More

  ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ

  ಸೋಮವಾರಪೇಟೆ: ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಸೂಕ್ತ ಪೋಷಕಾಂಶ ನೀಡಿದರೆ ಉತ್ತಮ ಫಸಲು ತೆಗೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ರಾಜಶೇಖರ್ ಹೇಳಿದರು.
  ಕೃಷಿ ಇಲಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿ, ಎರಡು ವರ್ಷಕೊಮ್ಮೆ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈಗ ಸಕಾಲವಾಗಿದ್ದು, ಕೃಷಿಕರೆಲ್ಲರೂ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
  ಕೃಷಿ ಇಲಾಖೆಯ ಸಹಾಯಧನದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಕೃಷಿಯಲ್ಲಿನ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸದೆ ಬೇಕಾಬಿಟ್ಟಿ ರಸಗೊಬ್ಬರ ಹಾಕಿದರೆ ಪ್ರಯೋಜನವಿಲ್ಲ. ಎಲ್ಲರೂ ವೈಜ್ಞಾನಿಕ ಕೃಷಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
  ಕೃಷಿ ಇಲಾಖೆಯಲ್ಲಿ ಪವರ್ ಟ್ರಿಲ್ಲರ್, ಸ್ಪ್ರೇಯರ್, ಕಳೆ ಕೊಚ್ಚುವ ಯಂತ್ರ, ಕಟಾವು ಯಂತ್ರ, ಪಂಪ್‌ಸೆಟ್ಸ್, ಬ್ಯಾಟರಿ ಸ್ಪ್ರೇಯರ್ ಇನ್ನಿತರ ಯಂತ್ರೋಪರಣಗಳು ಸಹಾಯಧನದಲ್ಲಿ ದೊರೆಯುತ್ತವೆ. ಕೃಷಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
  ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಬದಾಮಿ ಮಾತನಾಡಿ, ರಾಸುಗಳಿಗೆ ವಿಮಾ ಯೋಜನೆಯಿದ್ದು, ಬಿಪಿಎಲ್ ಕಾರ್ಡ್ ಇರುವವರು ಶೇ.25 ವಂತಿಕೆ ಹಾಗೂ ಎಪಿಎಲ್ ಹೊಂದಿದವರು ಶೇ.50 ರಷ್ಟು ವಂತಿಕೆ ನೀಡಬೇಕು ಎಂದರು.
  ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ಮಾತನಾಡಿ, ಬಾಳೆ, ತೆಂಗು, ಶುಂಠಿ, ಕೃಷಿಗೆ ಸಹಾಯಧನದ ಸೌಲಭ್ಯವಿದೆ. ಯಂತ್ರೋಪಕರಣಗಳನ್ನು ಖರೀದಿಸಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.
  ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲದಲ್ಲಿ ಕೃಷಿಕರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿ ವರ್ಗದವರದ್ದು. ಕೃಷಿ ಇಲಾಖೆ ಪ್ರತಿವರ್ಷ ಸಹಾಯಧನದಲ್ಲಿ ಸುಣ್ಣವನ್ನು ಕೃಷಿಕರಿಗೆ ಸರಬರಾಜು ಮಾಡಬೇಕು ಎಂದು ಹೇಳಿದರು.
  ಸಮಾಜದ ಉಪಾಧ್ಯಕ್ಷ ಗೋವಿಂದರಾಜು, ಖಜಾಂಚಿ ಯಡವನಾಡು ರಮೇಶ್, ಪದಾಧಿಕಾರಿಗಳಾದ ರಘು, ಸಚಿ ಕಾಳಪ್ಪ, ಜೋಯಪ್ಪ, ಮಹೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts