More

    ಕರ್ನಾಟಕದ ಕ್ರೀಡಾಪಟುಗಳಿಗೆ ಕೋವಿಡ್​ ಲಸಿಕೆ; ಕ್ರೀಡಾ ಇಲಾಖೆ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಕೋವಿಡ್​ ಮಹಾಮಾರಿ ಕಳೆದ 15 ತಿಂಗಳಿಂದ ದೇಶದಲ್ಲಿ ಕ್ರೀಡಾಚಟುವಟಿಕೆಗಳಿಗೆ ಭಾರಿ ಪೆಟ್ಟು ನೀಡಿದೆ. ಈ ವೈರಸ್​ನಿಂದಾಗಿ ಅದೆಷ್ಟೋ ಕ್ರೀಡಾಕೂಟಗಳು ಮುಂದೂಡಿಕೆಯಾಗಿದ್ದರೆ, ಕೆಲವೊಂದು ರದ್ದುಗೊಂಡಿವೆ. ಇದೀಗ ಕರೊನಾ ಎರಡನೇ ಅಲೆ ಅಬ್ಬರದ ನಡುವೆಯೂ ಲಸಿಕೆ ನೀಡುವ ಕಾರ್ಯವೂ ರಾಷ್ಟ್ರವ್ಯಾಪ್ತಿ ಭರದಿಂದ ಸಾಗುತ್ತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾಗರೀಕರಿಗೆ ವಿವಿಧ ವಯೋಮಾನದಲ್ಲಿ ಲಸಿಕೆ ನೀಡುವ ಕಾರ್ಯ ಮಾಡುತ್ತಿವೆ. ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಲಸಿಕೆ ನೀಡಬೇಕೆಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಕರ್ನಾಟಕದ ಕ್ರೀಡಾಪಟುಗಳಿಗೆ ಆದ್ಯತೆ ಮೇರೆಗೆ ಲಸಿಕೆ ಕೊಡಿಸಲು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು, ಶನಿವಾರದಿಂದ ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು..

    ಜಿಲ್ಲಾ ಕ್ರೀಡಾಧಿಕಾರಿಗಳಿಂದ ಮಾಹಿತಿ: ರಾಜ್ಯಾದ್ಯಂತ ಇರುವ ಕ್ರೀಡಾಪಟುಗಳಿಗೆ ಲಸಿಕೆ ಕೊಡಿಸಲು ಇಲಾಖೆ ತೀರ್ಮಾನಿಸಿದ್ದು, ಈ ಕುರಿತು ಜಿಲ್ಲಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಂದ ಕ್ರೀಡಾಪಟುಗಳ ಮಾಹಿತಿ ಕೋರಲಾಗಿದೆ. ಜಿಲ್ಲಾವಾರು ಕ್ರೀಡಾಪಟುಗಳ ಮಾಹಿತಿ ಕಲೆಹಾಕಲು ನಿರ್ಧರಿಸಿರುವ ಕ್ರೀಡಾ ಇಲಾಖೆ ಆದ್ಯತೆ ಮೇರೆಗೆ ಲಸಿಕೆ ಕೊಡಿಸಲು ತೀರ್ಮಾನಿಸಿದೆ. ಆಸಕ್ತ ಕ್ರೀಡಾಪಟುಗಳು ಜಿಲ್ಲಾ ಅಥವಾ ಬೆಂಗಳೂರು ಕೇಂದ್ರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ,

    *18 ವರ್ಷ ಮೆಲ್ಪಟ್ಟವರಿಗೆ ಮಾತ್ರ
    ಕ್ರೀಡಾ ಇಲಾಖೆ ನಡೆಸುತ್ತಿರುವ ರಾಜ್ಯದ ವಿವಿಧೆಡೆಯಲ್ಲಿರುವ ಕ್ರೀಡಾ ಹಾಸ್ಟೆಲ್​ಗಳಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲ ಕ್ರೀಡಾಪಟುಗಳು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಕ್ರೀಡಾಪಟುಗಳ ಸಾಧನೆ ಹಾಗೂ ಮುಂಬರುವ ಕ್ರೀಡಾಕೂಟಗಳನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಕೊಡಿಸಲಾಗುವುದು ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಹಾಸ್ಟೆಲ್​ಗಳಲ್ಲಿ 18 ವರ್ಷ ಒಳಗಿರುವ ಕ್ರೀಡಾಪಟುಗಳು ಲಸಿಕೆ ಪಡೆಯಲು ಅರ್ಹರಲ್ಲ. ಕೋವಿಡ್​ನಿಂದ ಲಾಕ್​ಡೌನ್​ ಆಗಿರುವುದರಿಂದ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ತಮ್ಮ ಊರುಗಳಿಗೆ ಸೇರಿದ್ದು, ಇವರಿಗೆ ಲಸಿಕೆ ಪಡೆಯಲು ತೊಂದರೆಯಾಗುತ್ತಿದೆ. ಲಸಿಕೆ ಪಡೆಯಲು ಕ್ರೀಡಾಪಟುಗಳು ಅನುಭವಿಸುತ್ತಿರುವ ತೊಂದರೆಯನ್ನು ಮನಗಂಡು ಕ್ರೀಡಾ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

    ಕೆಒಎ ಒತ್ತಾಯ
    ಕರ್ನಾಟಕ ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ನೀಡುವಂತೆ ಒತ್ತಾಯಿಸಿ ಇತ್ತೀಚೆಗಷ್ಟೇ ಕರ್ನಾಟಕ ಒಲಿಂಪಿಕ್​ ಸಂಸ್ಥೆ (ಕೆಎಒ) ವತಿಯಿಂದ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಕ್ರೀಡಾಪಟುಗಳಿಗೆ ಲಸಿಕೆ ತೆಗೆದುಕೊಳ್ಳಲು ಯಾವುದೆ ತೊಂದರೆಯಾಗದಂತೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿಕೊಡಬೇಕೆಂದು ಇತ್ತೀಚೆಗಷ್ಟೇ ಅಧ್ಯಕ್ಷ ಕೆ.ಗೋವಿಂದರಾಜು ಪತ್ರ ಬರೆದಿದ್ದರು.

    *ಆದ್ಯತೆ ಮೇರೆಗೆ ಕ್ರೀಡಾಪಟುಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಒಲಿಂಪಿಕ್ಸ್​, ಏಷ್ಯಾಡ್​ನಂಥ ಪ್ರತಿಷ್ಠಿತ ಕ್ರೀಡಾಕೂಟಗಳಿಗೆ ಸಿದ್ಧತೆಯಲ್ಲಿರುವ ರಾಜ್ಯದ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ರೀಡಾ ಇಲಾಖೆ ಈ ತೀರ್ಮಾನ ಕೈಗೊಂಡಿದೆ. > ನಾರಾಯಣಗೌಡ, ಕ್ರೀಡಾ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts