More

    ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ವಿತ್ತ ಸಚಿವಾಲಯದ ಉದ್ಯೋಗಿ ಅರೆಸ್ಟ್​

    ನವದೆಹಲಿ: ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ ಬುಧವಾರ ವಿತ್ತ ಸಚಿವಾಲಯದಲ್ಲಿ ಸಕ್ರಿಯವಾಗಿದ್ದ ಬೇಹುಗಾರಿಕೆ ಜಾಲವನ್ನು ಭೇದಿಸಿದ್ದು ಸಚಿವಾಲಯದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದೆ.

    ಆರೋಪಿ ಸುಮಿತ್ ಎಂಒಎಫ್‌ನಲ್ಲಿ ಗುತ್ತಿಗೆ ಆಧಾರಿತ ಉದ್ಯೋಗಿಯಾಗಿದ್ದು, ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸುಮಿತ್ ಸುಮಾರು ಒಂದು ವರ್ಷದಿಂದ ತನ್ನ ಸಹಚರರಿಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    “ಸುಮಿತ್ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆತ ಒಂದೆರಡು ವರ್ಷಗಳಿಂದ ವಿತ್ತ ಸಚಿವಾಲಯದ ಜೊತೆಗೆ ಸಂಪರ್ಕ ಹೊಂದಿದ್ದ. ಈತ ಎಂಟ್ರಿ ಲೆವೆಲ್​ ಡೇಟಾ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ನಂತರ, ಆತ ನೆಟ್​ವರ್ಕ್​ಗಳನ್ನು ರಚಿಸಿ ತನ್ನ ಸಹಚರರಿಗೆ ಯಶಸ್ವಿಯಾಗಿ ಮಾಹಿತಿಯನ್ನು ಸೋರಿಕೆ ಮಾಡಿದ್ದ.

    ನಮ್ಮ ಮಾಹಿತಿಯ ಪ್ರಕಾರ, ಆತನ ಸಹವರ್ತಿಗಳೆಲ್ಲರೂ ವಿದೇಶದಲ್ಲಿದ್ದಾರೆ. ಅವರು ಕೆಲವು ವಿಭಾಗಗಳ ವೆಚ್ಚಗಳ ರಹಸ್ಯ ಮಾಹಿತಿ ಮತ್ತು ಡೇಟಾವನ್ನು ಬಯಸುತ್ತಾರೆ. ಎಲ್ಲಾ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳಲು ತನ್ನ ಫೋನ್ ಬಳಸುತ್ತಿದ್ದ ಸುಮಿತ್‌ಗೆ ಈ ಸಹಚರರು ಹಣದ ಆಫರ್ ಮಾಡಿದ್ದಾರೆ” ಎಂದು ಕ್ರೈಂ ಬ್ರ್ಯಾಂಚ್​ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕ್ರೈಂ ಬ್ರಾಂಚ್‌ನಲ್ಲಿ ಅಧಿಕಾರಿಗಳ ರಹಸ್ಯ ಕಾಯಿದೆ ಸೆಕ್ಷನ್ 3 (ಗೂಢಚಾರಿಕೆಗೆ ದಂಡ) ಮತ್ತು 9 (ಪ್ರಯತ್ನ, ಪ್ರಚೋದನೆ) ಅಡಿಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದ್ದು, ಸುಮಿತ್‌ನನ್ನು ಬಂಧಿಸಲಾಗಿದೆ.

    “ನೌಕರನೊಬ್ಬ ಹಣಕ್ಕಾಗಿ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾನೆ ಎಂಬ ಗೂಢ ಮಾಹಿತಿ ನಮಗೆ ಸಿಕ್ಕಿ ಲೀಡ್ಅನ್ನು ಅಭಿವೃದ್ಧಿಪಡಿಸಲಾಯಿತು. ಮಾಹಿತಿ ಸೋರಿಕೆ ಮಾಡುತ್ತಿದ್ದ ಸುಮಿತ್ಅನ್ನು ಗುರುತಿಸಿ ಬಂಧಿಸಲಾಗಿದೆ. ಸಹಚರರೊಂದಿಗೆ ಹಂಚಿಕೊಂಡ ದಾಖಲೆಗಳಿದ್ದ ಮೊಬೈಲ್ ಫೋನ್ಅನ್ನು ಆತನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಆತನ ಎಲ್ಲಾ ಸಹಚರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts