More

    ಬ್ಯಾಂಕ್ ಸಿಬ್ಬಂದಿ ಧೋರಣೆಗೆ ಕಿಡಿ

    ಗುಂಡ್ಲುಪೇಟೆ ಪಟ್ಟಣದಲ್ಲಿ ಎಸ್‌ಬಿಐನ ಎರಡು ಬ್ಯಾಂಕ್ ಶಾಖೆಗಳಿದ್ದರೂ ಇಲ್ಲಿ ಗ್ರಾಹಕರಿಗೆ ಸಮರ್ಪಕ ಸೇವೆ ದೊರೆಯದೆ ಪರಿತಪಿಸುವಂತಾಗಿದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ದಿನಗಟ್ಟಲೇ ಆಹಾರ, ನೀರು ಇಲ್ಲದೇ ಸಾಲುಗಟ್ಟಿ ನಿಲ್ಲಬೇಕಾಗಿದೆ ಎಂದು ಫಲಾನುಭವಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರದ ಯೋಜನೆಯ ಹಣಕಾಸು ಪಡೆಯಲು ಪ್ರತಿಯೊಬ್ಬರೂ ಬ್ಯಾಂಕ್‌ಗಳಲ್ಲಿ ಕೆವೈಸಿ ಮಾಡಿಸಬೇಕಾಗಿದೆ. ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಹೆಚ್ಚುವರಿ ಕೌಂಟರ್ ತರೆದು ನಾಗರಿಕರಿಗೆ ಅನುಕೂಲ ಮಾಡಿಕೊಡುವ ಬದಲು ಇರುವ ಒಂದೇ ಕೌಂಟರ್‌ನಲ್ಲಿಯೇ ಎಲ್ಲ ವ್ಯಹಹಾರಗಳನ್ನೂ ಮಾಡುತ್ತಿದ್ದಾರೆ. ಇದರಿಂದ ಎಲ್ಲ ಬ್ಯಾಂಕುಗಳಲ್ಲಿಯೂ ಗ್ರಾಹಕರು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಅಲ್ಲದೆ ತಮ್ಮ ಖಾತೆಗಳಿಗೆ ಹಣ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ಬರುವ ಗ್ರಾಹಕರ ಪಾಡು ಹೇಳತೀರದು. ನಿಮ್ಮ ಖಾತೆಗಳಿಗೆ ಪಾನ್ ಹಾಗೂ ಅಧಾರ್ ಸಂಖ್ಯೆ ಲಿಂಕ್ ಮಾಡಿಸಿಲ್ಲ, ಮಾಡಿಸಿಕೊಂಡು ಬನ್ನಿ ಎಂದು ಒಂದು ಕೌಂಟರ್‌ನಿಂದ ಮತ್ತೊಂದು ಕೌಂಟರ್‌ಗೆ ಜನರನ್ನು ಅಲೆಸುತ್ತಿದ್ದಾರೆ. ಜನರು ಕೌಂಟರ್‌ನಲ್ಲಿ ಕಾದು ನಿಂತಿದ್ದರೂ ಸಿಬ್ಬಂದಿ ಪರಿಗಣಿಸುವುದಿಲ್ಲ. ಇದರಿಂದ ಜನರು ಹಣಕಾಸು ಪಡೆಯಲು ಸರತಿ ಸಾಲಿನಲ್ಲಿ ನಿಂತು ನಿತ್ರಾಣಗೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಸರ್ವರ್ ಸಮಸ್ಯೆಯಿದೆ, ಸಿಬ್ಬಂದಿ ಕೊರತೆಯಿದೆ , ಬೇಕಾದರೆ ಖಾತೆಯನ್ನೇ ಬೇರೆ ಬ್ಯಾಂಕ್‌ಗಳಿಗೆ ಬದಲಾವಣೆ ಮಾಡಿಕೊಳ್ಳಿ ಎಂದು ಉತ್ತರಿಸುತ್ತಾರೆ. ಇದರಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಹಣವನ್ನು ಪಡೆಯಲು ಬರುವ ಜನರು ದಿನಗಟ್ಟಲೆ ಕಾದರೂ ಪ್ರಯೋಜನವಾಗದೆ ಹಿಂದಿರುಗುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಹೆಚ್ಚುವರಿ ಕೌಂಟರ್ ತೆರೆದು ಗ್ರಾಹಕರಿಗೆ ಸಕಾಲದಲ್ಲಿ ಸೇವೆ ದೊರಕುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕಳೆದ ವಾರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೃಹ ಲಕ್ಷ್ಮಿ, ಪಡಿತರ ಕಾರ್ಡ್ ಸಮಸ್ಯೆ, ಕೆವೈ ಸಮಸ್ಯೆ ಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಬ್ಯಾಂಕ್‌ಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವ ಕೆಲಸ ಮಾಡಬೇಕು ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಿ ಬ್ಯಾಂಕ್‌ಗೆ ಬರುವ ಜನರನ್ನು ದಿನಗಟ್ಟಲೇ ಕಾಯಿಸದೆ ಸಕಾಲದಲ್ಲಿ ಹಣಕಾಸು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದರೂ ಬ್ಯಾಂಕ್ ಸಿಬ್ಬಂದಿ ಸೊಪ್ಪು ಹಾಕುತ್ತಿಲ್ಲ.
    * ಭೈರೇಶ್ ಗಾಣಿಗ್, ಗುಂಡ್ಲುಪೇಟೆ ಪಟ್ಟಣ

    ಕೈಗಳಲ್ಲಿ ಒರಟು ಕೆಲಸ ಮಾಡುವ ಗ್ರಾಮಾಂತರ ಪ್ರದೇಶಗಳ ಜನರು, ಕಾರ್ಮಿಕರು ಮುಂತಾದವರ ಕೈಬೆರಳಚ್ಚುಗಳು ಸರಿಯಾಗಿ ಮೂಡದ ಪರಿಣಾಮ ಕೆವೈಸಿ ಮಾಡುವುದು ವಿಳಂಬವಾಗುತ್ತಿದೆ. ಪ್ರತಿಯೊಬ್ಬರೂ 10 ವರ್ಷಕ್ಕೊಮ್ಮೆ ತಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳದಿದ್ದರೆ ಕೆವೈಸಿ ಮಾಡುವಾಗ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ 10 ವರ್ಷಗಳಿಗೊಮ್ಮೆ ಆಧಾರ್ ಕೇಂದ್ರಗಳಲ್ಲಿ ತಮ್ಮ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಕೊಳ್ಳುವುದರಿಂದ ಸಮಸ್ಯೆ ತಡೆಗಟ್ಟಬಹುದು. ಬ್ಯಾಂಕ್‌ಗಳಿಗೆ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿದ್ದು ಸದ್ಯದಲ್ಲಿಯೇ ನಿಯೋಜನೆ ಆಗಲಿದೆ.
    * ಮಹೇಶ್, ರೀಜನಲ್ ಮ್ಯಾನೇಜರ್, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts