More

    ಕ್ರೀಡಾ ಚಟುವಟಿಕೆಗಳು ಮಕ್ಕಳ ಭವಿಷ್ಯಕ್ಕೆ ದಾರಿ

    ಚಳ್ಳಕೆರೆ: ವಿದ್ಯಾರ್ಥಿ ದಿಸೆಯಲ್ಲಿ ಕ್ರೀಡಾಚಟುವಟಿಕೆಗಳು ಭವ್ಯ ಭವಿಷ್ಯವನ್ನು ರೂಪಿಸುವ ಅವಕಾಶ ಕಲ್ಪಿಸುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಂಜಲಿ ಲಿಂಗರಾಜು ಹೇಳಿದರು.

    ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ

    ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾ ವಲಯ ಸೇರಿ ವಿವಿಧ ಕ್ಷೇತ್ರದ ಬಹುತೇಕ ಸಾಧಕರು ಗ್ರಾಮೀಣ ಭಾಗದಿಂದ ಬಂದವರಾಗಿದ್ದಾರೆ.

    ಅಂತಹ ಸಾಧಕರ ಬದುಕಿನ ಅನುಕರಣೆ ಈಗಿನ ವಿದ್ಯಾರ್ಥಿಗಳಿಗೆ ಇರಬೇಕು ಎಂದರು.

    ಪ್ರಸ್ತುತ ಸ್ಪರ್ಧಾ ಸಮಾಜದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕಲಿಕೆಯಲ್ಲಿ ಸಾಧಕರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಬಿಇಒ ಕೆ.ಎಸ್. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳುವ ಜಾಣ್ಮೆ ಇರಬೇಕು.

    ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮುಖ್ಯ ಭೂಮಿಕೆಗೆ ತರುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ತಿಳಿಸಿದರು.

    ಶಾಲಾ ಹಂತದಲ್ಲಿನ ಪ್ರತಿಭಾ ಕಾರಂಜಿ, ಕ್ರೀಡಾ ಚಟುವಟಿಕೆಗಳು ಮತ್ತು ಸ್ಪರ್ಧಾ ಪರೀಕ್ಷೆಗಳ ಭಾಗವಹಿಸುವಿಕೆಯಲ್ಲಿ ಆಸಕ್ತಿ ಹೊಂದಿರಬೇಕು.

    ತಾಲೂಕು ಮತ್ತು ಜಿಲ್ಲಾ ಹಂತದ ಸಾಧನೆ ಮೂಲಕ ಕಲಿಕಾ ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರುವ ರೀತಿಯಲ್ಲಿ ಗುರಿ ಸಾಧನೆ ಮಾಡಬೇಕು ಎಂದರು.

    ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸನ್ ಮಾತನಾಡಿ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸದೃಢ ಮೈಕಟ್ಟನ್ನು ನೀಡುತ್ತದೆ.

    ಆರೋಗ್ಯ ಮತ್ತು ನಾಯಕತ್ವ ಗುಣ ಬೆಳೆಸುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಭಾವನೆ ಇರಬೇಕು ಎಂದು ಹೇಳಿದರು.

    ಗ್ರಾಪಂ ಕಾರ್ಯದರ್ಶಿ ರಾಜಣ್ಣ, ಇಸಿಒ ರವಿಶಂಕರ್, ಮುಖ್ಯಶಿಕ್ಷಕ ಶ್ರೀನಿವಾಸ್, ಎಸ್.ರುದ್ರಪ್ಪ, ಪಾಲಯ್ಯ, ಗೋವಿಂದಪ್ಪ, ತಿಪ್ಪೇಸ್ವಾಮಿ, ವೀರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts