More

    ಕುಟುಂಬಕ್ಕೇ ಮತ್ತೆ ಕೀಲಿಕೈ! ಸೋನಿಯಾಗೆ ಕಾಂಗ್ರೆಸ್ ಜೈ; ಹೈಡ್ರಾಮಾ ಬಳಿಕ ಹಿರಿಯರು ಥಂಡಾ

    ನವದೆಹಲಿ: ಕುಟುಂಬದ ಪಾರುಪತ್ಯ ತಪ್ಪಿಸಿ ಪಕ್ಷನಿಷ್ಠ ಹಿರಿಯರಿಗೆ ಅಧಿಕಾರ ನೀಡಬೇಕೆಂಬ ಆಗ್ರಹದೊಂದಿಗೆ ಪಕ್ಷದ ಆಂತರಿಕ ವಲಯದಲ್ಲಿ ಹೊತ್ತಿದ್ದ ಕಿಡಿಯನ್ನು ಅದುಮಿ ಪಕ್ಷವನ್ನು ಒಗ್ಗಟ್ಟಿನ ಹಾದಿಯಲ್ಲಿ ಮುನ್ನಡೆಸಲು ಗಾಂಧಿ ಪರಿವಾರ ಅನಿವಾರ್ಯವೆಂಬ ನಿರ್ಧಾರಕ್ಕೆ ಕಾಂಗ್ರೆಸ್​ನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಬಂದಿದೆ. ಪಕ್ಷದೊಳಗಿನ ಸವಾಲುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಗತ್ಯ ಸಾಂಸ್ಥಿಕ ಬದಲಾವಣೆಗಳನ್ನು ಮಾಡುವ ಪರಮಾಧಿಕಾರದೊಂದಿಗೆ ಮುಂದಿನ ಆರು ತಿಂಗಳ ಅವಧಿಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಸೋನಿಯಾ ಗಾಂಧಿ ಸಮ್ಮತಿಸಿದ್ದಾರೆ. ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಶುರು ಮಾಡಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

    ಸಮಿತಿ ರಚನೆ: ನೇಮಕಾತಿಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಲು ಪ್ರಮುಖ ನಾಯಕರ ಸಮಿತಿ ರಚನೆಯಾಗಲಿದ್ದು, ಎಲ್ಲ ರಾಜ್ಯಗಳ ಮುಖಂಡರು, ಕಾರ್ಯಕರ್ತರು ಸೇರಿ ಎಲ್ಲರ ಅಭಿಪ್ರಾಯಗಳನ್ನು ಈ ಸಮಿತಿ ಸಂಗ್ರಹಿಸಲಿದೆ. ಈ ವರದಿಯನ್ನಾಧರಿಸಿ ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ನಡೆಸಲು ತೀರ್ವನಿಸಲಾಗಿದೆ. ಸಮಿತಿ ರಚಿಸುವ ಬಗ್ಗೆ ರಾಹುಲ್ ಗಾಂಧಿಯವರೇ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. ಪಕ್ಷ ಸಂಘಟನೆಯಲ್ಲಿ ಬದಲಾವಣೆಗಳಾಗಬೇಕು ಎಂಬ ಕೂಗೆದ್ದಿರುವ ಹಿನ್ನೆಲೆಯಲ್ಲಿ, ಪಕ್ಷದ ಹಾಲಿ ಅಧ್ಯಕ್ಷರೇ ಅಗತ್ಯ ಬದಲಾವಣೆಗಳಿಗೆ ಕ್ರಮ ಕೈಗೊಳ್ಳಬಹುದು ಎಂದೂ ಸಭೆಯಲ್ಲಿ ನಿರ್ಣಯಿಸಲಾಗಿದೆ.

    ಮನವಿಗೆ ಮಣಿದ ಸೋನಿಯಾ: ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆಗೆ ಕಾಲ ಪಕ್ವವಾಗಿದೆ ಎಂದು 23 ಮುಖಂಡರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಕರೆಯ ಲಾಗಿದ್ದ ಕಾರ್ಯಕಾರಿ ಸಭೆಯಲ್ಲಿ ಸೋನಿಯಾ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಎ.ಕೆ.ಆಂಟನಿ, ಮಲ್ಲಿಕಾರ್ಜುನ ಖರ್ಗೆ ಸೇರಿ 50ಕ್ಕೂ ಹೆಚ್ಚು ಸದಸ್ಯರು ಒತ್ತಾಯಿಸಿದರು. ಪತ್ರ ಬರೆದಿದ್ದರಲ್ಲಿ ಪ್ರಮುಖರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮ, ಮುಕುಲ್ ವಾಸ್ನಿಕ್, ತಾವು ಪೂರ್ಣಾವಧಿ ಅಧ್ಯಕ್ಷರ ನೇಮಕ ಅಗತ್ಯ ಪ್ರತಿಪಾದಿಸಿದ್ದೇವೆಯೇ ಹೊರತು, ಸೋನಿಯಾ ಅಥವಾ ರಾಹುಲ್ ನಾಯಕತ್ವ ಪ್ರಶ್ನಿಸಿಲ್ಲ ಎಂದು ಸ್ಪಷ್ಟಪಡಿಸುವುದರೊಂದಿಗೆ ಸಭೆ, ಸದ್ಯಕ್ಕೆ ಮಧ್ಯತರ ವ್ಯವಸ್ಥೆ ಯಲ್ಲೇ ಮುಂದುವರಿಯುವ, 6 ತಿಂಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಆರಂಭಿಸುವ ನಿರ್ಣಯ ತೆಗೆದುಕೊಂಡಿತು.

    ಕಿಡಿ ಹಚ್ಚಿದ ರಾಹುಲ್ ನುಡಿ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ನಿರ್ವಣವಾಗಿದ್ದಾಗ ಮತ್ತು ಸೋನಿಯಾ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಪತ್ರ ಬರೆಯುವ ಅಗತ್ಯವೇನಿತ್ತೆಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಆಕ್ರೋಶ ಹೊರಹಾಕಿದರು. ಈ ರೀತಿ ಮಾಡುವುದರಿಂದ ನೀವು ಬಿಜೆಪಿಗೆ ಸಹಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಆಜಾದ್, ದಶಕಗಳಿಂದ ಪಕ್ಷದ ಏಳಿಗೆಗಾಗಿ ಕೆಲಸ ಮಾಡಿದ್ದೇವೆ. ಕೆಲವೊಂದಿಷ್ಟು ಬದಲಾವಣೆ ಆಗಬೇಕಿರುವ ಅಗತ್ಯ ಮನಗಂಡೇ ಪತ್ರ ಬರೆಯಲಾಯಿತು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದರೆಂದು ಹೇಳಲಾಗಿದೆ. ನಂತರ ಮಾತನಾಡಿದ ಅವರು, ‘ನಾವು ಬಿಜೆಪಿಗೆ ನೆರವಾಗಲು ಪತ್ರ ಬರೆದಿದ್ದೇವೆಂದು ಕೆಲ ಸಹೋದ್ಯೋಗಿಗಳು ಆರೋಪಿಸಿದ್ದರು. ಇದು ನಿಜ ಎಂದು ಸಾಬೀತುಪಡಿಸಿದರೆ ಪಕ್ಷದ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದೆ. ಆದರೆ, ರಾಹುಲ್ ತಾವು ಆ ರೀತಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದರು. ಕಪಿಲ್ ಸಿಬಲ್ ಕೂಡ, ‘ಕಳೆದ 30 ವರ್ಷಗಳಲ್ಲಿ ಒಮ್ಮೆಯೂ ಬಿಜೆಪಿಗೆ ಅನುಕೂಲವಾಗುವಂಥ ಹೇಳಿಕೆ ನೀಡಿಲ್ಲ. ಹಾಗಿದ್ದರೂ, ಬಿಜೆಪಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಆರೋಪಿಸಲಾಗಿದೆ’ ಎಂದು ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ಮತ್ತೊಂದು ಟ್ವೀಟ್ ಮಾಡಿ ‘ಖುದ್ದು ರಾಹುಲ್ ತಾವು ಆ ರೀತಿ ಹೇಳಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಹೇಳಿಕೆ ಹಿಂಪಡೆಯುತ್ತೇನೆ’ ಎಂದು ಹಳೆಯ ಟ್ವೀಟ್ ಡಿಲೀಟ್ ಮಾಡಿದ್ದರು.

    ನನ್ನ ಮನಸ್ಸಿಗೆ ನೋವಾಗಿದೆ. ಆದರೆ, ಭಿನ್ನ ದನಿ ಎತ್ತಿದವರೆಲ್ಲರೂ ನನ್ನ ಸಹೋದ್ಯೋಗಿಗಳು. ಯಾರ ವಿರುದ್ಧವೂ ಸೇಡಿನ ಕ್ರಮ ಇಲ್ಲ. ಎಲ್ಲವನ್ನೂ ನಾನು ಮರೆಯುತ್ತೇನೆ. ಪಕ್ಷದ ಏಳಿಗೆಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.

    | ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆ

    https://www.vijayavani.net/validity-of-dl-motor-vehicle-documents-extended-till-31-dec/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts