

ನವದೆಹಲಿ: ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಸೇರಿದಂತೆ 10 ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಯುಎಇಯಲ್ಲಿ ನಿಗದಿಯಾಗಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದು ಅನುಮಾನವಾಗಿದೆ. ಕರೊನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಮುಂದುವರಿದಿದ್ದು, ಅಂತಾರಾಷ್ಟ್ರೀಯ ವಿಮಾನಯಾನ ಸಂಪೂರ್ಣ ಬಂದ್ ಆಗಿರುವುದೇ ಈ ಗೊಂದಲಕ್ಕೆ ಕಾರಣ. ವಿಮಾನಯಾನ ಪುನರಾರಂಭದ ಕುರಿತು ಸೂಕ್ತ ಮಾಹಿತಿ ಕೂಡ ಲಭ್ಯವಿಲ್ಲ. ಆಗಸ್ಟ್ 18 ರಿಂದ ಆರಂಭವಾಗಲಿರುವ ಸಿಪಿಎಲ್‌ನಿಂದಲೂ ಕ್ರಿಕೆಟಿಗರು ಹಿಂದೆ ಸರಿಯುವ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ, ಸೆಪ್ಟೆಂಬರ್ 19 ರಿಂದ ನವೆಂಬರ್ 8-10ರವರೆಗೆ ಟೂರ್ನಿ ಆಯೋಜಿಸಲು ಮುಂದಾಗಿದೆ. ದಕ್ಷಿಣ ಆಫ್ರಿಕಾದಲ್ಲೂ ಕೋವಿಡ್-19ರ ಅಬ್ಬರ ಜಾಸ್ತಿಯಾಗಿದೆ. ಇದವರೆಗೂ ನಾಲ್ಕೂವರೆ ಪ್ರಕರಣಗಳು ಸಿಕ್ಕಿದ್ದು, ಸುಮಾರು 6500 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಸಂಪೂರ್ಣ ಬಂದ್ ಮಾಡಲಾಗಿದೆ.