More

    ಪರೀಕ್ಷಾ ಕೇಂದ್ರದಿಂದ ಸೋಂಕು ಹರಡಿಲ್ಲ: ಸಚಿವ ಸುರೇಶ್ ಕುಮಾರ್

    ತುಮಕೂರು: ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈವರೆಗೆ 32 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದು, ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳನ್ನು ಹೊಸ ಅಭ್ಯರ್ಥಿಗಳೆಂದು ಪರಿಗಣಿಸಿ ಅವಕಾಶ ನೀಡಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

    ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಂಕು ತಗಲಿರುವ ಮೂಲ ಬೇರೆ ಆಗಿದೆ. ಪರೀಕ್ಷಾ ಕೇಂದ್ರದಿಂದ ಯಾವ ವಿದ್ಯಾರ್ಥಿಯ ಆರೋಗ್ಯಕ್ಕೂ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.

    ಸುರಕ್ಷತಾ ಕೇಂದ್ರ: ಯಾವುದೇ ಪರೀಕ್ಷಾ ಕೇಂದ್ರ, ಕೇವಲ ಪರೀಕ್ಷಾ ಕೇಂದ್ರವಾಗಿರಬಾರದು ಅದು ಮಕ್ಕಳ ಸುರಕ್ಷತಾ ಕೇಂದ್ರವಾಗಿರಬೇಕೆಂಬ ಸಂಕಲ್ಪವನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಅತ್ಯಂತ ಸುರಕ್ಷಿತವಾಗಿ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು.

    ರಾಜ್ಯದಲ್ಲಿ ಈವರೆಗೆ ಶೇ.98 ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಗುರುವಾರ ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮುಂಜಾಗ್ರತಾ ಕ್ರಮವಹಿಸಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಎಲ್ಲಿಯೂ ಮಕ್ಕಳಿಗೆ ಪರೀಕ್ಷಾ ಕೇಂದ್ರದಿಂದ ಸೋಂಕು ಹರಡಿಲ್ಲ ಎಂದು ತಿಳಿಸಿದರು.

    ಶ್ರೀಸಿದ್ಧಗಂಗಾ ಮಠದಲ್ಲಿನ ಪರೀಕ್ಷಾ ಕೇಂದ್ರ ಪರಿಶೀಲನೆ ನಡೆಸಿದ್ದೇನೆ. ಮಠದಲ್ಲಿ ರಾಜ್ಯದ ಮೂಲೆಮೂಲೆಗಳ ವಿದ್ಯಾರ್ಥಿಗಳಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಸ್ವಂತ ಊರುಗಳಿಗೆ ತೆರಳಿದ್ದರು. ಈ ವೇಳೆ ತಾವು ಇರುವ ಕಡೆಯೇ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿತ್ತಾದರೂ ಎಲ್ಲರೂ ಮಠದಲ್ಲೇ ಪರೀಕ್ಷೆ ಬರೆಯುವುದಾಗಿ ಮರಳಿದ್ದು, ಮಕ್ಕಳಲ್ಲಿನ ಉತ್ಸಾಹ, ಆತ್ಮವಿಶ್ವಾಸ ಕಂಡು ಸಂತಸವಾಗಿದೆ ಎಂದರು.

    ಯಾವುದೇ ತೊಂದರೆಯಾಗದಂತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಶಾಂತಿಯುತವಾಗಿ ಪರೀಕ್ಷೆ ನಡೆಯುವಂತೆ ಪೊಲೀಸ್, ಕಂದಾಯ, ಆರೋಗ್ಯ, ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಡಿಡಿಪಿಐ ಎಂ.ಆರ್ ಕಾಮಾಕ್ಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts