More

    ಕ್ರೀಡಾಕೂಟಗಳ ಆಯೋಜನೆಗೆ ಚಿಂತನೆ

    ಭರತ್ ಶೆಟ್ಟಿಗಾರ್ ಮಂಗಳೂರು

    ಡಿಸೆಂಬರ್ ತಿಂಗಳು ಮುಗಿಯುತ್ತಿದ್ದಂತೆ ಬಹುತೇಕ ಎಲ್ಲ ಕ್ರೀಡಾಕೂಟಗಳು ಮುಗಿದು, ವಿದಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ನಿಯಮಿತವಾಗಿ ಕ್ರೀಡಾಕೂಟಗಳು ಆಯೋಜನೆಗೊಳ್ಳದೆ ಯುವ ಕ್ರೀಡಾಪಟುಗಳ ಕ್ರೀಡಾ ಬದುಕಿನ ಮೇಲೆ ಪರಿಣಾಮ ಬೀರಿದೆ.

    ಪ್ರತಿ ವರ್ಷ ಕ್ರೀಡಾ ಇಲಾಖೆಯಿಂದ ಆಯೋಜನೆಗೊಳ್ಳುತ್ತಿದ್ದ ತಾಲೂಕು, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳ ತರಬೇತಿ ಶಿಬಿರಗಳು ಕಳೆದೆರಡು ವರ್ಷಗಳಿಂದ ನಡೆದಿಲ್ಲ. ಅದರ ಬದಲಾಗಿ ಕಳೆದ ಬಾರಿ ಪರ್ಯಾಯ ಕ್ರೀಡಾಕೂಟ ನಡೆಸಲಾಗಿತ್ತು. ಈ ಬಾರಿಯೂ ಅದೇ ರೀತಿ ಪರ್ಯಾಯ ಕ್ರೀಡಾಕೂಟ ಆಯೋಜನೆಗೆ ಉದ್ದೇಶಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ ಕ್ರೀಡಾಕೂಟ, ತಾಲೂಕು ಮಟ್ಟದ ಕ್ರೀಡಾಕೂಟ, ತರಬೇತಿ ಶಿಬಿರಗಳು ಮತ್ತು ಸಾಹಸ ಕ್ರೀಡಾ ಶಿಬಿರಗಳ ಆಯೋಜನೆಗೆ ಚಿಂತನೆ ನಡೆದಿದೆ.

    ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ: ದಸರಾ ಕ್ರೀಡಾಕೂಟ ಪ್ರತಿ ವರ್ಷ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಕ್ರೀಡಾಕೂಟ ಆಯೋಜನೆಗೊಳ್ಳದೆ ಅದಕ್ಕೆ ಸಂಬಂಧಿಸಿದ ಅನುದಾನ ಜಿಪಂನಲ್ಲಿ ಬಾಕಿ ಉಳಿದಿದೆ. ಅದನ್ನು ಬಳಸಿಕೊಂಡು ಕೂಟ ಆಯೋಜಿಸುವ ನಿಟ್ಟಿನಲ್ಲಿ ಅನುಮೋದನೆ ನೀಡುವಂತೆ ಕಳೆದ ವಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ವರ್ಷ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುತ್ತಿತ್ತು. ಆದರೆ ಚುನಾವಣೆ ನಡೆಯದೆ ಜಿಪಂ ಆಡಳಿತ ಇಲ್ಲದಿರುವುದರಿಂದ ಸಿಇಒ ಅನುಮತಿ ನೀಡಬೇಕಿದೆ. ಸುಮಾರು 35 ಲಕ್ಷ ರೂ. ಉಳಿತಾಯವಾಗಿದ್ದು, ಅದೇ ಮೊತ್ತಕ್ಕೆ ಬದಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ಮತ್ತೆ ಕಠಿಣ ನಿಯಮಾವಳಿ ಬಂದರೆ ಕಷ್ಟ: ಇಲಾಖೆ ಕ್ರೀಡಾಕೂಟ ಆಯೋಜನೆ ಮುಂದಾಗಿದೆಯಾದರೂ, ಮುಂದಿನ ದಿನಗಳಲ್ಲಿ ಕೋವಿಡ್19ಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಾವಳಿ ಜಾರಿಗೆ ಬಂದರೆ ಎಲ್ಲ ರದ್ದುಗೊಳ್ಳುವ ಸಾಧ್ಯತೆಯೂ ಇದೆ. ಒಂದು ವೇಳೆ ರದ್ದಾಗಿದ್ದೇ ಆದರೆ, ಈ ಬಾರಿ ಇಲಾಖೆಯಿಂದ ಯಾವುದೇ ಕ್ರೀಡಾಕೂಟ ಆಯೋಜಿಸಲ್ಪಡುವುದಿಲ್ಲ ಎನ್ನಬಹುದು. ಜತೆಗೆ ಈ ರೀತಿ ಕೂಟಗಳು ರದ್ದಾಗುವುದು, ಕ್ರೀಡಾಪಟುವಿನ, ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರೀಡೆಯಲ್ಲೇ ಮುಂದುವರಿಯಬೇಕು ಎನ್ನುವ ಉದ್ದೇಶ ಹೊಂದಿರುವವರು ಕೂಟಗಳಲ್ಲಿ ಭಾಗವಹಿಸಿ, ತಮ್ಮ ಇರುವಿಕೆ ಹಾಗೂ ದೈಹಿಕ ಸಾಮರ್ಥ್ಯ ಎರಡನ್ನೂ ತೋರಿಸಬೇಕಿದೆ. ರದ್ದಾದರೆ ಇಂತಹ ಅವಕಾಶ ಮತ್ತೆ ಕಳೆದು ಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಕ್ರೀಡಾಪಟುಗಳು.

    ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಕ್ರೀಡಾ ಇಲಾಖೆಯಿಂದ ಆಯೋಜನೆಗೊಳ್ಳುವ ದಸರಾ ಕ್ರೀಡಾಕೂಟ ನಡೆದಿಲ್ಲ. ಅದರ ಬದಲಾಗಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ, ತರಬೇತಿ ಶಿಬಿರಗಳ ಆಯೋಜನೆಗೆ ಬೇಕಾದ ಅನುದಾನದ ಬಿಡುಗಡೆಗೆ ಜಿಲ್ಲಾ ಪಂಚಾಯಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಲಭಿಸಿದರೆ, ಜನವರಿಯಲ್ಲಿ ಕ್ರೀಡಾಕೂಟ ಆಯೋಜಿಸಲಾಗುವುದು. ಮತ್ತೆ ಕೋವಿಡ್-19ರ ಕಠಿಣ ಮಾರ್ಗಸೂಚಿ ಬಂದರೆ ರದ್ದಾಗಲೂಬಹುದು.

    ಪ್ರದೀಪ್ ಡಿಸೋಜ
    ಉಪನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts