More

    ಜಿಲ್ಲೆಯಲ್ಲಿ ತ್ರಿಶತಕ ದಾಟಿದ ಕರೊನಾ

    ಕಾರವಾರ : ಉತ್ತರ ಕನ್ನಡದಲ್ಲಿ ಕರೊನಾ ಅಬ್ಬರ ಜನರ ನಿದ್ದೆಗೆಡಸಿದೆ. ಒಂದೇ ದಿನ 35 ಪ್ರಕರಣಗಳು ಖಚಿತವಾಗಿದ್ದು, ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿ, ಸೋಂಕಿತನಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್ ಕಾನ್ಸ್​ಟೇಬಲ್​ಗೂ ಸೋಂಕು ದೃಢಪಟ್ಟಿದೆ. ಯಾರ ಸಂಪರ್ಕಕ್ಕೂ ಬಾರದ ನಾಲ್ವರಿಗೆ ರೋಗ ಖಚಿತವಾಗಿದ್ದು, ರೋಗ ನಿಧಾನವಾಗಿ ಸಾರ್ವಜನಿಕವಾಗಿ ಹರಡಲಾರಂಭಿಸಿದ ಮುನ್ನೆಚ್ಚರಿಕೆ ನೀಡಿದೆ.

    ಭಟ್ಕಳದಲ್ಲಿ 16, ಶಿರಸಿ ಹಾಗೂ ಅಂಕೋಲಾದಲ್ಲಿ ತಲಾ 6, ಹೊನ್ನಾವರದಲ್ಲಿ 5 ಹಾಗೂ ಯಲ್ಲಾಪುರದ ಇಬ್ಬರಿಗೆ ಸೋಂಕು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

    ವಿಜಯವಾಡ ನಂಟು: ವಿಜಯವಾಡದಿಂದ ಆಗಮಿಸಿದ 2ರಿಂದ ಎಂಟು ವರ್ಷದೊಳಗಿನ ನಾಲ್ವರು ಹೆಣ್ಣು ಮಕ್ಕಳು ಸೇರಿ ಒಟ್ಟು 9 ಜನರಿಗೆ ಕರೊನಾ ಕಂಡುಬಂದಿದೆ. ದುಬೈನಿಂದ ಆಗಮಿಸಿದ ಮಧ್ಯ ವಯಸ್ಕ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನಿಗೆ, ಉತ್ತರ ಪ್ರದೇಶದಿಂದ ಆಗಮಿಸಿದ 18, 22 ಹಾಗೂ 35 ವರ್ಷದ ಯುವಕರಿಗೆ ಮಹಾರಾಷ್ಟ್ರದಿಂದ ಆಗಮಿಸಿದ ಇನ್ನೊಬ್ಬ ವ್ಯಕ್ತಿಗೆ ಸೋಂಕು ಕಂಡುಬಂದಿದೆ.

    ಬೀಟ್ ಕಾನ್ಸ್​ಟೇಬಲ್​ಗೂ ಸೋಂಕು: ಅಂಕೋಲಾ ಅಗ್ರಗೋಣದಲ್ಲಿ ಒಬ್ಬನಿಂದ 15ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ಶೇಡಿಕಟ್ಟಾವನ್ನು ಸೀಲ್​ಡೌನ್ ಮಾಡಿ ಕಂಟೇನ್ಮೆಂಟ್ ವಲಯ ಎಂದು ಘೊಷಿಸಲಾಗಿದೆ. ಅಲ್ಲಿ ಕರ್ತವ್ಯದಲ್ಲಿದ್ದ ಪಟ್ಟಣದ ಕೋಟೆವಾಡದ 26 ವರ್ಷದ ಪೊಲೀಸ್ ಕಾನ್ಸ್​ಟೇಬಲ್​ಗೂ ಸೋಂಕು ಇರುವುದು ದೃಢಪಟ್ಟಿದೆ.

    ರಾಮನಗುಳಿಯಲ್ಲಿ ಯಾರ ಸಂಪರ್ಕಕ್ಕೂ ಬಾರದ 91 ವರ್ಷದ ಬುಡಕಟ್ಟು ವೃದ್ಧನಿಗೆ, ಬಡಗೇರಿಯ 8 ವರ್ಷದ ಬಾಲಕನಿಗೆ, ಕೋಟೆವಾಡದ ಒಬ್ಬ ಯುವಕನಿಗೆ ಜ್ವರ ಬಂದ ಹಿನ್ನೆಲೆಯಲ್ಲಿ (ಐಎಲ್​ಐ)ಪರೀಕ್ಷೆ ನಡೆಸಿದಾಗ ಕರೊನಾ ಖಚಿತವಾಗಿದೆ. ಕೋಟೆವಾಡದ ಇನ್ನೊಬ್ಬ ಯುವಕ ಮಂಗಳೂರಿಗೆ ಹೋಗಿ ಬಂದಿದ್ದು, ರೋಗ ಖಚಿತವಾಗಿದೆ. ಅತಿ ಜನದಟ್ಟಣೆ ಇರುವ ಬಡಗೇರಿಯಲ್ಲಿ ಬಾಲಕನಿಗೆ ರೋಗ ಇರುವುದು ಜನರ ಆತಂಕ್ಕೆ ಕಾರಣವಾಗಿದೆ.

    ಶಿರಸಿ ಖಾಸಗಿ ನರ್ಸಿಂಗ್ ಹೋಂನ 47 ವರ್ಷದ, ಇನ್ನೊಂದು ಆಸ್ಪತ್ರೆಯ 51 ವರ್ಷದ ಸಿಬ್ಬಂದಿಗೆ ಹಾಗೂ ಹುಲೇಕನ್​ನ 35 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಎರಡೂ ಆಸ್ಪತ್ರೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ಬೈಕ್ ಕಳ್ಳತನದ ಆರೋಪಿಯ ಸಂಪರ್ಕಕ್ಕೆ ಬಂದ ಶಿರಸಿ ಸಬ್ ಜೈಲ್​ನಲ್ಲಿದ್ದ ಮೂವರು ಕೈದಿಗಳಿಗೂ ಸೋಂಕು ದೃಢಪಟ್ಟಿದೆ.

    ಉಡುಪಿಯಿಂದಲೂ ಬಂತು: ಉಡುಪಿಯ ಬೈಂದೂರಿನಿಂದ ಬಂದ ಹೊನ್ನಾವರದ 28 ವರ್ಷದ ಮಹಿಳೆ, 7 ಹಾಗೂ 5 ವರ್ಷದ ಇಬ್ಬರು ಬಾಲಕರಲ್ಲಿ, ಮಹಾರಾಷ್ಟ್ರದಿಂದ ಆಗಮಿಸಿದ ಮಾವಿನಹೊಳೆಯ ಇಬ್ಬರು ಮಹಿಳೆಯರಲ್ಲಿ ರೋಗ ಖಚಿತವಾಗಿದೆ.

    ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ಕಿರವತ್ತಿಯ 16 ವರ್ಷದ ಬಾಲಕನಿಗೆ ಹಾಗೂ ಕಂಡಕ್ಟರ್ ಸಂಪರ್ಕಕ್ಕೆ ಬಂದ ಮಂಚಿಕೇರಿಯ 25 ವರ್ಷದ ಇನ್ನೊಬ್ಬನಿಗೂ ಸೋಂಕು ದೃಢಪಟ್ಟಿದೆ.

    ಕೈದಿಗಳಿಗೆ, ಆಸ್ಪತ್ರೆ ಸಿಬ್ಬಂದಿಗೂ ಕರೊನಾ

    ಶಿರಸಿ: ನಗರದಲ್ಲಿ ದಿನೆ ದಿನೇ ಹೆಚ್ಚಾಗುತ್ತಿರುವ ಕರೊನಾ ಭಯದ ವಾತಾವರಣ ಸೃಷ್ಟಿಸಿದೆ. ಶನಿವಾರ 6 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಸಬ್ ಜೈಲಿನಲ್ಲಿರುವ ಆರೋಪಿಗಳು ಸೇರಿ ಆಸ್ಪತ್ರೆಯ ನೌಕರನಿಗೂ ಕರೊನಾ ಸೋಂಕು ತಗುಲಿದೆ.

    ಬೈಕ್ ಕಳ್ಳತನದ ಆರೋಪಿಯ ಪ್ರಾಥಮಿಕ ಸಂಪರ್ಕದಿಂದ ಶಿರಸಿ ಸಬ್​ಜೈಲಿನಲ್ಲಿರುವ ಮೂವರು ಕೈದಿಗಳಿಗೆ ಸೋಂಕು ತಗುಲಿದೆ. ಆರೋಪಿತ ಭೇಟಿ ನೀಡಿದ್ದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಉದ್ಯೋಗಿ, ತಾಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೌಕರ ಹಾಗೂ ಹೋಂ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲ ದ್ರವ ಸಂಗ್ರಹಣೆ ಕಾರ್ಯ ನಡೆದಿದೆ.

    ಎಚ್ಚರಿಕೆ ಅಗತ್ಯ: ಕರೊನಾ ಹೆಚ್ಚುತ್ತಿರುವ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ನಗರ ವ್ಯಾಪ್ತಿಯ ಮೂರು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಗಂಟಲ ದ್ರವವನ್ನು ಜು. 5ರಂದು ಸಂಗ್ರಹಿಸಿ ಪರೀಕ್ಷೆಗೆ ಕಾರವಾರಕ್ಕೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕರೊನಾ ಪಾಸಿಟಿವ್ ಬಂದ ಆರು ಜನರ ಪೈಕಿ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಈಗಾಗಲೇ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಮೂವರು ಸೋಂಕಿತರು ಕೈದಿಗಳಾಗಿದ್ದು, ನ್ಯಾಯಾಧೀಶರ ಅನುಮತಿ ಪಡೆದು ಸೂಕ್ತ ಭದ್ರತೆ ಜತೆಗೆ ಶಿರಸಿ ಜಿಲ್ಲಾ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts