More

    ಗ್ಯಾರಂಟಿಗಳಿಂದ ದೇಶ ಬರ್ಬಾದ್

    ಶಹಾಬಾದ್: ಶ್ರೇಷ್ಠ ಹಾಗೂ ಶ್ರೀಮಂತ ಭಾರತವನ್ನು ಇಂದಿನ ಹೆಬ್ಬೆಟ್ಟು ರಾಜಕಾರಣಿಗಳು ಗ್ಯಾರಂಟಿ ಹೆಸರಿನಲ್ಲಿ ಬರ್ಬಾದ್ ಮಾಡುತ್ತಿದ್ದಾರೆ ಎಂದು ಗಜೇಂದ್ರಗಡ ತಳ್ಳಿಹಾಳನ ವಿಶ್ವಕಾಲಜ್ಞಾನ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶರಣಬಸವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

    ಸೂಗೂರ (ಎನ್) ಗ್ರಾಮದಲ್ಲಿ ಸ್ವಯಂಸಿದ್ಧ ಶ್ರೀ ಭೋಜಲಿಂಗೇಶ್ವರ ರಥೋತ್ಸವ ನಿಮಿತ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ವಿದೇಶ ಪ್ರವಾಸಿಗ ರಜಾಕ್ ಭಾರತವನ್ನು ನೋಡಿ `ಭಾರತ ಶ್ರೀಮಂತ ರಾಷ್ಟ್ರವಲ್ಲದಿದ್ದರೂ, ಹೃದಯ ಶ್ರೀಮಂತಿಕೆ ಹೊಂದಿದೆ. ಇಲ್ಲಿಯ ಗುಡಿಸಿಲಿನಲ್ಲಿ ನಾನು ತಾಯಿಯ ವಾತ್ಸಲ್ಯ ಕಂಡಿದ್ದೇನೆ’ ಎಂದು ಪುಸ್ತಕದಲ್ಲಿ ಬರೆದ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದ. ಇಂತಹ ದೇಶದ ಮಾನ ಹರಾಜು ಮಾಡಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ನುಡಿದರು.

    ಸೂಗೂರಿನಲ್ಲಿ ಭೋಜಲಿಂಗೇಶ್ವರರ ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದು, ಇಲ್ಲಿಯ ಕಂಬಗಳಲ್ಲಿ ಸಂಗೀತ ಹೊರಡಲಿದೆ. ಈ ಭಾಗದಲ್ಲಿ ಬೃಹತ್ ಹಾಗೂ ಜಾಗೃತ ತಾಣವಾಗಿ ಹೊರಹೊಮ್ಮಲಿದೆ. ಕೆಲ ವರ್ಷಗಳಲ್ಲಿಯೇ ಮೂರ್ತಿ ಸ್ಥಾಪನೆಯಾಗಲಿದ್ದು, ಮತ್ತೆ ಎಲ್ಲರೂ ಸೇರೋಣ ಎಂದರು.

    ಮುದಗಲ್‌ನ ಮಹಾಂತೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮರು ಮಾನವ ರೂಪದಲ್ಲಿದ್ದರೂ, ಪರಮಾತ್ಮನಾಗಿ ನಂಬಿ ಬಂದ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾರೆ. ಪರಸ್ಪರ ಪ್ರೀತಿಸುವುದು, ಗೌರವಿಸುವುದು ನಿಜವಾದ ಧರ್ಮವಾಗಿದೆ. ಧರ್ಮದ ಬೆಳಕಿನಲ್ಲಿ ಜೀವನಾನಂದ ಸಿಗುತ್ತದೆ. ನಿಸರ್ಗದ ಕೃಪೆ ಎಲ್ಲರ ಮೇಲೆ ಒಂದೇ ಇರುವಂತೆ, ಗುರು-ದೇವರ ಕೃಪೆಯೂ ಹೀಗೆ ಇರುತ್ತದೆ ಎಂದರು.

    ಭೋಜಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಹಿರಗಪ್ಪ ತಾತಾ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಸೋಮಣ್ಣಗೌಡ ತುಮಕೂರ, ಶರಣಗೌಡ ಬೆನಕನಳ್ಳಿ, ವಿಶ್ವನಾಥ ರೆಡ್ಡಿ, ನರೇಂದ್ರ ಗುತ್ತಿ, ಡಾ.ಮಲ್ಲಿಕಾರ್ಜುನ ಹಡಪದ, ಈರಣ್ಣ ಬಲಕಲ್, ಎಸ್.ಎಸ್.ಜಾಗೇರಿ, ಸಂಗಾರೆಡ್ಡಿ ಮಾಲಿಪಾಟೀಲ್, ಮಲ್ಲಿನಾಥ ಚಿನ್ನಾ, ಬಸವರಾಜ ಹಡಪದ, ಪ್ರಭು ಹೂಗಾರ, ರಾಜೇಂದ್ರ ನಾಯ್ಕೋಡಿ, ಶಿವರಾಜ ಶಾಸ್ತ್ರೀ ರಾಂಪೂರ, ರವಿಕುಮಾರ ಅಳಂದ, ರಾಘವೇಂದ್ರ ಆಶಾಪುರ ಇತರರಿದ್ದರು.

    ನಿವೃತ್ತ ಡಿವೈಎಸ್‌ಪಿ ಎ.ಎಚ್. ಚಿಪ್ಪರ್, ಕಲ್ಯಾಣ ಕರ್ನಾಟಕ ಪರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಡಾ.ಆನಂದ ಡಿ.ಹೇರೂರ ಅವರಿಗೆ ೨೦೨೪ನೇ ಸಾಲಿನ ಸೂಗೂರಶ್ರೀ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಜು ಬಸ್ಸಯ್ಯ ದಂಪತಿ ಹಾಗೂ ಅರ್ಜುನ ಇಟಗಿ ಅವರಿಂದ ಹಾಸ್ಯ ರಸಮಂಜರಿ ನಡೆಯಿತು. ಉದ್ಯಮಿ ಭೀಮರೆಡ್ಡಿಗೌಡ ಕುರಾಳ ಸ್ವಾಗತಿಸಿದರು. ಶಂಕರಗೌಡ ಯಾದಗಿರಿ ನಿರೂಪಣೆ ಮಾಡಿದರು.

    ೪೨೫ ಸ್ಥಾನಗಳಲ್ಲಿ ಗೆಲ್ಲಲಿದೆ ಎನ್‌ಡಿಎ ಒಕ್ಕೂಟ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಬರೋಬ್ಬರಿ ೪೨೫ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಗಜೇಂದ್ರಗಡ ತಳ್ಳಿಹಾಳ ವಿಶ್ವಕಾಲಜ್ಞಾನ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶರಣಬಸವ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸೂಗೂರ(ಎನ್) ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಶ್ರೀ ಭೋಜಲಿಂಗೇಶ್ವರ ಜಾತ್ರೋತ್ಸವದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಶಿವನ ಸುತ, ಶಾಂಭವಿ ಆರಾಧನೆ ಮಾಡುವ, ಮದುವೆಯಾಗಿದ್ದರೂ ಸನ್ಯಾಸಿ ಜೀವನ ನಡೆಸುತ್ತಿರುವವನು ೪೨೫ ಕ್ಷೇತ್ರಗಳಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿಯಲಿದ್ದಾನೆ. ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ನಮ್ಮ ಇಂಜಿನಿಯರ್, ಡಾಕ್ಟರ್, ವಿಜ್ಞಾನಿಗಳು ವಿಶ್ವದೆಲ್ಲೆಡೆ ಕೆಲಸ ಮಾಡಲಿದ್ದಾರೆ. ೧೩೦ ದೇಶಗಳು ಹಿಂದು ರಾಷ್ಟçವಾಗಲಿವೆ ಎಂದರು. ಜಗತ್ತಿಗೆ ಮತ್ತೊಂದು ರೋಗ ಹರಡಲಿದ್ದು, ಅದಕ್ಕೆ ಭಾರತ ವಿಶಿಷ್ಟ ಔಷಧ ನೀಡಲಿದೆ. ಫ್ರಾನ್ಸ್, ಜಪಾನ್, ರಷ್ಯಾದಿಂದ ಯುದ್ಧ ಭೀತಿ ಇದ್ದು, ಭಾರತಕ್ಕೆ ಯಾವುದೇ ಪರಿಣಾಮವಿಲ್ಲ. ಪಾಕಿಸ್ತಾನ ವಿಶ್ವ ನಕ್ಷೆಯಿಂದ ಕಾಣೆಯಾಗುತ್ತದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಸಾಧನೆ ಮಾಡಲಿದೆ ಎಂದು ನುಡಿದರು. ಕರ್ನಾಟಕದಲ್ಲಿ ಆಗಸ್ಟ್ ಬಳಿಕ ರಾಜಕೀಯದಲ್ಲಿ ಕೋಲಾಹಲ ಉಂಟಾಗಲಿದ್ದು, ಕೆಲ ರಾಜಕಾರಣಿಗಳಿಗೆ ಕುಂದು ತರಲಿದೆ. ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕ ಮೇಲುಗೈ ಸಾಧಿಸಲಿದ್ದು, ಕೋಲಾರ ಕೊನೆಯಾಗಲಿದೆ. ಜೋಳ ಚೆನ್ನಾಗಿ ಆಗಲಿದ್ದು, ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್‌ಗೆ ಒಂದು ಲಕ್ಷ ರೂ. ಮುಟ್ಟಲಿದೆ. ತೊಗರಿಗೆ ಕ್ರಿಮಿಗಳ ಕಾಟ ಹೆಚ್ಚಲಿದ್ದು, ಗವಿಸಿದ್ಧೇಶ್ವರ ಮಠ ಹಾಗೂ ಮಹಾಕೂಟದ ತೀರ್ಥ ಬೆಳೆಗೆ ಸಿಂಪಡಿಸಿದರೆ ಎಲ್ಲ ಬಾಧೆ ದೂರವಾಗಲಿದೆ ಎಂದರು.

    ಮಳೆ ನಿಲ್ಲಿಸಿದ ಸ್ವಾಮೀಜಿ!: ಸೂಗೂರ(ಎನ್) ಗ್ರಾಮದ ಭೋಜಲಿಂಗೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಗಜೇಂದ್ರಗಡದ ಶ್ರೀ ಡಾ.ಶರಣಬಸವ ಸ್ವಾಮೀಜಿ ಮಾತನಾಡುವಾಗ ಮಳೆ ಸುರಿಯುತ್ತಿತ್ತು. ಈ ವೇಳೆ ಆಕಾಶ ನೋಡಿದ ಶ್ರೀಗಳು, ಒಂದು ತಿಂಗಳ ನಂತರ ಬಾ ಎಂದು ಹೇಳಿದರು. ಇದಾಗ ೧ ನಿಮಿಷದಲ್ಲಿ ಮಳೆ ನಿಂತಿತು. ಶ್ರೀಗಳ ಪವಾಡ ಕಂಡು ನೆರೆದಿದ್ದ ಅಪಾರ ಭಕ್ತರಿಂದ ಜೈಘೋಷಗಳು ಮೊಳಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts