More

  ಜೀವನದಿ ಕಾವೇರಿಗೆ ವಿಶೇಷ ಪೂಜೆ

  ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಪ್ರಾರ್ಥಿಸಿ ಜೀವನದಿ ಕಾವೇರಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

  ಪಟ್ಟಣದ ಸ್ನಾನಘಟ್ಟದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಕಾವೇರಿ ಕಣಿವೆಯಲ್ಲಿ ಮಳೆಯಿಲ್ಲದೆ ಎದುರಾಗಿರುವ ಬರಗಾಲ ನಿವಾರಣೆಗೆ, ಕೆ.ಆರ್.ಸಾಗರ ಭರ್ತಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
  ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಮಳೆಯಿಲ್ಲದೆ ಹಿಂದೆಂದೂ ಕಾಣದ ರೀತಿ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಕನ್ನಂಬಾಡಿ ಅಣೆಕಟ್ಟೆಯಲ್ಲಿ ಸಂಗ್ರಹವಿದ್ದ ನೀರನ್ನು ಸರಿಯಾಗಿ ನಿರ್ವಹಣೆ ಮಾಡದೆ ತಮಿಳುನಾಡಿಗೆ ಬೇಕಾಬಿಟ್ಟಿ ಹರಿಸಿ, ರೈತರು ಹಾಗೂ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ರಾಜ್ಯ ಸರ್ಕಾರ ಕನ್ನಡಿಗರನ್ನು ಕೈಬಿಟ್ಟಿದ್ದರು ಕಾವೇರಿ ತಾಯಿ ಕೈಹಿಡಿಯಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

  ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿದ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಂಡ್ಯ ಕ್ಷೇತ್ರದಲ್ಲಿ ನಾಡಿನ ರೈತರು ಮತ್ತು ಬಡಜನರ ಪರವಾದ ಕುಮಾರಸ್ವಾಮಿ ಅವರು ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ, ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದೆ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿದೆ. ಎಚ್.ಡಿ.ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗುವ ಜತೆಗೆ ನಾಡಿನ ಜೀವನದಿ ಕಾವೇರಿ ಸಮಸ್ಯೆಗೆ ದನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಬಳಿಕ ಪಟ್ಟಣದ ಮುಖ್ಯರಸ್ತೆ, ನ್ಯಾಯಾಲಯ ಸಂಕೀರ್ಣ, ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಸಾರ್ವಜನಿಕರನ್ನು ಭೇಟಿ ಮಾಡಿ ಪ್ರಚಾರ ನಡೆಸಿದರು.
  ಮುಖಂಡರಾದ ಬಿ.ಸಿ.ಕೃಷ್ಣೇಗೌಡ, ಉಂಡುವಾಡಿ ಮಹದೇವು, ಎಂ.ವಿ.ಕೃಷ್ಣ, ದರ್ಶನ್, ರವಿಲಕ್ಷ್ಮಣ, ಅಚ್ಚಪ್ಪನಕೊಪ್ಪಲು ರಮೇಶ್, ಜಯರಾಮೇಗೌಡ, ಸಿದ್ದೇಗೌಡ, ಶ್ರೀಧರ್, ಮಹಾಲಿಂಗು, ರಾಮಚಂದ್ರು, ಸಿದ್ದೇಗೌಡ, ಚಾಮರಾಜು, ದೊಡ್ಡೇಗೌಡನಕೊಪ್ಪಲು ರವಿ, ಕೆಂಪೇಗೌಡ, ಸಿದ್ದಪ್ಪ, ಅಚ್ಚಪ್ಪನಕೊಪ್ಪಲು ಕೃಷ್ಣ, ಮಹದೇವಪುರ ಸಿದ್ದಪ್ಪ, ಗಿರೀಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts