More

    ಟಾರ್ಗೆಟ್ ಯೂತ್: ಸೋಷಿಯಲ್ ಮೀಡಿಯಾ, ರಾಜಕೀಯ ಪಕ್ಷಗಳ ಅಸ್ತ್ರ

    ಚುನಾವಣಾ ವರ್ಷ ಸಮೀಪದಲ್ಲಿದೆ. ಯುವ ಮತದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾರೇ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೂ ಹೊಸ ಮತದಾರರ ಮತ ನಿರ್ಣಾಯಕ ಎಂಬುದು ಈಗ ವೇದ್ಯ ವಿಚಾರ. ಹೀಗಾಗಿ ಎಲ್ಲ ಪಕ್ಷಗಳು ಡಿಜಿಟಲ್ ತಂತ್ರಗಾರಿಕೆಗೆ ಅನಿವಾರ್ಯವಾಗಿ ಮೊರೆ ಹೋಗತೊಡಗಿವೆ.

    | ಸಚಿನ ಕೋಮಾರ ಎಸ್​ಡಿಎಂ ಕಾಲೇಜು ಉಜಿರೆ

    ಸಮಕಾಲೀನ ಸಮಾಜದಲ್ಲಿ ಸಾಮಾಜಿಕ ಮಾಧ್ಯಮ ಪ್ರಬಲ ಸಂವಹನ ವೇದಿಕೆಯಾಗಿ ಹೊರಹೊಮ್ಮಿದೆ. ಇದರ ಪರಿಣಾಮ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಹುಪಾಲು ಮತದಾರರ ಮೇಲೆ ಪ್ರಭಾವ ಬೀರುವ ಸ್ವರೂಪ ಬದಲಾಗಿದೆ. ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕಾರಣಿಗಳಿಗೆ ಮತದಾರರನ್ನು ತಲುಪುವ ಅತ್ಯಂತ ಶಕ್ತಿಶಾಲಿ ಸಾಧನವಾಗಿ ಸಾಮಾಜಿಕ ಜಾಲತಾಣಗಳು ಗೋಚರಿಸಿವೆ. ಸಾಮಾಜಿಕ ಜಾಲತಾಣಗಳು ನೇರ ಸಂವಹನಕ್ಕೂ ಅವಕಾಶ ಮಾಡಿಕೊಟ್ಟಿವೆ. ಜನಾಭಿಪ್ರಾಯ ರೂಪಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತಿವೆ. ನಮ್ಮ ದೇಶದಲ್ಲಿ ಪ್ರಸ್ತುತ ಸರಾಸರಿ 52 ಕೋಟಿ ಸಕ್ರಿಯ ಸಾಮಾಜಿಕ ಮಾಧ್ಯಮ ಖಾತೆಗಳಿವೆ. ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿರುವವರು ಮತ್ತು ಪ್ರಭಾವಿತರಾದವರು ಯುವಜನರು ಎಂಬುದು ದೃಢೀಕೃತ ವಿಚಾರ. ವಿಭಿನ್ನ ಮನಸ್ಥಿತಿಯ ಯುವಜನರು ವಿಭಿನ್ನ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯುವಜನರ ರಾಜಕೀಯ ಆಸಕ್ತಿ ಹೆಚ್ಚಾಗಿ ವ್ಯಕ್ತವಾಗತೊಡಗಿದೆ.

    ಹೊಸ ತಲೆಮಾರು: 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2019ರ ವೇಳೆಗೆ ಕರ್ನಾಟಕದಲ್ಲಿ ಶೇಕಡ 9 ಅಂದರೆ ಸುಮಾರು 7 ಲಕ್ಷ ಹೊಸ ಮತದಾರರು (ಚೊಚ್ಚಲ ಸೇರ್ಪಡೆ) ಸೇರಿ ಒಟ್ಟು ಮತದಾರರ ಸಂಖ್ಯೆ ಏರಿಕೆಯಾಗಿತ್ತು. ಇದರಲ್ಲಿ ತಲಾ 2.5 ಕೋಟಿ ಮಹಿಳೆಯರು ಮತ್ತು ಪುರುಷರು. 4,718 ತೃತೀಯ ಲಿಂಗಿ ಮತದಾರರು. 2024ರ ವೇಳೆಗೆ ಹೊಸ ಮತದಾರರ ಸಂಖ್ಯೆ ಇನ್ನೂ ಏರಲಿದೆ.

    ಹೊಸತನದತ್ತ ಸೆಳೆತ: ಹೊಸ ವಿಷಯಗಳಿಗೆ ಮತ್ತು ಸುತ್ತಲಿನ ಘಟನೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುವ ಯುವ ಮನಸ್ಸುಗಳು, ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ಸುದ್ದಿಗಳೊಂದಿಗೆ ಅಪ್ಡೇಟ್ ಆಗುತ್ತಿರುವುದು, ರಾಜಕೀಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವುದಕ್ಕೆ ಪ್ರಮುಖ ಕಾರಣವಾಗಿದೆ. ಮೊದಲು ರಾಜಕೀಯ ಚರ್ಚೆಗಳು ಕೇವಲ ಪತ್ರಿಕೆ ಓದುಗರಿಗೆ, ಸುದ್ದಿವಾಹಿನಿಗಳನ್ನು ವೀಕ್ಷಿಸುವ ಅಥವಾ ಹಳ್ಳಿ ಕ್ಲಬ್ ಗಳ ಚರ್ಚೆಗಳಲ್ಲಿ ಭಾಗವಹಿಸುವವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಯುವಕರು ರಾಜಕೀಯ ಚರ್ಚೆಗಳಲ್ಲಿ ತೊಡಗಿಸಿಕೊಂಡು, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಮಾಡತೊಡಗಿದ್ದಾರೆ. ಹೀಗಾಗಿ ಆಡಳಿತ ಚುಕ್ಕಾಣಿ ಹಿಡಿವವರ ಆಯ್ಕೆಯಲ್ಲಿ ಇವರ ಪಾತ್ರ ಪ್ರಮುಖವಾಗುತ್ತದೆ.

    ಅತಿರೇಕವೂ ಇಲ್ಲದಿಲ್ಲ: ಸಾಮಾಜಿಕ ಮಾಧ್ಯಮಗಳು ಮುಕ್ತ ಚರ್ಚೆಗೆ ವೇದಿಕೆಯಾಗಿದೆ. ಇದು ನಮ್ಮ ದೇಶದಲ್ಲಿ ಹಿಂದೆಂದೂ ಇಲ್ಲದ ಪಾರದರ್ಶಕತೆಯನ್ನು ಸೃಷ್ಟಿಸಿದೆ. ಆದರೆ ಕೆಲ ಚರ್ಚೆಗಳು ಗಂಭೀರ ಜಗಳಗಳಿಗೆ ಕಾರಣವಾಗುತ್ತಿವೆ. ರಾಜಕೀಯ ವಿಚಾರಗಳ ವಿಸõತ ಚರ್ಚೆ ಯುವಕರನ್ನು ಆಕ್ರಮಣಶೀಲರಾಗುವಂತೆ ಮಾಡುತ್ತದೆ. ಪರಿಣಾಮ ಭಾಷಾ ಪ್ರಯೋಗದ ಮೇಲೆ ಹಿಡಿತ ತಪ್ಪಿ ಸಂಘರ್ಷಕ್ಕೂ ಕಾರಣವಾಗುವ ಅತಿರೇಕ ಆಗಿರುವುದೂ ಇದೆ.

    ವಿವೇಚನಾಶೀಲ ಯುವಜನ: ಸಾಮಾಜಿಕ ತಾಣಗಳಲ್ಲಿ ಯುವಜನರು ಎಲ್ಲರೂ ಅತಿರೇಕದ ವರ್ತನೆ ತೋರುವುದಿಲ್ಲ. ಕೆಲವೇ ಕೆಲವರಷ್ಟೆ ಇಂತಹ ವರ್ತನೆ ತೋರುತ್ತಾರೆ. ಅವರವರ ಮಾನಸಿಕತೆ ಮತ್ತು ಅವರಿರುವ ಪರಿಸರ, ಸನ್ನಿವೇಶಗಳೂ ಅದಕ್ಕೆ ಕಾರಣವಿರಬಹುದು. ಒಟ್ಟಾರೆ ನೋಡಿದರೆ ಯುವಜನರನ್ನು ಟಾರ್ಗೆಟ್ ಮಾಡಲು ರಾಜಕೀಯ ಪಕ್ಷಗಳು ಸಾಮಾಜಿಕ ತಾಣಗಳನ್ನು ಬಳಸುತ್ತಿರುವುದು ಈಗ ಎಲ್ಲರಿಗೂ ಮನದಟ್ಟಾಗಿರುವ ಸತ್ಯ. ಹೀಗಾಗಿ ಯುವಜನತೆ ಕೂಡ ಹೆಚ್ಚು ವಿವೇಚನಾಶೀಲರಾಗಿ ವರ್ತಿಸುವುದನ್ನು ರೂಢಿಸಿಕೊಂಡಿದ್ದಾರೆ.

    ಪ್ರಚಾರ-ಪ್ರಭಾವ

    • ಸೈದ್ಧಾಂತಿಕ ವಿಚಾರವಾಗಿ ಜನರ ಮೇಲೆ ಪ್ರಭಾವ ಬೀರುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸುಳ್ಳು ಸುದ್ದಿ ಹಬ್ಬಿಸುವ ಮತ್ತು ದೇಶದಲ್ಲಿ ರಾಜಕೀಯ, ಸಾಮಾಜಿಕ ಅಸ್ಥಿರತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗಷ್ಟೆ ಪಾಕ್ ಪ್ರಾಯೋಜಿತ 20ರಷ್ಟು ಯುಟೂಬ್ ಚಾನೆಲ್​ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲು ಸೂಚನೆ ನೀಡಿದ್ದನ್ನು ಇಲ್ಲಿ ನೆನಪಿಸಬಹುದು.
    • ಸಾಮಾಜಿಕ ತಾಣಗಳಲ್ಲಿ ರಾಜಕೀಯ ಪಕ್ಷಗಳ, ರಾಜಕೀಯ ನೇತಾರರ, ಸಂಸದರ, ಶಾಸಕರ ಮತ್ತು ಪ್ರತಿಯೊಬ್ಬ ಚುನಾಯಿತ ಜನ ಪ್ರತಿನಿಧಿಗಳ ಖಾತೆಗಳಿವೆ. ಪ್ರಮುಖ ರಾಜಕಾರಣಿಗಳು ತಮ್ಮದೇ ಆದ ಯೂಟೂಬ್ ಚಾನೆಲ್​ಗಳನ್ನು ಹೊಂದಿದ್ದಾರೆ.
    • ದತ್ತಾಂಶ ಆಧಾರಿತ ಸ್ಟೋರಿಗಳನ್ನು ಪ್ರಸಾರ/ಪ್ರಕಟ ಮಾಡಿ ಅವುಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುವ ಪ್ರಯತ್ನವೂ ಮುಂದುವರಿದಿದೆ. ಇಂತಹ ಪ್ರಯತ್ನಗಳು ತುಲನಾತ್ಮಕವಾಗಿದ್ದು ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts