ. ಇದರಿಂದ ಚುನಾವಣೆಯಲ್ಲಿ ಮತ ಕೊಡಲು ಮಹಿಳೆಯರು ದಾರಿ ತಪ್ಪಿದ್ದಾರೆ ಅಂತ ತುಮಕೂರಿನಲ್ಲಿ ಹೇಳಿದ್ದನ್ನೇ ಕಾಂಗ್ರೆಸ್‌ನವರು ದೊಡ್ಡದು ಮಾಡಿ, ಕುಮಾರಸ್ವಾಮಿ ಮಹಿಳಾ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿದ್ದಾರೆ. ಇಲ್ಲಿ ಮುಸ್ಲಿಂ ಮಹಿಳೆಯರಿದ್ದಾರೆ. ಈ ಹಿಂದೆ ತಲಾಕ್ ಹೇಳಿ ನಿಮ್ಮನ್ನು ಬೀದಿಗೆ ತಂದು ನಿಲ್ಲಿಸಲಾಗುತಿತ್ತು. ತ್ರಿವಳಿ ತಲಾಕ್ ರದ್ದು ಮಾಡಿ ನಿಮಗೆ ಶಕ್ತಿ ತಂದು ಕೊಟ್ಟಿರುವುದು ನರೇಂದ್ರಮೋದಿ. ದೇವೇಗೌಡರು 91ನೇ ವಯಸ್ಸಿನಲ್ಲಿ ವ್ಹೀಲ್‌ಚೇರ್‌ನಲ್ಲಿ ಹೋಗಿ ರಾಜ್ಯಸಭೆಯಲ್ಲಿ ನಾಡಿನ, ಜಲ, ನೆಲದ ಬಗ್ಗೆ ಚರ್ಚೆ ಮಾಡ್ತಾರೆ. ನಾಡಿನ ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು, ನಾಡಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನರೇಂದ್ರಮೋದಿ ಅವರು 400ಕ್ಕೂ ಹೆಚ್ಚು ಸೀಟ್ ಗೆದ್ದು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಕುಮಾರಸ್ವಾಮಿ ಅವರು ಎರಡು ಸಲ ಮುಖ್ಯಮಂತ್ರಿಗಳಾಗಿ ಚಿನ್ನದಂತಹ ಆಡಳಿತ ನಡೆಸಿದರು. ಇದೀಗ ಕೇಂದ್ರದಲ್ಲಿ ನರೇಂದ್ರ ಮೋದಿ ಪಕ್ಕದಲ್ಲಿ ಕೂರೋದು ಶತಃಸಿದ್ಧ, ಅವರಿಂದ ಮಾತ್ರ ಬಡವರ, ದೀನ ದಲಿತರ ಉದ್ಧಾರ ಸಾಧ್ಯವೆಂದರು.

    ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ಪರಮ ದೇವರಾಜೇಗೌಡ, ಶಿವನಂಜೇಗೌಡ, ಸಿ.ವಿ.ರಾಜಪ್ಪ, ಸಿ.ಆರ್.ಚಿದಾನಂದ್, ಡಿ.ಎಂ.ರವಿ, ಎ.ಇ.ಚಂದ್ರಶೇಖರ್, ಎ.ಸಿ.ಆನಂದ್‌ಕುಮಾರ್, ಎಂ.ಆರ್.ಅನಿಲ್‌ಕುಮಾರ್, ಕುಸುಮಾ ಬಾಲಕೃಷ್ಣ, ಎಚ್.ಎಸ್.ಶ್ರೀಕಂಠಪ್ಪ, ಬೆಳಗುಲಿ ಪುಟ್ಟಸ್ವಾಮಿ, ಕಬ್ಬಾಳು ರಮೇಶ್, ಕುಂಬಾರಹಳ್ಳಿ ರಮೇಶ್, ಅಂಬಿಕಾ ರಾಮಕೃಷ್ಣ, ಮಮತಾ, ವಿಜಯಾ, ಪವಿತ್ರಾ, ಪುರುಷೋತ್ತಮ ಸೇರಿ ಇತರರು ಇದ್ದರು. ಮಾಧ್ಯಮಿಕ ಶಾಲಾ ಆವರಣದಲ್ಲಿನ ಪ್ರಚಾರ ಸಭೆಗೂ ಮುನ್ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದಿಂದ ಮಾಧ್ಯಮಿಕ ಶಾಲಾ ಆವರಣದವರೆಗೂ ರೋಡ್ ಶೋ ನಡೆಸಿದರು. ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತಯಾಚಿಸಿದರು. ಅಭಿಮಾನಿಗಳು, ಕಾರ್ಯಕರ್ತರು ಅವರ ವಾಹನದ ಮುಂದೆ ಬೈಕ್ ರ‌್ಯಾಲಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts