More

    ಪಂಚಾಯಿತಿ ಸೋಲಾರ್ ಅಳವಡಿಕೆಗೆ ಅಸಹಕಾರ: ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆ

    ಭರತ್ ಶೆಟ್ಟಿಗಾರ್, ಮಂಗಳೂರು
    ಪಂಚಾಯತ್‌ರಾಜ್ ಇಲಾಖೆ ನಿರ್ದೇಶಿಸಿದ ಗ್ರಿಡ್ ಇಂಟರ‌್ಯಾಕ್ಟಿವ್ ಹೈಬ್ರಿಡ್ ಸೋಲಾರ್ ರೂಫ್‌ಟಾಪ್ ಪವರ್ ಪ್ಲಾೃಂಟ್‌ಗಳ ಅಳವಡಿಕೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪ್ರತಿನಿಧಿ, ಅಧಿಕಾರಿಗಳಿಂದ ಅಸಹಕಾರ ವ್ಯಕ್ತವಾಗುತ್ತಿದೆ. ಆ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಿದೆ.

    ಸೋಲಾರ್ ಅಳವಡಿಕೆಗೆ ಕಾರ್ಯಾದೇಶ ನೀಡಿರುವ ಗ್ರಾಮ ಪಂಚಾಯಿತಿಗಳ ಪೈಕಿ, ಬಹುತೇಕ ಗ್ರಾಪಂಗಳು ಗುತ್ತಿಗೆದಾರ ಸಂಸ್ಥೆಗಳಿಂದ ಸೋಲಾರ್ ಘಟಕ ಅಳವಡಿಕೆಗೆ ಸಂಬಂಧಿಸಿದ ಸಾಮಗ್ರಿ ಸ್ವೀಕರಿಸಲು ಹಿಂದೇಟು ಹಾಕುತ್ತಿವೆ. ಕೆಲವು ಗ್ರಾಪಂಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಯೋಜನೆ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ದೂರುಗಳು ಪಂಚಾಯತ್‌ರಾಜ್ ಆಯುಕ್ತಾಲಯಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತಾಲಯ ಸಕಾಲದಲ್ಲಿ ಯೋಜನೆ ಅನುಷ್ಠಾನಗೊಳಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಿದೆ.

    ಗ್ರಾಮ ಪಂಚಾಯಿಗಳಲ್ಲಿ ಲಭ್ಯವಿರುವ 14ನೇ ಹಣಕಾಸು ಯೋಜನೆಯ ಶಿಲ್ಕು ಮತ್ತು 15ನೇ ಹಣಕಾಸು ಅನುದಾನ ಹಾಗೂ ಇನ್ನಿತರ ಅನುದಾನಗಳಡಿ ಕ್ರಿಯಾಯೋಜನೆ ರೂಪಿಸಿ, ಸೋಲಾರ್ ಘಟಕ ಸ್ಥಾಪಿಸಲು ಪಂಚಾಯಿತಿಗಳು ಕ್ರಮ ವಹಿಸಬೇಕಿದೆ. ಈಗಾಗಲೇ 5 ಗುತ್ತಿಗೆದಾರ ಸಂಸ್ಥೆಗಳನ್ನು ಅಂತಿಮಗೊಳಿಸಿ, ಜಿಲ್ಲಾವಾರು ಹಂಚಿಕೆ ಮಾಡಿ, ಸರ್ಕಾರದ ಮಾರ್ಗಸೂಚಿಯನ್ವಯ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಅದರಂತೆ ಸಂಸ್ಥೆಯ ಸಿಬ್ಬಂದಿ ಆಯಾ ಪಂಚಾಯಿತಿಗಳಿಗೆ ತೆರಳಿ ವಿವಿಧ ಸಾಮಗ್ರಿಗಳನ್ನು ಅನ್‌ಲೋಡ್ ಮಾಡುತ್ತಿದ್ದಾರೆ. ಆದರೆ ಅದನ್ನು ಸ್ವೀಕರಿಸಲು ಪಂಚಾಯಿತಿಗಳು ಮುಂದಾಗುತ್ತಿಲ್ಲ ಎನ್ನುವುದು ಈಗಿರುವ ಆರೋಪ.

    ವಿದ್ಯುಚ್ಛಕ್ತಿ ಕೊರತೆ ನೀಗುವುದು ಯೋಜನೆ ಉದ್ದೇಶ: ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಪಂಚಾಯತ್‌ರಾಜ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಿರುವ ವಿದ್ಯುಚ್ಛಕ್ತಿ ಕೊರತೆ ಹೋಗಲಾಡಿಸಲು, ಸಾರ್ವಜನಿಕ ಉದ್ದೇಶಕ್ಕಾಗಿ ನೈಸರ್ಗಿಕವಾಗಿ ಲಭ್ಯವಿರುವ ಸೌರಮೂಲದಿಂದ ವಿದ್ಯುತ್ ಪಡೆಯಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ಅಳವಡಿಸಿ, ವಿದ್ಯುತ್ ಬಿಲ್ಲಿನ ಮೊತ್ತದಲ್ಲಿ ಉಳಿತಾಯ ಮಾಡಿ ಆರ್ಥಿಕವಾಗಿ ಸದೃಢಗೊಳಿಸುವುದು ಮತ್ತು ನಿರಂತರ ವಿದ್ಯುತ್ ಪೂರೈಕೆಯತ್ತ ಕ್ರಮ ಕೈಗೊಳ್ಳುವುದು ಈ ಯೋಜನೆ ಉದ್ದೇಶ. ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 3 ಕಿಲೋ ವ್ಯಾಟ್‌ನಿಂದ ಆರಂಭಿಸಿ, ಗರಿಷ್ಟ ಮೇಲ್ಚಾವಣಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಘಟಕ ನಿರ್ಮಿಸಲು ಸೂಚನೆ ನೀಡಲಾಗಿದೆ.

    ಅಸಹಕಾರಕ್ಕೆ ಏನು ಕಾರಣ?: ಸೋಲಾರ್ ಘಟಕ ಅಳವಡಿಸಲು ಸರ್ಕಾರ ವಿಶೇಷ ಅನುದಾನ ನೀಡುವುದಿಲ್ಲ. ಗ್ರಾಪಂಗಳೇ ತಮ್ಮ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಅಳವಡಿಸಬೇಕು. ಆದರೆ ಗ್ರಾಪಂ ಸದಸ್ಯರು ಸೋಲಾರ್ ಅಳವಡಿಕೆಗಿಂತ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಮೊದಲಾದ ವಿಚಾರಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲು ಆಗ್ರಹಿಸುತ್ತವೆ. ಆದುದರಿಂದ ಸೋಲಾರ್ ಘಟಕ ಅಳವಡಿಕೆಗೆ ಮೊತ್ತ ಸಾಕಾಗುವುದಿಲ್ಲ. ಸೋಲಾರ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಸ್ವೀಕರಿಸಿದರೆ ಅಳವಡಿಕೆ ಬಳಿಕ ಬಿಲ್ ಪಾವತಿಗೆ ಸಮಸ್ಯೆಯಾಗುತ್ತದೆ ಎನ್ನುವುದು ಪಿಡಿಒಗಳ ಅಭಿಪ್ರಾಯ.

    ಉಡುಪಿಯಲ್ಲಿ ಶೇ.90ರಷ್ಟು ಅಳವಡಿಕೆ ಬಾಕಿ: ಉಡುಪಿ ಜಿಲ್ಲೆಯಲ್ಲಿ ಶೇ.90ರಷ್ಟು ಗ್ರಾಪಂಗಳಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಕೆ ಆಗಿಲ್ಲ. ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ಬೇರೆ ಭಾಗದ ನಾಲ್ಕೈದು ಸೊಲಾರ್ ಸಂಸ್ಥೆಗಳಿಗೆ ಟೆಂಡರ್ ನೀಡಿದೆ. ಸ್ಥಳೀಯವಾಗಿ ಸೊಲಾರ್ ಅಳವಡಿಸಲು ಗ್ರಾಪಂಗಳಿಗೆ ಸ್ವ್ವಾತಂತ್ರೃ ನೀಡಬೇಕಿತ್ತು. ಇದರ ಕಳಪೆ ಪರಿಕರ ಪೂರೈಕೆ, ಮುಂದಿನ ದಿನಗಳಲ್ಲಿ ನಿರ್ವಹಣೆ ಸಮಸ್ಯೆ ಎದುರಾಗಲಿದೆ. ಸರ್ಕಾರವೇ ಇದಕ್ಕೆ ಪ್ರತ್ಯೇಕ ಅನುದಾನ ನೀಡಬೇಕಿತ್ತು. ಗ್ರಾಪಂ ಸ್ವಂತ ಅನುದಾನ ಅಥವಾ 15ನೇ ಹಣಕಾಸು ಯೋಜನೆ ಅನುದಾನ ಖರ್ಚು ಮಾಡಲು ಆದೇಶಿಸಿದೆ. ಆದರೆ ಕಳೆದ ವರ್ಷ ಜಲ್ ಜೀವನ್ ಮಿಶನ್ ಯೋಜನೆಗೆ ಸಾಕಷ್ಟು ಭರಪೂರ ಅನುದಾನ ಖರ್ಚು ಮಾಡಲಾಗಿದೆ. ಉಳಿದ ಮೊತ್ತವನ್ನು ಕುಡಿಯುವ ನೀರು, ರಸ್ತೆ ಇತರ ಮೂಲಸೌಕರ್ಯಗಳಿಗೂ ವ್ಯಯಿಸಬೇಕಿದೆ. ಈ ನಡುವೆ ಸೋಲಾರ್ ಅಳವಡಿಕೆ ಸಮಸ್ಯೆಯಾಗಿದೆ ಎನ್ನುತ್ತಾರೆ ಗ್ರಾಪಂ ಪಿಡಿಒ, ಜನಪ್ರತಿನಿಧಿಗಳು. ಜಿಲ್ಲೆಯಲ್ಲಿ ಕೆಲವು ಗ್ರಾಪಂ ಕಚೇರಿಗಳು ಹಂಚಿನ ಮಹಡಿ ಹೊಂದಿದೆ. ಕೆಲವು ಗ್ರಾಪಂ ಕಟ್ಟಡಗಳಲ್ಲಿ ಕಾಂಕ್ರಿಟ್ ತಾರಸಿ ಇದ್ದರೂ, ಶೀಟ್ ಛಾವಣಿಯ ಸಭಾಭವನ ನಿರ್ಮಿಸಿರುವ ಕಾರಣ ಸೋಲಾರ್ ಅಳವಡಿಕೆ ಸಾಧ್ಯವಿಲ್ಲ.

    ಸೋಲಾರ್ ಘಟಕ ಅಳವಡಿಕೆಗೆ ಸಂಬಂಧ ಸರ್ಕಾರಕ್ಕೆ ದೂರು ಬರದಂತೆ ಎಚ್ಚರ ವಹಿಸಬೇಕೆಂದು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಸೋಲಾರ್ ಉಪಕರಣ ಸ್ವೀಕರಿಸಿ, ಅಳವಡಿಕೆ ಕಾಮಗಾರಿ ಮುಗಿದ ಬಳಿಕ ಗುತ್ತಿಗೆದಾರ ಸಂಸ್ಥೆಗಳಿಗೆ ಸಕಾಲದಲ್ಲಿ ಬಿಲ್ ಪಾವತಿ ಆಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಇನ್ನು ಮುಂದೆ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ.
    ರೇವಣಪ್ಪ ಕೆ.
    ನಿರ್ದೇಶಕರು, ಆಡಳಿತ-2, ಪಂ.ರಾ.ಆಯುಕ್ತಾಲಯ, ಬೆಂಗಳೂರು

    ಗ್ರಾಪಂಗಳಲ್ಲಿ ಸೋಲಾರ್ ಪವರ್ ಪ್ಲಾೃಂಟ್ ಅಳವಡಿಸುವ ಪ್ರಕ್ರಿಯೆ ದ.ಕ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಶೇ.25ರಷ್ಟು ಪಂಚಾಯಿತಿಗಳಲ್ಲಿ ಅಳವಡಿಸಲಾಗಿದೆ. ಬಾಕಿ ಇರುವ ಪಂಚಾಯಿತಿಗಳಲ್ಲಿ ಅಳವಡಿಸುವಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಲಾಗಿದೆ.
    ಡಾ.ಕುಮಾರ್ ಸಿಇಒ, ದ.ಕ.ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts