More

    ಮೇಯರ್ ಹೆಸರಲ್ಲೇ ‘ನಕಲಿ’ ಪತ್ರ !

    ತುಮಕೂರು: ಆರೋಗ್ಯ ಅಧಿಕಾರಿ ವರ್ಗಾವಣೆಗೆ ನಗರಾಭಿವೃದ್ಧಿ ಸಚಿವರಿಗೆ ಪಾಲಿಕೆ ಮೇಯರ್ ಹೆಸರಲ್ಲಿ ‘ನಕಲಿ’ ಪತ್ರ ಬರೆದಿರುವ ಅಕ್ರಮ ಬೆಳಕಿಗೆ ಬಂದಿದೆ.

    ಮೇಯರ್ ಸಹಿಯನ್ನೇ ನಕಲು ಮಾಡಿರುವ ಬಹುದೊಡ್ಡ ವಂಚನೆ ಪಾಲಿಕೆಯಲ್ಲಿ ನಡೆದಿರುವುದು ಆತಂಕದ ಜತೆಗೆ ಕೋಲಾಹಲ ಸೃಷ್ಟಿಸಿದೆ. ಜ.27ರಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಮದಕರಿ ನಾಯಕ ಅವರನ್ನು ವರ್ಗಾವಣೆ ಮಾಡುವಂತೆ ಮೇಯರ್ ಎಂ.ಪ್ರಭಾವತಿ ಅವರ ಲೆಟರ್ ಹೆಡ್‌ನಲ್ಲಿ ಪತ್ರ ಬರೆದು ಕೋರಲಾಗಿದೆ. ಅಲ್ಲದೆ, ಈ ‘ನಕಲಿ’ ಪತ್ರದ ಹಿನ್ನೆಲೆಯಲ್ಲಿ ಮಾತೃ ಇಲಾಖೆಗೆ ವರ್ಗಾವಣೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವರು ಶಿಫಾರಸು ಮಾಡಿರುವ ಪತ್ರ ಪಾಲಿಕೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ‘ನಕಲಿ ಪತ್ರ’ವು ಪಾಲಿಕೆಯಲ್ಲಿ ದೊಡ್ಡಮಟ್ಟದಲ್ಲಿ ಅವ್ಯವಹಾರಗಳು ನಡೆದಿರುವ ಗುಮಾನಿ ಹುಟ್ಟುಹಾಕಿದೆ.

    ಮೇಯರ್ ಗಾಬರಿ: ಲೆಟರ್ ಹೆಡ್‌ನಲ್ಲಿ ಆರೋಗ್ಯಾಧಿಕಾರಿ ಡಾ.ಮದಕರಿ ನಾಯಕ ಅವರನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಪತ್ರ ಬರೆದಿರುವ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಪತ್ರ ವ್ಯವಹಾರಗಳ ರಿಜಿಸ್ಟ್ರಾರ್ ತರಿಸಿ ಮೇಯರ್ ಎಂ.ಪ್ರಭಾವತಿ ಪರಿಶೀಲಿಸಿದಾಗ ಈ ರೀತಿ ಪತ್ರ ವ್ಯವಹಾರ ನಡೆಸದೇ ಇರುವುದು ಅರಿವಿಗೆ ಬಂದಿದೆ.
    ಸಚಿವರಿಗೆ ಅಧಿಕಾರಿಯೊಬ್ಬರ ವರ್ಗಾವಣೆ ಮಾಡುವಂತೆ ಕೋರಿರುವ ನಕಲಿ ಪತ್ರ ಸೃಷ್ಟಿಸಿರುವ ಅಕ್ರಮವು ಪಾಲಿಕೆಯಲ್ಲೇ ನಡೆದಿರುವುದರಿಂದ ಗಾಬರಿಗೊಂಡಿರುವ ಮೇಯರ್ ತಮ್ಮ ಹೆಸರಲ್ಲಿ ಇನ್ನೆಷ್ಟು ವಂಚನೆಗಳು ನಡೆದಿರಬಹುದೆಂಬ ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

    ಅಲ್ಲದೆ, ಮಾರ್ಚ್ 6 ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ಡಾ.ಮದಕರಿ ನಾಯಕ ಅವರನ್ನು ವರ್ಗಾವಣೆ ಮಾಡುವಂತೆ ಯಾವುದೇ ಪತ್ರ ಬರೆದಿಲ್ಲ. ಜ.27ರಂದು ನನ್ನ ಲೆಟರ್ ಹೆಡ್ ಮತ್ತು ಸಹಿ ಇರುವ ಪತ್ರ ನಕಲಿಯಾಗಿರುತ್ತದೆ. ಅಲ್ಲದೆ, ಈ ನಕಲಿ ಪತ್ರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಪ್ರತಿಯನ್ನು ಲಗತ್ತಿಸಿದ್ದು ಪಾಲಿಕೆಯಲ್ಲಿ ವಂಚನೆ ನಡೆದಿರುವುದಕ್ಕೆ ಪುಷ್ಟಿ ನೀಡಿದೆ. ಮೇಯರ್ ಹೆಸರಲ್ಲೇ ಪತ್ರ ಬರೆದಿರುವ ಪ್ರಭಾವಿ ವಂಚಕ ಯಾರೆಂಬುದು ಉನ್ನತ ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ.

    ಪೊಲೀಸ್ ವರಿಷ್ಠಾಧಿಕಾರಿಗೆ ದೂರು ! ಲೆಟರ್ ಹೆಡ್‌ನಲ್ಲಿ ನಕಲು ಸಹಿಯೊಂದಿಗೆ ನಗರಾಭಿವೃದ್ಧಿ ಸಚಿವರಿಗೆ ಜ.27ರಂದು ಪತ್ರವೊಂದು ಸಲ್ಲಿಕೆ ಆಗಿದ್ದು ಇದರಿಂದ ಆಡಳಿತಾತ್ಮಕ ಸಮಸ್ಯೆಗಳು ತಲೆದೋರಿವೆ. ತುರ್ತಾಗಿ ಈ ನಕಲಿ ಪತ್ರದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್‌ಗೆ ಮೇಯರ್ ಪ್ರಭಾವತಿ ಪತ್ರ ಬರೆದು ಆಗ್ರಹಿಸಿದ್ದಾರೆ. ಎಸ್ಪಿಗೆ ಬರೆದಿರುವ ಪತ್ರವು ವಿಜಯವಾಣಿಗೆ ಲಭ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts