More

    ನಿರ್ದಿಷ್ಟ ಮಾರ್ಗಗಳಲ್ಲಿ ರೈಲು ಸಂಚಾರ ನಿರೀಕ್ಷೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಪ್ರಥಮ ಹಂತದ ಲಾಕ್‌ಡೌನ್ ನಂತರ ಬಿಗು ಮುನ್ನೆಚ್ಚರಿಕೆಯಲ್ಲಿ ನಿರ್ದಿಷ್ಟ ಮಾರ್ಗಗಳಲ್ಲಿ ನಿಬಂಧನೆಗಳೊಂದಿಗೆ ಕೆಲ ರೈಲುಗಳ ಸಂಚಾರ ಆರಂಭಕ್ಕೆ ಇಲಾಖೆ ಸಿದ್ಧತೆ ನಡೆಸಿದೆ.
    ಲಾಕ್‌ಡೌನ್ ಘೋಷಣೆ ಸಂದರ್ಭ ದೇಶದ ವಿವಿಧೆಡೆ ಲಕ್ಷಾಂತರ ಮಂದಿ ಸಿಲುಕಿದ್ದು, ಕೆಲವರು ಇನ್ನೂ ಊರು ತಲುಪಿಲ್ಲ. ಕೆಲ ಕಾರ್ಮಿಕರು ಇನ್ನೂ ನೂರಾರು ಕಿ.ಮೀ.ನಡೆದುಕೊಂಡೇ ಊರು ತಲುಪುವ ಯತ್ನದಲ್ಲಿದ್ದಾರೆ. ಕೆಲವರು ಸರ್ಕಾರದ ತಾತ್ಕಾಲಿಕ ವಸತಿ ಕೇಂದ್ರದಲ್ಲಿದ್ದಾರೆ. ಮುಖ್ಯವಾಗಿ ಇಂಥವರ ತುರ್ತು ಅಗತ್ಯ ಪೂರೈಸುವುದು ಈ ರೈಲು ಸೇವೆಯ ಮುಖ್ಯ ಉದ್ದೇಶ.
    ಈ ಅವಧಿಯಲ್ಲಿ ರೈಲು ಸೇವೆ ಆರಂಭಿಸಬೇಕಾದ ಅಗತ್ಯ ಏನು? ನಿಭಾಯಿಸುವ ಬಗೆ ಹೇಗೆ? ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎನ್ನುವ ಕುರಿತು ಎಲ್ಲ ವಲಯಗಳ ಮಹಾ ಪ್ರಬಂಧಕರಿಂದ(ಜಿಎಂ) ರೈಲ್ವೇ ಮಂಡಳಿ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದೆ.
    ಪ್ರಧಾನ ಮಂತ್ರಿಯವರು ಏಪ್ರಿಲ್ 11ರಂದು ದೇಶದ ಎಲ್ಲ ಮುಖ್ಯಮಂತ್ರಿಗಳ ಜತೆ ಪ್ರಸಕ್ತ ಪರಿಸ್ಥಿತಿ ಸಮಾಲೋಚನೆ ನಡೆಸಲಿದ್ದು ಬಳಿಕವಷ್ಟೇ ಈ ಕುರಿತು ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ರೆಗ್ಯುಲರ್ ರೈಲು ಸೇವೆಯಲ್ಲ
    ಉದ್ದೇಶಿತ ರೈಲು ರೆಗ್ಯುಲರ್ ಸೇವೆ ನೀಡುದಿಲ್ಲ. ಅನುಮತಿ ದೊರೆತರೆ ಕೆಲ ರೈಲುಗಳು ನಿರ್ದಿಷ್ಟ ಉದ್ದೇಶಕ್ಕೆ ಕೆಲ ಪ್ರಯಾಣಗಳನ್ನಷ್ಟೇ ಮಾಡಬಹುದು. ಇಲ್ಲಿ ವಿಮಾನ ಪ್ರಯಾಣ ಮಾದರಿಯಲ್ಲಿ ಬಿಗು ಮುನ್ನೆಚ್ಚರಿಕೆ ತಪಾಸಣೆಗಳನ್ನು ನಡೆಸಲಾಗುವುದು .ರೈಲು ಹೊರಡುವ ಮತ್ತು ತಲುಪುವ ಉಭಯ ತಾಣಗಳು ಕೋವಿಡ್-19 ರೆಡ್ ಝೋನ್ ಮುಕ್ತವಾಗಿಬೇಕು. ಅಂತಹ ನಗರಗಳ ನಡುವೆ ಮಾತ್ರ ಪ್ರಸ್ತಾವಿತ ಸೇವೆ ಸಾಧ್ಯವಾಗಬಹುದು. ಯಶವಂತಪುರ(ಬೆಂಗಳೂರು)-ಹೌರ ನಡುವೆ ಟೈಮ್ ಟೇಬಲ್ ಪಾರ್ಸಲ್ ವ್ಯಾನ್ ಆರಂಭಿಸಲಾಗಿದೆ. ಇದೊಂದು ಗೂಡ್ಸ್ ಮಾದರಿ ರೈಲು. ಆದರೆ ವೇಳಾಪಟ್ಟಿ ನಿಗದಿಪಡಿಸಿದ ಗೂಡ್ಸ್ ರೈಲು (ಪಾರ್ಸೆಲ್ ವ್ಯಾನ್) ಪರಿಕಲ್ಪನೆ ಹೊಸತು. ಉಳಿದಂತೆ ಈಗ ಸರಕು ಸಾಗಾಟದ ರೈಲುಗಳ ಓಡಾಟಕ್ಕೂ ಅಡ್ಡಿ ಇಲ್ಲ.

    ಕರಾವಳಿಯಲ್ಲಿ ಬಾಕಿಯಾದವರಿಗೆ ಲಾಭ
    ಹೊರ ರಾಜ್ಯ ಹಾಗೂ ಉತ್ತರ ಕರ್ನಾಟಕದ ದೊಡ್ಡ ಸಂಖ್ಯೆಯ ಕಾರ್ಮಿಕರು ಕರಾವಳಿಯಲ್ಲಿ ಬಾಕಿಯಾಗಿದ್ದಾರೆ. ಪ್ರಸ್ತಾವಿತ ರೈಲು ಸೇವೆಯಿಂದ ಅವರಿಗೆ ಲಾಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಹೊರಗಿನ 25 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಕರಾವಳಿಯ ಜನರು ಮುಖ್ಯವಾಗಿ ನೆಲೆಸಿರುವ ಮಹಾರಾಷ್ಟ್ರ, ಚೆನ್ನೈ, ನವದೆಹಲಿ ಮುಂತಾದ ನಗರಗಳಲ್ಲಿ ಕರೊನಾ ಸೋಂಕು ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಿರುವ ಕಾರಣ ಆ ನಗರಗಳ ನಡುವೆ ಈಗ ರೈಲು ಸೇವೆ ಸಾಧ್ಯತೆ ಕಡಿಮೆ.

    ಥರ್ಮಲ್ ಸ್ಕಾೃನಿಂಗ್ ಸಹಿತ ಹಲವು ನಿರ್ಬಂಧ
    ಉದ್ದೇಶಿತ ತಾತ್ಕಾಲಿಕ ರೈಲು ಸೇವೆ ಸಾಧ್ಯವಾದರೆ ಕಠಿಣ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.
    ಕೆಲವು ಪ್ರದೇಶಗಳ ನಡುವೆ ಮಾತ್ರ ಸಂಚಾರ. ವಿಮಾನ ಪ್ರಯಾಣ ಮಾದರಿ ನಿಗದಿಪಡಿಸುವ ಕಾಲಾವಧಿ ಮೊದಲೇ ಅರ್ಹ ಪ್ರಯಾಣಿಕರು ರೈಲು ನಿಲ್ದಾಣ ತಲುಪಬೇಕು. ಥರ್ಮಲ್ ಸ್ಕಾೃನಿಂಗ್ ಸಹಿತ ಪೂರಕ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಬೇಕು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಬೋಗಿಗಳ ಒಳಗೆ ಕಡಿಮೆ ಪ್ರಯಾಣಿಕರಿಗೆ ಅವಕಾಶ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಇತ್ಯಾದಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts