More

  ಧರ್ಮಕ್ಕಾಗಿ ದುಡಿದವರ ಸಮಾಜ ಮರೆಯುವುದಿಲ್ಲ: ಶ್ರೀಮಂಜುನಾಥ ಸ್ವಾಮೀಜಿ

  ಹೊಳೆಹೊನ್ನೂರು: ಜಗತ್ತೇ ಛತ್ರಪತಿ ಶಿವಾಜಿ ಮಹಾರಾಜರನ್ನು ವಿಶ್ವ ನಾಯಕನಾಗಿ ಒಪ್ಪಿಕೊಂಡಿದೆ ಎಂದು ಗೋಸಾಯಿ ಮಹಾ ಸಂಸ್ಥಾನದ ಮರಾಠ ಜಗದ್ಗುರು ಶ್ರೀ ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಹೇಳಿದರು.
  ಮಂಗಳವಾರ ಭದ್ರಾವತಿಯ ವೀರಶೈವ ಸಮುದಾಯ ಭವನದಲ್ಲಿ ತಾಲೂಕು ಮರಾಠ ಸಮಾಜದಿಂದ ಹಮ್ಮಿಕೊಂಡಿದ್ದ 394ನೇ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
  ಪ್ರಪಂಚದಲ್ಲಿ ಜೀವ ಜಂತುಗಳು ಪುಣ್ಯ ಪಾಪ ಕರ್ಮಗಳ ಫಲದಿಂದ ಜನಿಸಿದರೆ ದಾರ್ಶನಿಕರ ಜನನ ಪೂರ್ವ ನಿರ್ಧರಿತವಾಗಿರುತ್ತದೆ. ಶಿವಾಜಿ ಮಹಾರಾಜರ ಆಳ್ವಿಕೆಯಿಂದ ದೇಶದ ರಕ್ಷಣೆಯಾಗಿದೆ. ತಮಗಾಗಿ ತಮ್ಮವರಿಗಾಗಿ ಬಾಳುವುದಕ್ಕಿಂತ ಸಮಾಜಕ್ಕಾಗಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ದಾರ್ಶನಿಕರ ಜಯಂತಿಗಳನ್ನು ಆಚರಿಸಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿನ ಹಿರಿಯರ ನಡೆಯಂತೆ ಕಿರಿಯರು ನಡೆಯುತ್ತಾರೆ ಎಂದರು.
  ಸೂಕ್ಷ್ಮತೆಯಿಂದ ಬದುಕಿನ ಮಜಲುಗಳನ್ನು ಅರಿತು ನಡೆಯಬೇಕು. ಸಂಘಟನೆಯನ್ನು ನಡೆಸುವಲ್ಲಿ ಸ್ವಾರ್ಥ ಮರೆಯಾಗಬೇಕು. ಪ್ರತಿಯೊಬ್ಬರು ತ್ಯಾಗದ ಮಹತ್ವ ಅರಿಯಬೇಕು. ಧರ್ಮಕ್ಕಾಗಿ ದುಡಿದವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ದೈವಿ ಭಕ್ತಿ ಮೈಗೂಡಿಸಿಕೊಂಡು ಮಾತೃ ಪ್ರೇಮ ಬೆಳೆಸಿಕೊಳ್ಳಬೇಕು. ಆಗ ಒಳ್ಳೆಯ ಕಾರ್ಯಗಳಿಗೆ ಹಿನ್ನಡೆಯಾಗುವುದಿಲ್ಲ. ಸಮಾಜಮುಖಿ ಕೆಲಸಕ್ಕೆ ಬೆಂಬಲಿಸುವವರು ಹೆಸರಿಗೆ ಮಾತ್ರ ದೊಡ್ಡವರಾಗಿರುತ್ತಾರೆ. ಸಮಾಜದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದೋಯ್ಯುವವರು ಯಾವಾಗಲು ದೊಡ್ಡ ಸ್ಥಾನದಲ್ಲಿರುತ್ತಾರೆ. ತಂದೆ ತಾಯಿಯರ ಮಾರ್ಗದರ್ಶನದಲ್ಲಿ ಆದರ್ಶ ಬದುಕು ಕಟ್ಟಿಕೊಳ್ಳಬೇಕು ಎಂದರು.
  ತಾಲೂಕು ಮರಾಠ ಸಮಾಜದ ಅಧ್ಯಕ್ಷ ಎಚ್.ಆರ್.ಲೋಕೇಶ್ ರಾವ್ ದೊಂಬಾಳೆ ಮಾತನಾಡಿ, ಭದ್ರಾವತಿಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮರಾಠ ಕೋ ಆಪರೇಟಿವ್ ಬ್ಯಾಂಕ್ ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ನಗರದಲ್ಲಿ ಸಮಾಜದಿಂದ ಖಾಸಗಿ ಶಾಲೆಯೊಂದನ್ನು ತೆರೆಯಲಾಗುವುದು. ತಾಲೂಕಿನ ಪ್ರತಿ ಕುಟುಂಬಕ್ಕೂ ಸಂಘದಲ್ಲಿ ಷೇರು ತೆರೆಯುವ ಅವಕಾಶ ನೀಡಲಾಗುವುದು. ಸಮಾಜ ಬಾಂಧವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
  ಕ್ಷತ್ರಿಯಾ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮ್ ಸುಂದರ್ ಗಾಯ್ಕವಾಡ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ನಗರ ಸಭೆ ಸದಸ್ಯ ಬಿ.ಕೆ.ಮೋಹನ್, ಉಪನ್ಯಾಸಕ ಅಜಿತ್ ನಾಡಿಗ್, ರಘುನಾಥರಾವ್ ಗಿಡ್ಡೆ, ಯಶವಂತರಾವ್ ಘೋರ್ಪಡೆ, ಪ್ರಕಾಶ್‌ರಾವ್ ದುರೆ, ರಂಗಪ್ಪ ಬಂಡಗಾರ್, ಬೋಜಪ್ಪ, ಹನುಮಂತಪ್ಪ, ಅನುಪಮ ಚನ್ನೇಶ್, ಬಸವಂತರಾವ್ ದಾಳೆ, ಶ್ರೀನಿವಾಸ್‌ರಾವ್ ಮದ್ನೆ, ಶಿವಾಜಿರಾವ್ ಜಾದವ್, ಶ್ವೇತಾ, ಶಿಲ್ಪಾ, ಜ್ಯೋತಿ, ರಂಗನಾಥ್‌ರಾವ್ ಪಿಂಗ್ಳೆ, ಹಾಲೋಜಿರಾವ್, ಪೈಲ್ವಾನ್ ಚಂದ್ರೋಜಿರಾವ್, ಬಾಳೋಜಿ ಬಸವರಾಜ್, ಸಿದ್ದೋಜಿರಾವ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts