More

    ಅಂಗವಿಕಲೆಯ 10ನೇ ತರಗತಿ ಅಂಕಪಟ್ಟಿಯಲ್ಲಿ 2 ಅಂಕಗಳು 100 ಅಂಕಗಳಾದಾಗ…

    ಹಿಸಾರ್​: ಆಕೆ ಭಾಗಶಃ ಅಂಧತ್ವದಿಂದ ಬಳಲುತ್ತಿದ್ದಾಳೆ. ಆದರೂ ಓದಿನಲ್ಲಿ ಮುಂದು. ಹರಿಯಾಣದ ಶಾಲಾ ಶಿಕ್ಷಣ ಮಂಡಳಿ (ಬಿಎಸ್​ಎಚ್​ಇ) ಆಯೋಜಿಸಿದ್ದ 10ನೇ ತರಗತಿ ಪರೀಕ್ಷೆಗೆ ಆಕೆ ಹಾಜರಾಗಿದ್ದಳು. ಚೆನ್ನಾಗಿಯೇ ಪರೀಕ್ಷೆ ಬರೆದಿದ್ದಳು. ಆದರೆ ಫಲಿತಾಂಶ ಬಂದಾಗ ಉಳಿದೆಲ್ಲ ವಿಷಯಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳು ಬಂದಿದ್ದರೆ, ಗಣಿತದಲ್ಲಿ ಕೇವಲ 2 ಅಂಕಗಳು ಬಂದಿದ್ದು, ಆಕೆ ಫೇಲ್​ ಆಗಿದ್ದಳು.

    ಇದರಿಂದ ಬೇಸರಗೊಂಡ ಆಕೆಯ ತಂದೆ ಪುತ್ರಿಯ ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಿದ್ದರು. ಅಚ್ಚರಿ ಎಂದರೆ, ಆ ಬಾಲಕಿ ಗಣಿತದಲ್ಲಿ 100 ಅಂಕ ಗಳಿಸಿದ್ದಳು! ಮೌಲ್ಯಮಾಪಕರು ಮಾಡಿದ್ದ ಎಡವಟ್ಟಿನಿಂದಾಗಿ 100 ಅಂಕಗಳು ಕೇವಲ 2 ಅಂಕಗಳಾಗಿ ಮಾರ್ಪಟ್ಟಿದ್ದವು!

    ಭಾಗಶಃ ಅಂಧತ್ವದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಾಗ ಉತ್ತರ ಪತ್ರಿಕೆಗಳ ಮೇಲೆ ಅಂಧ ವಿದ್ಯಾರ್ಥಿ ಎಂದು ನಮೂದಿಸಿರುತ್ತಾರೆ. ಇಂಥವರ ಉತ್ತರಪತ್ರಿಕೆ ಮೌಲ್ಯಮಾಪನ ಮಾಡುವಾಗ ಅದನ್ನು ಆಧರಿಸಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಆದರೆ, ಇದು ತಿಳಿಯದ ಮೌಲ್ಯಮಾಪಕರೊಬ್ಬರು ಹರಿಯಾಣದ ಹಿಸಾರ್​ನ ಸರ್ಕಾರಿ ಹಿರಿಯ ಪ್ರೌಢಶಿಕ್ಷಣ ಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಅವರ ಗಣಿತ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿ ಕೇವಲ 2 ಅಂಕಗಳನ್ನು ಕೊಟ್ಟಿದ್ದರು.

    ಇದನ್ನೂ ಓದಿ: ಮುನ್ನಾರ್​ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿಕೆ; ಅವಶೇಷದಡಿಯಿಂದ 5 ಶವಗಳು ಹೊರಕ್ಕೆ

    ಸ್ವತಃ ಗಣಿತ ಶಿಕ್ಷಕರಾಗಿರುವ ಅವರ ತಂದೆ ಛಜ್ಜುರಾಂ ಅವರು ಮರುಮೌಲ್ಯಮಾಪನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿನಿಯ ಉತ್ತರಪತ್ರಿಕೆ ಮೌಲ್ಯಮಾಪನ ಮಾಡುವಾಗ ಮೌಲ್ಯಮಾಪಕರು ಲೋಪ ಎಸಗಿರುವುದು ಕಂಡುಬಂದಿತು. ಬಳಿಕ ಅಂಧ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ರೀತಿಯಲ್ಲಿ ಮೌಲ್ಯಮಾಪನ ಮಾಡಿದಾಗ ಸುಪ್ರಿಯಾ 100ಕ್ಕೆ 100 ಅಂಕ ಗಳಿಸಿದ್ದಳು.

    ನನ್ನ ಪುತ್ರಿಯ ಉತ್ತರಪತ್ರಿಕೆಯ ಮರುಮೌಲ್ಯಮಾಪನ ಕಾರ್ಯಕ್ಕಾಗಿ ನಾನು 5 ಸಾವಿರ ರೂ. ಖರ್ಚು ಮಾಡಿದ್ದೇನೆ. ಸ್ವತಃ ನಾನು ಗಣಿತದ ಶಿಕ್ಷಕನಾಗಿದ್ದು, ನನ್ನ ಮಗಳ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇತ್ತು. ಉಳಿದೆಲ್ಲ ವಿಷಯಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದವಳು ಗಣಿತದಲ್ಲಿ ಕೇವಲ 2 ಅಂಕ ಗಳಿಸಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕಾಗಿ ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಿದ್ದೆ. ಈಗ ಅವರಿಗೆ 100 ಅಂಕ ಸಿಕ್ಕಿದೆ ಎಂದು ಸುಪ್ರಿಯಾಳ ತಂದೆ ಛಜ್ಜುರಾಂ ಹೇಳಿದ್ದಾರೆ.

    ನನಗೆ ಗಣಿತದಲ್ಲಿ ಕೇವಲ 2 ಅಂಕಗಳು ಬಂದಿವೆ ಎಂಬುದನ್ನು ನಾನು ನಂಬದೇ ಹೋದೆ. ನನಗೆ ಆಘಾತವಾಗಿತ್ತು. ನನ್ನ ತಂದೆ ಮರುಮೌಲ್ಯಮಾಪನಕ್ಕೆ ಮನವಿ ಮಾಡಿಕೊಂಡಿದ್ದರಿಂದ ನನಗೆ 100 ಅಂಕ ಸಿಕ್ಕಿದೆ. ನನ್ನಂಥ ಬೇರಾವುದೇ ಅಂಗವಿಕಲ ವಿದ್ಯಾರ್ಥಿಗಳಿಗೂ ಇಂಥ ಅನ್ಯಾಯ ಆಗಬಾರದು ಎಂದು ಸುಪ್ರಿಯಾ ಹೇಳಿದ್ದಾರೆ.

    ಕರಿಪ್ಪೂರ್ ವಿಮಾನ ನಿಲ್ದಾಣದ ರನ್​ ವೇ 10 ಸುರಕ್ಷಿತವಾಗಿಲ್ಲ: 2011ರಲ್ಲೇ ತಜ್ಞರ ತಂಡದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts