More

    ಜಿಲ್ಲಾಧಿಕಾರಿ ಎದುರು ತರಹೇವಾರಿ ಅಹವಾಲು

    ಹಿರೇಕೆರೂರ: ರೈತರು ಪಹಣಿ ಪತ್ರಿಕೆಗಳನ್ನು ಪ್ರತಿ ವರ್ಷ ಪರಿಶೀಲನೆ ಮಾಡುವ ಮೂಲಕ ಆಗಿರುವ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

    ತಾಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಜಮೀನಿನಲ್ಲಿರುವ ಗಡಿ ಗುರುತಿಸುವ ಕಲ್ಲುಗಳನ್ನು ರೈತರೇ ಸಂರಕ್ಷಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಸರ್ಕಾರ ದಂಡ ವಿಧಿಸುತ್ತದೆ. ಅಂಗನವಾಡಿ ನೇಮಕಾತಿಯಲ್ಲಿ ವಿಧವೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇಬ್ಬರು ವಿಧವೆಯರು ಇದ್ದಲ್ಲಿ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಕ್ಕರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.

    ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು.

    ‘ಹಿರೇಕೆರೂರ ಪಟ್ಟಣ ವ್ಯಾಪ್ತಿಯಲ್ಲಿ ತಮ್ಮ ಸ್ವಂತ ಜಾಗ ಅತಿಕ್ರಮಣವಾಗಿದೆ. ಇದನ್ನು ತಮ್ಮ ವಶಕ್ಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಆನಂದಮ್ಮ ಹಂಚಿನಮನಿ ಸಂಕಷ್ಟ ತೋಡಿಕೊಂಡರು. ಜಿಲ್ಲಾಧಿಕಾರಿ, ಕೂಡಲೆ ಇದನ್ನು ಪರಿಶೀಲಿಸುವಂತೆ ಸೂಚಿಸಿದರು.

    ಕೆರೆ ಒಡ್ಡು ಒಡೆದು ಬೆಳೆ ಹಾನಿ ಉಂಟಾಗಿದ್ದರೂ ಪರಿಹಾರ ದೊರೆತಿಲ್ಲ. ಆದರೆ, ಬೇರೆಯವರಿಗೆ ಪರಿಹಾರ ದೊರಕಿದೆ. ಜಮೀನಿನಲ್ಲಿ ಹಾಕಿರುವ ಬಾಂದಗಲ್ ಹಾಳಾಗಿವೆ. ಸರ್ಕಾರದ ವತಿಯಿಂದ ಬಾಂದಗಲ್ ಹಾಕಿಸಿಕೊಡಿ. ಕೆರೆ ಒತ್ತುವರಿಯಾಗಿದೆ ತೆರವುಗೊಳಿಸಿ, ಹೊಲದ ಸರ್ವೆ ಕಾರ್ಯ ವರ್ಷಾನುಗಟ್ಟಲೇ ವಿಳಂಬವಾಗಿದೆ, ಸರ್ವೆ ಕಾರ್ಯವನ್ನು ಚುರುಕುಗೊಳಿಸಿ ಎಂದು ಹಲವು ರೈತರು ಮನವಿ ಸಲ್ಲಿಸಿದರು. ಎಲ್ಲ ಅರ್ಜಿಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಸ್ಥಳದಲ್ಲೇ ಉಪಸ್ಥಿತರಿದ್ದ ಡಿಡಿಎಲ್​ಆರ್ ಅವರಿಗೆ, ಗ್ರಾಮಕ್ಕೆ ವಿಶೇಷ ಸರ್ವೆಯರ್ ನಿಯೋಜಿಸಿ ತ್ವರಿತವಾಗಿ ಸರ್ವೆ ಕಾರ್ಯವನ್ನು ಮುಗಿಸಿಕೊಡಲು ಸೂಚಿಸಿದರು.

    ಶಾಲಾ ವಿದ್ಯಾರ್ಥಿನಿ ಹೇಮಾ ಬಣಕಾರ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ದೂದಿಹಳ್ಳಿಯಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಶೇ. 25ರಷ್ಟು ಸ್ಥಳೀಯ ಮಕ್ಕಳಿಗೆ ಪ್ರವೇಶ ಕಲ್ಪಿಸಬೇಕು. ಪ್ರಾಥಮಿಕ ಶಾಲೆಗೆ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡಿಕೊಡಬೇಕು. ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಆವರಣಗೋಡೆ ನಿರ್ಮಾಣ ಮಾಡಬೇಕು ಎಂದು ಕೋರಿ ಎಲ್ಲರ ಗಮನ ಸೆಳೆದಳು. ಈ ಕುರಿತು ಪರಿಶೀಲಿಸಿ ಕ್ರಮವಹಿಸುವುದಾಗಿ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ಹಾಗೂ ಸಿಇಒ ಭರವಸೆ ನೀಡಿದರು.

    ಮಹಿಳೆಯೊಬ್ಬರು ದೇವಾಲಯ ಸಮಿತಿ ನಮ್ಮ ನಿವೇಶನ ಒತ್ತುವರಿ ಮಾಡಿಕೊಂಡಿರುವ ಕುರಿತು ವೇದಿಕೆಯಲ್ಲಿ ಗೋಳಾಡಿದರು. ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸುವುದಾಗಿ ಮಹಿಳೆಯನ್ನು ಸಮಾಧಾನಪಡಿಸಲಾಯಿತು. ದೂದೀಹಳ್ಳಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿಯೇ ತಿಪ್ಪೆಗಳನ್ನು ಹಾಕಿದ್ದಾರೆ. ಎತ್ತಿನ ಗಾಡಿಗಳನ್ನು ಸಹ ರಸ್ತೆಯಲ್ಲಿಯೇ ನಿಲ್ಲಿಸುತ್ತಾರೆ, ಇದಕ್ಕೆ ತಿಳಿವಳಿಕೆ ಹೇಳಲು ಹೋದರೆ ಜಗಳವಾಡುತ್ತಾರೆ ಎಂದು ಗ್ರಾಮದ ಕರಬಸಪ್ಪ ಬಂಗಿಗೌಡ್ರ ಆರೋಪಿಸಿದರು.

    ಗ್ರಾಮ ವಾಸ್ತವ್ಯ ಅಂಗವಾಗಿ ಗ್ರಾಮೀಣ ಜನರಿಗೆ ವಿವಿಧ ಇಲಾಖೆಯ ಯೋಜನೆಗಳ ಪರಿಚಯಮಾಡಿಕೊಡಲು ಹಾಕಲಾಗಿದ್ದ ಪ್ರದರ್ಶನ ಮಳಿಗೆಗಳು ಎಲ್ಲರ ಗಮನ ಸೆಳೆದವು.

    ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಸೀಲ್ದಾರ್ ಕೆ.ಎ. ಉಮಾ, ಕೆ.ಗುರುಬಸವರಾಜ, ಗ್ರಾಪಂ ಅಧ್ಯಕ್ಷ ಕರಬಸಪ್ಪ ಗಡಿಯಣ್ಣನವರ, ತಾಪಂ ಸದಸ್ಯೆ ಗಂಗಮ್ಮ ಹರಿಜನ, ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ ಮಾರವಳ್ಳಿ ಹಾಗೂ ಇತರ ಅಧಿಕಾರಿಗಳಿದ್ದರು.

    2 ವರ್ಷವಾದರೂ ನೇಮಕವಿಲ್ಲ

    ತಾಲೂಕಿನ ದೀವಿಗಿಹಳ್ಳಿ ಗ್ರಾಮದ ಹನುಮಗೌಡ ಕೋಡಿಗೌಡ್ರ ಎಂಬ ವೃದ್ಧ ತಮ್ಮ ಮೊಮ್ಮಗಳು ವಿಧವೆಯಾಗಿದ್ದಾಳೆ. ಈಕೆಯನ್ನು ಅಂಗನವಾಡಿ ಸಹಾಯಕಿ ಹುದ್ದೆಗೆ ಆಯ್ಕೆಯಾಗಿದ್ದು, 2 ವರ್ಷವಾದರೂ ನೇಮಕ ಆದೇಶ ನೀಡಿಲ್ಲ, ನಿತ್ಯ ಕಚೇರಿಗೆ ಅಲೆಡಾಡುತ್ತಿದ್ದು, ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

    ಸ್ಮಶಾನ ಭೂಮಿಗೆ ಮನವಿ

    ಚಿಕ್ಕೇರೂರು ಗ್ರಾಮ ಕುಂತಿಗುಡ್ಡದಲ್ಲಿರುವ ಗೋಮಾಳದಲ್ಲಿ ಮನೆ ನಿರ್ವಿುಸಿಕೊಂಡವರಿಗೆ ಪಟ್ಟಾ ಕೊಡಬೇಕು ಎಂದು ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರು. ಗ್ರಾಮದ ಭೋವಿ ಜನಾಂಗಕ್ಕೆ ಸ್ಮಶಾನ ನೀಡಲು ಮನವಿ ಸಲ್ಲಿಸಿದರು. ಜಾಗ ಕೊಡುವವರು ಮುಂದೆ ಬಂದರೆ ಸರ್ಕಾರದಿಂದ ಖರೀದಿಸಿ ತಕ್ಷಣ ಮಂಜೂರು ಮಾಡಲಾಗುವುದು ಜಿಲ್ಲಾಧಿಕಾರಿ ಭರವಸೆ ನೀಡಿದರು.

    ತ್ರಿಚಕ್ರ ವಾಹನಕ್ಕೆ ಬೇಡಿಕೆ

    ದೂದೀಹಳ್ಳಿ ಗ್ರಾಮದ ಬಸವರಾಜ ಬಾಳಿಕಾಯಿ ಎಂಬ ಅಂಗವಿಕಲ ತ್ರಿಚಕ್ರ ವಾಹನ ನೀಡಲು ಮನವಿ ಸಲ್ಲಿಸಿದರು. ತಮ್ಮ ಖಾಲಿ ಜಾಗವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇರೆಯವರ ಹೆಸರಿಗೆ ದಾಖಲು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತಹಸೀಲ್ದಾರ್ ಕೋರ್ಟ್​ಗೆ ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಕುಡುಪಲಿ ಗ್ರಾಮದ ಇಬ್ರಾಹಿಂಸಾಬ್ ದೊಡ್ಡಮನಿ ಎಂಬುವರು ಜಿಲ್ಲಾಧಿಕಾರಿಗೆ ದೂರು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts