More

    ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ: ಶಿಕ್ಷಣ ಮತ್ತು ಗೃಹ ಸಚಿವರ ಜಂಟಿ ಸುದ್ದಿಗೋಷ್ಠಿ

    ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಕರೊನಾ ಸೋಂಕಿನ ಆತಂಕದಲ್ಲೇ ಪರೀಕ್ಷೆ ಆರಂಭವಾಗುತ್ತಿದ್ದು, ಶಿಕ್ಷಣ ಸಚಿವ ಎಸ್​.ಸುರೇಶ್ ಕುಮಾರ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬುಧವಾರ ಸಂಜೆ ತುರ್ತುಸುದ್ದಿಗೋಷ್ಠಿ ನಡೆಸಿದರು.

    ಪರೀಕ್ಷಾ ಅಕ್ರಮ ತಡೆಗೆ ಕ್ರಮ

    ಪರೀಕ್ಷಾ ಕೇಂದ್ರಗಳಿಗೆ ವಿಶೇಷ ಭದ್ರತೆ‌ ಒದಗಿಸಲಾಗಿದೆ. ಪರೀಕ್ಷಾ ಅಕ್ರಮಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಂಡಿದ್ದೇವೆ. ಪರೀಕ್ಷಾ ಕೇಂದ್ರಗಳ‌ಬಳಿ ಜನ ದಟ್ಟಣೆ ತಡೆಯಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ೧೪೪ ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ನಾಳೆಯಿಂದ ಪ್ರಾರಂಭವಾಗುತ್ತಿರುವ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವುದಕ್ಕೆ 8,48,203 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 2,879 ಪರೀಕ್ಷಾ ಕೇಂದ್ರಗಳಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮತ್ತು ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ 18 ರಿಂದ 20 ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವುದಕ್ಕಾಗಿ 330 ಹೆಚ್ಚುವರಿ ಕೇಂದ್ರಗಳನ್ನು ರಚಿಸಲಾಗಿದೆ. ಈ ಪೈಕಿ 57 ಸೂಕ್ಷ್ಮ ಪರೀಕ್ಷಾ ಕೇಂದ್ರ, 4 ಅತಿ ಸೂಕ್ಷ್ಮ ಕೇಂದ್ರ, 2818 ಸಾಮಾನ್ಯ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ವಾರ ಮೊದಲೇ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ

    ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಲ್ಲ. ಶಿಕ್ಷಣ ಕ್ಷೇತ್ರದ ಪ್ರಮುಖರು ಸೇರಿ‌ ಹಲವಾರು ಜನರ ಜತೆ ಸಂವಾದ ಚರ್ಚೆ ನಡೆಸಿದ ಬಳಿಕ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಪರೀಕ್ಷೆ ನಡೆಸದಂತೆ ಕೆಲವರು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯ ಸರ್ಕಾರದ ತೀರ್ಮಾನವನ್ನು‌‌ ಒಪ್ಪಿ ಪರೀಕ್ಷೆಗೆ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಸಂಪೂರ್ಣ ಹಿತಾಸಕ್ತಿ ‌ಕಾಪಾಡಲು ನಾವು ಬದ್ದರಾಗಿದ್ದೇವೆ. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸುವಂತೆ ಸಚಿವ ಸುರೇಶ್​ ಕುಮಾರ್ ಮನವಿ ಮಾಡಿದರು.

    ಸ್ಯಾನಿಟೈಸೇಷನ್​ ಕೂಡ ಆಗಲಿದೆ

    ಶಿಕ್ಷಣ, ಗೃಹ ಹಾಗೂ ಆರೋಗ್ಯ ಇಲಾಖೆಯ ಒಂದೂವರೆ ಲಕ್ಷ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯದಲ್ಲಿ‌ ನಿಯೋಜಿಸಲಾಗಿದೆ. ಪರೀಕ್ಷಾ ಕೊಠಡಿಗಳನ್ನು‌ ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲಾಗಿದೆ. ಪ್ರತಿದಿನ ಪರೀಕ್ಷೆ ಮುಗಿದ ಬಳಿಕ ಕೊಠಡಿಗಳನ್ನು ಸಂಪೂರ್ಣ ಸ್ವಚ್ಚಗೊಳಿಸಲಾಗುವುದು. ಪರೀಕ್ಷಾ ಕೇಂದ್ರದ ಸುತ್ತಲಿನ ಸೈಬರ್, ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

    ರಾಜ್ಯಾದ್ಯಂತ 5755 ಆರೋಗ್ಯ ತಪಾಸಣಾ‌ ಕೇಂದ್ರ ಪ್ರಾರಂಭಿಸಲಾಗಿದೆ. ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ನೋಡಲ್ ಅಧಿಕಾರಿಗಳು, ಸ್ಥಾನಿಕ ಜಾಗೃತ ದಳ, ಕೊಠಡಿ ಮೇಲ್ವಿಚಾರಕರು, ಮೊಬೈಲ್ ಸ್ವಾಧೀನಾಧಿಕಾರಿ ಹಾಗೂ 18 ರೀತಿಯ ವಿವಿಧ ಅಧಿಕಾರಿಗಳು ಸೇರಿದಂತೆ 81,265 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿ, ಸಿಇಒ, ಖಜಾನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ 19,222 ಅಧಿಕಾರಿಗಳು ಪರೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ.

    ಪರೀಕ್ಷಾ ಸಿಬ್ಬಂದಿ ಬೆಳಿಗ್ಗೆ ೭ ಗಂಟೆಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿದ್ದಾರೆ. ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರನ್ನು ವಿದ್ಯಾರ್ಥಿಗಳು ತರಲು ಮನವಿ ಮಾಡಲಾಗಿದೆ. ಒಂದು ವೇಳೆ ನೀರು ತರಲು ಸಾಧ್ಯವಾಗದಿದ್ದರೆ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಪೋಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

    ನಾಳೆಯಿಂದ ಜು.4ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ | ಸುರಕ್ಷತೆಗೆ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts