More

    ಏಕಾಂಗಿಯಾಗಿ ಬಾವಿ ತೋಡಿದ ಬಾಲಕ! ಜೀವಜಲ ಪಡೆದ ಆಧುನಿಕ ಭಗೀರಥ | ಸೃಜನ್ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆ

    ಸಂದೀಪ್ ಸಾಲ್ಯಾನ್
    ಬಂಟ್ವಾಳ: ಪ್ರತೀ ವರ್ಷ ಬೇಸಿಗೆಯಲ್ಲಿ ಮನೆಮಂದಿ ಎದುರಿಸುವ ಜಲಕ್ಷಾಮ ಸಂಕಷ್ಟ ತಾಳಲಾರದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಲಕನೋರ್ವ ಏಕಾಂಕಿಯಾಗಿ 24 ಅಡಿ ಆಳದ ಬಾವಿ ತೋಡಿ, ನೀರು ಪಡೆದು ಅಚ್ಚರಿಸಿ ಮೂಡಿಸಿದ್ದಾನೆ!

    ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ-ಮೋಹಿನಿ ದಂಪತಿ ಪುತ್ರ ಸೃಜನ್ ಬಾವಿ ತೋಡಿ ಜೀವ ಜಲ ಪಡೆದ ಆಧುನಿಕ ಭಗೀರಥ. ಮೂಡ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸೃಜನ್ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸೃಜನ್ ಮನೆಗೆ ಪಂಚಾಯಿತಿಯ ನಲ್ಲಿ ನೀರೇ ಆಸರೆ. ಬೇಸಿಗೆಯಲ್ಲಿ ನಲ್ಲಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಪಕ್ಕದ ಮನೆಯ ಬಾವಿಯನ್ನು ಅವಲಂಬಿಸಬೇಕಿತ್ತು. ಇದರಿಂದ ಬೇಸತ್ತ ಸೃಜನ್ ಮನೆ ಮುಂದೆ ಬಾವಿ ತೋಡುವುದಾಗಿ ತಾಯಿಯಲ್ಲಿ ಹೇಳುತ್ತಿದ್ದ. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ತಂದೆಯಲ್ಲಿ ಹೇಳಿದ್ದ.

    ಆದರೆ, ಇದೆಲ್ಲ ಮಕ್ಕಳಾಟವಲ್ಲ ಎಂದು ಹೆತ್ತವರು ಆತನ ಬೇಡಿಕೆಯತ್ತ ಗಮನ ಹರಿಸಿರಲಿಲ್ಲ. ಆದರೂ, ಹಠ ಬಿಡದ ಸೃಜನ್, 2020ರ ಡಿಸೆಂಬರ್​ನಲ್ಲಿ ಬಾವಿ ತೋಡಲಾರಂಭಿಸಿದ. ಸಣ್ಣ ಹೊಂಡ ನೋಡಿದ ಹಲವರು ಇದು ಬಾವಿಯೋ, ಇಂಗು ಗುಂಡಿಯೋ ಎಂದು ಅಣಕಿಸುತ್ತಿದ್ದರು. ಬಳಿಕ ಮಳೆ ಆರಂಭವಾದ್ದರಿಂದ ತನ್ನ ಕಾರ್ಯ ಅಲ್ಲಿಗೆ ನಿಲ್ಲಿಸಿದ್ದ. ಸೃಜನ್​ಗೆ ಕಳೆದ ಮಾರ್ಚ್​ನಲ್ಲಿ ಸಿಕ್ಕ ರಜೆ ವೇಳೆ ಬಾವಿ ತೋಡುವ ಕಾಯಕ ಮತ್ತೆ ಆರಂಭಿಸಿದ. ಅಚ್ಚರಿ ಎಂದರೆ, 24 ಅಡಿ ಆಳದಲ್ಲೇ ಸೃಜನ್ ಪರಿಶ್ರಮಕ್ಕೆ ಫಲ ಸಿಕ್ಕಿತು. ಬಾವಿಯಲ್ಲಿ ಈಗ ಒಸರು ಹರಿದು ಅರ್ಧ ಬಾವಿಯಷ್ಟು ನೀರಿದೆ.

    ಕ್ರಿಯಾಶೀಲ ಬಾಲಕ

    ಸೃಜನ್ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯ. ತರಕಾರಿ ಬೆಳೆಸುವುದರಲ್ಲಿ ಆಸಕ್ತಿ. ತಂದೆ ಟೈಲರ್, ತಾಯಿಗೆ ಬೀಡಿ ಕಾರ್ವಿುಕೆ. ಸಹೋದರಿ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ಮಗನ ಸಾಧನೆಯಿಂದ ಹೆತ್ತವರಿಗೆ ಅತೀವ ಸಂತಸ ನೀಡಿದೆ. ಊರಿನ ಮಂದಿಯೂ ಭೇಷ್ ಎನ್ನುತ್ತಿದ್ದಾರೆ.

    ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬಾವಿ ತೋಡಬೇಕು ಎಂದುಕೊಂಡಿದ್ದೆ. ಆರಂಭದಲ್ಲಿ ಸಣ್ಣ ಹೊಂಡ ತೋಡಿ, ವರ್ಷದ ನಂತರ ಕೆಲಸ ಪುನರಾರಂಭಿಸಿದೆ. ಕಷ್ಟ ಆದರೂ ನಿರಂತರ ಪ್ರಯತ್ನ ಪಟ್ಟ ಕಾರಣ ಬಾವಿಯಲ್ಲಿ ನೀರು ಸಿಕ್ಕಿದೆ. ಸಂತೋಷವಾಗಿದೆ.

    | ಸೃಜನ್, ಏಕಾಂಗಿಯಾಗಿ ಬಾವಿ ತೋಡಿದ ಬಾಲಕ

    ಆರಂಭದಲ್ಲಿ ಬಾವಿ ತೋಡುತ್ತೇನೆ ಎಂದಾಗ ಮಕ್ಕಳಾಟಿಕೆ ಎಂದುಕೊಂಡಿದ್ದೆವು. ತೆಂಗಿನ ಗಿಡ ನೆಡಲು ಹೊಂಡ ತೋಡುವುದಾಗಿ ಭಾವಿಸಿದ್ದೆ. ಆದರೆ, ಹಠ ಬಿಡದೆ ಪ್ರಯತ್ನಿಸಿದ ಪರಿಣಾಮ, ಬಾವಿಯಲ್ಲಿ ನೀರು ಸಿಕ್ಕಿದೆ. ಆತನ ಬಗ್ಗೆ ಹೆಮ್ಮೆ ಎನಿಸುತ್ತಿದೆ.

    | ಲೋಕನಾಥ, ಸೃಜನ್ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts