More

    ಬಾಲಕಿಯರ ಪಪೂ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆ ನಿವಾರಿಸಿ

    ನಂಜನಗೂಡು: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಕಾಸನೂರು ಅವರಿಗೆ ಮನವಿ ಸಲ್ಲಿಸಿದರು.

    ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಸಮಿತಿ ರಚನೆ ಮಾಡಿಲ್ಲ. ಇದರಿಂದ ಕಾಲೇಜಿನ ವಿದ್ಯಾರ್ಥಿನಿಯರ ಕುಂದುಕೊರತೆ ಕೇಳುವವರಿಲ್ಲದಂತಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಅ.7ರಂದು ಮಧ್ಯಾಹ್ನ ಕಾಲೇಜಿನ ಆವರಣದಿಂದ ಮೂವರು ವಿದ್ಯಾರ್ಥಿನಿಯರು ಹೊರಬರುತ್ತಿದ್ದ ವೇಳೆ ಅಪರಿಚಿತ ಸ್ಕೂಟರ್ ಸವಾರನೊಬ್ಬ ವ್ಹೀಲಿಂಗ್ ಮಾಡಲು ಹೋಗಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ತಕ್ಷಣವೇ ಸ್ಥಳೀಯರು ಗಾಯಗೊಂಡ ವಿದ್ಯಾರ್ಥಿನಿಯರನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಘಡದ ಬಗ್ಗೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ವಾಸವಿದ್ದ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಲಾಯಿತಾದರೂ ಯಾವೊಬ್ಬ ಮಹಿಳಾ ಉಪನ್ಯಾಸಕರೂ ಸ್ಥಳಕ್ಕೆ ಆಗಮಿಸಲಿಲ್ಲ. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಆಪಾದಿಸಿದರು.

    ಕಾಲೇಜಿನಿಂದ ಎನ್‌ಎಸ್‌ಎಸ್ ಶಿಬಿರಗಳನ್ನು ಕಳೆದ ಎರಡು ವರ್ಷಗಳಿಂದ ಆಯೋಜಿಸಿಲ್ಲ. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಯುವ ದಸರಾದಂತಹ ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಮುಂದಾಗುವುದಾಗಿ ವಿದ್ಯಾರ್ಥಿಗಳು ಕೇಳಿಕೊಂಡರೂ ಅವಕಾಶ ನೀಡುತ್ತಿಲ್ಲ. ಒಟ್ಟಾರೆ ಕಾಲೇಜಿನಲ್ಲಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ತೊಡಕಾಗುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಕಾಲೇಜು ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸನೂರು ಮಾತನಾಡಿ, ಈ ಬಗ್ಗೆ ಸೂಕ್ತ ವಿವರ ಪಡೆದುಕೊಂಡು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ತಾಲೂಕು ಸಂಚಾಲಕ ಶಂಕರಪುರ ಸುರೇಶ್, ನವೀನ್ ಆನಂದಪುರ, ಯಶ್ವಂತ್‌ಕುಮಾರ್, ಪ್ರಕಾಶ ನಗರ್ಲೆ, ಮಹದೇವಸ್ವಾಮಿ, ಮಹೇಶ್, ನಾರಾಯಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts