More

    ಸೋಲಾರ್ ಪಾರ್ಕ್‌ನಿಂದ ತುಮಕೂರಿಗೆ ವಿದ್ಯುತ್ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ

    ತುಮಕೂರು: ಪಾವಗಡ ಸೋಲಾರ್ ಪಾರ್ಕ್‌ನಿಂದ ತುಮಕೂರಿಗೆ ಪ್ರತ್ಯೇಕ ವಿದ್ಯುತ್ ಪೂರೈಕೆ ಮಾಡಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಗರದ ಎಪಿಎಂಸಿ ಆವರಣದ ಟಿಡಿಸಿಸಿಐ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಟಿಡಿಸಿಸಿಐ) ನೇತೃತ್ವದಲ್ಲಿ ಆಯೋಜಿಸಿದ್ದ ಕೈಗಾರಿಕಾ ಪ್ರದೇಶಗಳ ಕುಂದುಕೊರತೆಗಳ ಸಭೆಯಲ್ಲಿ ಕೈಗಾರಿಕೋದ್ಯಮಿಗಳ ಅಹವಾಲು ಆಲಿಸಿ ಮಾತನಾಡಿದ ಅವರು, ನೀರಾವರಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ನೀಡಿದ್ದು, ಕೈಗಾರಿಕೆಗಳಿಗೆ ಉತ್ತಮ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದರು.

    ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸಿ ಅದನ್ನು ತುಮಕೂರಿಗೆ ಪ್ರತ್ಯೇಕವಾಗಿ ಬಳಸಲು ಯೋಜನೆ ರೂಪಿಸಲಾಗುತ್ತಿದೆ. ವಿದ್ಯುತ್ ಪೂರೈಕೆಗೆ ಆಧುನಿಕ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬೆಸ್ಕಾಂ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಸಿಎಂ ಬಿಎಸ್‌ವೈ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸದೆ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

    450 ಕೋಟಿ ರೂ., ಯೋಜನೆ: ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ 450 ಕೋಟಿ ರೂಪಾಯಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಈಗಿರುವ ವ್ಯವಸ್ಥೆಯಲ್ಲಿ ಒಂದು ಟಿಸಿ ಹೋದರೆ ಇಡೀ ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತವಾಗಲಿದ್ದು, ನಿರಂತರ ವಿದ್ಯುತ್ ಪೂರೈಕೆ ಅಸಾಧ್ಯ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ಪಾಲಿಕೆ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದ್ದು, ತುಮಕೂರು ನಗರಕ್ಕಿಂತ ಹೆಚ್ಚಿನ ಸಮಸ್ಯೆ ಹುಬ್ಬಳ್ಳಿ-ಧಾರವಾಡದಲ್ಲಿ ಇದೆ. ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಗಮನಕ್ಕೆ ತಂದಾಗ ಸಂಪುಟ ಸಭೆ ಮುಂದೆ ತಂದು ಬಗೆಹರಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
    ಮುಂದಿನ 2 ವರ್ಷದೊಳಗೆ ನೆಲಮಂಗಲ ಕಿಂಗ್ ಫಿಶರ್ ಕಾರ್ಖಾನೆಯಿಂದ ನಗರದ ಹೊರವಲಯದ ಚೆಕ್ ಪೋಸ್ಟ್ ರಾಜಾಟೈಲ್ಸ್‌ವರೆಗೆ ಹತ್ತುಪಥದ ರಸ್ತೆ ನಿರ್ಮಾಣವಾಗಲಿದ್ದು, ಮಿಸ್ಸಿಂಗ್ ಲಿಂಕ್ ಹಾಗೂ ಅಂಡರ್ ಪಾಸ್ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಡಿಸಿಸಿಐ ಅಧ್ಯಕ್ಷ ಎಂ.ಎನ್.ಲೋಕೇಶ್ ಮಾತನಾಡಿ, ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳಲ್ಲಿ ದಂಡ ಮತ್ತು ಬಡ್ಡಿ ರಹಿತ ಆಸ್ತಿ ತೆರಿಗೆಗೆ ನೀಡಲಾಗಿದ್ದ, ಒಟಿಎಸ್ ಅನ್ನು ಪುನಃ ಜಾರಿಗೆ ತಂದು ಒಂದು ವರ್ಷ ಕಾಲಾವಕಾಶ ನೀಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಉಪಾಧ್ಯಕ್ಷ ಗಿರೀಶ್, ಟಿಡಿಸಿಸಿಐ ಕಾರ್ಯದರ್ಶಿ ಸತ್ಯನಾರಾಯಣ್, ಸಿ.ಎಸ್.ಮಂಜುನಾಥ್, ಡಿ.ಆರ್.ಮಲ್ಲೇಶಯ್ಯ, ಟಿ.ಆರ್.ಲೋಕೇಶ್, ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಸೇರಿ ನಗರದ ಉದ್ಯಮಿಗಳು ಹಾಗೂ ಕೆಐಎಡಿಬಿ, ಮಹಾನಗರ ಪಾಲಿಕೆ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೈಗಾರಿಕಾ ಪ್ರದೇಶಗಳ ಸಮಸ್ಯೆ ಬಗೆಹರಿಸಲು ಕೆಎಸ್‌ಎಸ್ ಐಡಿಸಿ, ಕೆಐಎಡಿಬಿ ಹಾಗೂ ಮಹಾನಗರ ಪಾಲಿಕೆ ಸಂಯೋಜಿತ ಕಾರ್ಯನಿರ್ವಹಿಸುವ ಮೂಲಕ ಬಗೆಹರಿಸಬೇಕು.
    ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts