More

    ಹೊಡಿ ಮಗಾ, ಹೊಡಿ ಮಗಾ; ಇನ್ನೆರಡೇ ದಿನ ಗುರೂ.. ಐಪಿಎಲ್ ವಾರ್ ಶುರು!

    ಕ್ರಿಕೆಟ್ ಅಂದ್ರೇನೇ ಹಾಗೆ… ಭಾರತೀಯರಿಗೆ ಏನೋ ಒಂಥರಾ ಹುಚ್ಚು. ಕ್ರಿಕೆಟ್ ಮ್ಯಾಚ್ ಇದ್ದರೆ ಊಟ, ತಿಂಡಿ, ನಿದ್ದೆ ಯಾವುದೂ ಬೇಡ! ಅದರಲ್ಲೂ ಯುವ ಮನಸ್ಸುಗಳಂತೂ ಕ್ರಿಕೆಟ್ ಅನ್ನು ಅಷ್ಟೊಂದು ಹಚ್ಚಿ ಕೊಂಡಿವೆ. ಇದಕ್ಕೆ ಮೂಲ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಮಹಾಮಾಯೆ. ದಿನದ ಕೆಲಸ ಮುಗಿದ ಬಳಿಕ ಸಂಜೆ ಮನೆ ಮಂದಿಯನ್ನೆಲ್ಲಾ ಒಂದೆಡೆಗೆ ಸೇರಿಸುತ್ತದೆ ಐಪಿಎಲ್. ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಎಲ್ಲರೂ ಈ ಆಟದ ರೋಚಕತೆಯನ್ನು ಸವಿಯುತ್ತಾರೆ. ದೇಶದಾದ್ಯಂತ ಕರೊನಾ ಎರಡನೇ ಅಲೆಯ ಅಬ್ಬರದ ನಡುವೆಯೂ ಈ ಚುಟುಕು ಕ್ರಿಕೆಟ್ ಮಹಾಸಮರ ಏ. 9ರಿಂದ ಆರಂಭವಾಗಲಿದೆ.

    | ರಘುನಾಥ್ ಡಿ.ಪಿ.

    ಐಪಿಎಲ್ ಕೇವಲ ಕ್ರೀಡಾ ಲೀಗ್ ಅಲ್ಲ. ಅದೊಂದು ದೊಡ್ಡ ಉದ್ಯಮ. ಜತೆಗೆ ಮನರಂಜನಾತ್ಮಕ ಕ್ರೀಡೆ. ಮೈದಾನದಲ್ಲಿ ಆಟಗಾರನೊಬ್ಬ ಬೌಂಡರಿ, ಸಿಕ್ಸರ್​ಗಳ ಮೂಲಕ ಅಬ್ಬರಿಸುತ್ತಿದ್ದರೆ ಪ್ರೇಕ್ಷಕನಿಗೆ ರಸದೂಟ ಉಂಡಷ್ಟೇ ತೃಪ್ತಿ. ಭಾರತೀಯರ ಪಾಲಿಗೆ ಈ ಲೀಗ್ ಕಳೆದ 13 ವರ್ಷಗಳಿಂದ ವಾರ್ಷಿಕ ಕ್ರೀಡಾ ಸಂಭ್ರಮದಂತೆ ಬಂದು ಹೋಗುತ್ತದೆ. ಕರೊನಾ ಕಾಲದಲ್ಲೇ ಎರಡನೇ ಲೀಗ್ ಆಯೋಜನೆಗೆ ಬಿಸಿಸಿಐ ಮುಂದಾಗಿದೆ. ಕಳೆದ ವರ್ಷ ಲೀಗ್ ಮುಂದೂಡಿಕೆಯಾಗಿದ್ದರೂ ಬಳಿಕ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಯುಎಇಗೆ ಸ್ಥಳಾಂತರಗೊಂಡಿತ್ತು. ಅದಾದ ನಂತರ ಇದೀಗ ಭಾರತದಲ್ಲೇ 2021ರ ಲೀಗ್ ನಡೆಸಲು ನಿರ್ಧರಿಸಿ, ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ಟೋಬರ್-ನವೆಂಬರ್​ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಗೆ ಈ ಲೀಗ್ ದಿಕ್ಸೂಚಿ. ಕರೊನಾ ನಡುವೆಯೂ ಲೀಗ್ ಆಯೋಜಿಸುವ ದೊಡ್ಡ ಸವಾಲು ಬಿಸಿಸಿಐ ಮುಂದಿತ್ತು. ದಿನದಿಂದ ದಿನಕ್ಕೆ ವೈರಸ್ ಅಬ್ಬರಿಸುತ್ತಿದ್ದರೂ ಬಿಸಿಸಿಐ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಐಪಿಎಲ್ 2021ಕ್ಕೆ ಅಣಿಯಾಗಿದೆ. ಕರೊನಾ ಭೀತಿಯಿಂದಾಗಿ ಇತಿಮಿತಿಯೊಳಗೆ ಲೀಗ್ ಆಯೋಜಿಸಲಿರುವ ಬಿಸಿಸಿಐ ಕೇವಲ 6 ನಗರಗಳಿಗಷ್ಟೇ ಸೀಮಿತಗೊಳಿಸಿದೆ. ಕಳೆದ ಬಾರಿ ಅರಬ್ ರಾಷ್ಟ್ರದ ಮೂರು ನಗರಗಳಲ್ಲಿ (ದುಬೈ, ಶಾರ್ಜಾ, ಅಬುಧಾಬಿ) ಲೀಗ್ ಆಯೋಜಿಸಲು ಬಿಸಿಸಿಐ ಯುಎಇ ಕ್ರಿಕೆಟ್ ಸಂಸ್ಥೆಗೆ 100 ಕೋಟಿ ರೂ. ಮೊತ್ತವನ್ನು ಬಾಡಿಗೆ ರೂಪದಲ್ಲಿ ನೀಡಿತ್ತು. ಈ ಮೊತ್ತವನ್ನು ಉಳಿಸುವ ಸಲುವಾಗಿ ಭಾರತದಲ್ಲೇ ಲೀಗ್ ಆಯೋಜಿಸಲು ನಿರ್ಧರಿಸಿರುವ ಬಿಸಿಸಿಐ, ಪ್ರೇಕ್ಷಕರಿಗೆ ಅವಕಾಶ ನೀಡದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಬೆಂಗಳೂರು, ಕೋಲ್ಕತ, ಮುಂಬೈ, ಚೆನ್ನೈ, ದೆಹಲಿ ಹಾಗೂ ಅಹಮದಾಬಾದ್​ನಲ್ಲಿ ಪಂದ್ಯಗಳು ನಡೆಯಲಿವೆ. ಅಹಮದಾಬಾದ್​ನಲ್ಲಿ ನೂತನವಾಗಿ ನಿರ್ವಿುಸಲಾಗಿರುವ 1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

    ಟಿವಿ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ: ಐಪಿಎಲ್​ನಿಂದಾಗಿ ಈ ಬಾರಿಯೂ ಟಿವಿ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. 2019ರ ಲೀಗ್​ಗೆ ಹೋಲಿಸಿದರೆ ಯುಎಇಯಲ್ಲಿ ನಡೆದ ಲೀಗ್​ಗೆ ವೀಕ್ಷಕರ ಸಂಖ್ಯೆ ಶೇಕಡ 24 ಏರಿಕೆಯಾಗಿತ್ತು. 2020ರ ಲೀಗ್​ಅನ್ನು ಸುಮಾರು 20 ಕೋಟಿ ಜನರು ವೀಕ್ಷಿಸಿದ್ದರು. ಈ ಬಾರಿ ಬೇಸಿಗೆಯಲ್ಲಿ ನಡೆಯುತ್ತಿರುವುದು ಹಾಗೂ ಸ್ಟೇಡಿಯಂಗಳಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲದಿರುವ ಕಾರಣ ವೀಕ್ಷಕರ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಗಳಿವೆ. ಅಲ್ಲದೆ, ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್​ ಸಮೂಹ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದೆ.

    ಕೋಟಿ ಕುಳಗಳ ಮೇಲೆ ಹೆಚ್ಚಿದ ನಿರೀಕ್ಷೆ: ಐಪಿಎಲ್​ನಲ್ಲಿ ಸ್ಟಾರ್​ಗಿರಿಗೇನೂ ಕೊರತೆ ಇಲ್ಲ. ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಪಾಲ್ಗೊಳ್ಳುವ ಈ ಲೀಗ್​ನಲ್ಲಿ ಪ್ರತಿಯೊಬ್ಬರೂ ಅಭಿಮಾನಿ ಪಡೆ ಹೊಂದಿದ್ದಾರೆ. ಆದರೆ, ಈ ಬಾರಿ ವಿಶೇಷ ಎಂದರೆ ಲೀಗ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಸೇಲಾಗಿರುವ ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್. ಕಳೆದ ಬಾರಿ ಆರ್​ಸಿಬಿಯಲ್ಲಿ ಆಡಿದ್ದ ಕ್ರಿಸ್ 16.25 ಕೋಟಿ ರೂ.ಗೆ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಲೀಗ್ ಇತಿಹಾಸದಲ್ಲಿಯೇ ಇದು ದೊಡ್ಡ ಮೊತ್ತ. ಆರ್​ಸಿಬಿ ತಂಡದ ಕೈಲ್ ಜೇಮಿಸನ್ (15 ಕೋಟಿ ರೂ.), ಗ್ಲೆನ್ ಮ್ಯಾಕ್ಸ್​ವೆಲ್ (14.25 ಕೋಟಿ ರೂ.) ಈ ಬಾರಿಯ ಪ್ರಮುಖ ಆಕರ್ಷಣೆ. ಮಧ್ಯಮ ಕ್ರಮಾಂಕದಲ್ಲಿ ಆರ್​ಸಿಬಿ ತಂಡಕ್ಕೆ ಈ ಜೋಡಿ ಆಸರೆಯಾಗಬೇಕಿದೆ. ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಜೇ ರಿಚರ್ಡ್​ಸನ್ (14 ಕೋಟಿ ರೂ.) ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

    ಈ ಬಾರಿ ನಮ್ಮ ಆರ್​ಸಿಬಿಗೆ ಆನೆ ಬಲ ಬಂದಿರೋದು ಮ್ಯಾಕ್ಸ್​ವೆಲ್​ನಿಂದ. ದೇವದತ್ ಪಡಿಕಲ್ ಫಾಮರ್್​ನಲ್ಲಿದ್ದಾರೆ. ಕೊಹ್ಲಿ ಮತ್ತೆ ಪಡಿಕಲ್ ಓಪನಿಂಗ್​ನಲ್ಲಿರೋದೆ ಒಂದು ಪಾಸಿಟಿವ್ ವೈಬ್. ಈ ಬಾರಿ ಬೆಂಗಳೂರಲ್ಲಿ ಆರ್​ಸಿಬಿ ಮ್ಯಾಚ್ ಇಲ್ಲ. ತವರು ಮನೆ ಬದಲು ಗಂಡನ ಮನೆಯಲ್ಲೇ ಮ್ಯಾಚ್ ಇಟ್ಕೊಂಡಿದಾರೆ! ತವರು ಮನೆಯಲ್ಲಿದ್ದರೆ, ನಮ್ಮವರ ಎದುರು ಆಡುವ ಅಂಜಿಕೆ ಇರುತ್ತೆ, ಆದರೆ ಗಂಡನ ಮನೆಯಲ್ಲಿದ್ದರೆ ಆ ಸಮಸ್ಯೆ ಇರಲ್ಲ. ಹಾಗಾಗಿ ಈ ಸಲ ಕಪ್ ನಮ್ಮದೇ ಎನ್ನುವ ನಂಬಿಕೆಯಿದೆ.

    | ಹರೀಶ್ ಅರಸು ಬ್ಲೀಡ್ ನಮ್ಮ ಆರ್​ಸಿಬಿ (ಆರ್​ಸಿಬಿ ಅಭಿಮಾನಿ ತಂಡ) ಸ್ಥಾಪಕ

    ಕನ್ನಡಿಗರ ಪಾರುಪತ್ಯ: ಈ ಬಾರಿಯೂ ಲೀಗ್​ನಲ್ಲಿ ಕನ್ನಡಿಗರ ಪಾರುಪತ್ಯ ಮುಂದುವರಿದಿದೆ. ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದರೆ, ಮಯಾಂಕ್ ಅಗರ್ವಾಲ್ ಅದೇ ತಂಡದಲ್ಲಿ ಮುಂದುವರಿದಿದ್ದಾರೆ. ಮುಂಬೈ ಹೊರತುಪಡಿಸಿ ಉಳಿದ ಎಲ್ಲ ತಂಡಗಳಲ್ಲೂ ಕನ್ನಡಿಗರು ಸ್ಥಾನ ಪಡೆದಿರುವುದು ವಿಶೇಷ. ಅಲ್ಲದೆ, ಮಾಜಿ ಆಟಗಾರ ಅನಿಲ್ ಕುಂಬ್ಳೆ ಪಂಜಾಬ್ ತಂಡಕ್ಕೆ ಮಾರ್ಗದರ್ಶಕರಾಗಿ ಮುಂದುವರಿದಿದ್ದಾರೆ.

    ದಾಖಲೆ ಬರೆದಿರುವ ಗೌತಮ್: ಕರ್ನಾಟಕದ ಕೆ. ಗೌತಮ್ ಮೂಲ ಬೆಲೆ 20 ಲಕ್ಷ ರೂ. ಇದ್ದರೂ 9.25 ಕೋಟಿ ರೂ.ಗೆ ಸಿಎಸ್​ಕೆ ತಂಡಕ್ಕೆ ಸೇಲಾಗುವ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ರಾಷ್ಟ್ರೀಯ ತಂಡದ ಆಟಗಾರ ಎನಿಸಿಕೊಂಡಿದ್ದಾರೆ. ಸಿಎಸ್​ಕೆಯಲ್ಲಿ ಇದುವರೆಗೂ ಕನ್ನಡಿಗರಿಗೆ ಮಣೆ ಹಾಕಿದ್ದೇ ಇಲ್ಲ. ಇದೀಗ ದುಬಾರಿ ಹಣ ಕೊಟ್ಟು ಗೌತಮ್ೆ ಮಣೆ ಹಾಕಿದೆ. ಸ್ಪಿನ್ ಆಲ್ರೌಂಡರ್ ಆಗಿರುವ ಗೌತಮ್ಂದ ಈ ಬಾರಿ ಉತ್ತಮ ನಿರ್ವಹಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts