More

    ಪುರಭವನ ಮುಂಭಾಗದ ಗಾಂಧಿ ಉದ್ಯಾನಕ್ಕೆ ಸ್ಮಾರ್ಟ್‌ಲುಕ್

    ಮಂಗಳೂರು: ಕುದ್ಮುಲ್ ರಂಗರಾವ್ ಪುರಭವನದ ಬಳಿಯ ಪಾದಚಾರಿ ಅಂಡರ್‌ಪಾಸ್(ಪೆಡೆಸ್ಟ್ರಿಯನ್ ಪ್ಲಾಜಾ) ಕಾಮಗಾರಿ ಈಗಾಗಲೇ ಮುಗಿದು ಲೋಕಾರ್ಪಣೆಗೊಂಡಿದ್ದು, ಅಂಡರ್‌ಪಾಸ್ ಮಧ್ಯೆಯಿರುವ ಗಾಂಧಿಪಾರ್ಕ್‌ಗೆ ಸ್ಮಾರ್ಟ್‌ಲುಕ್ ನೀಡಲಾಗಿದೆ.
    ಇಲ್ಲಿ ಸುಸಜ್ಜಿತ ಬಯಲು ರಂಗ ಮಂದಿರವೂ ಸೇರಿದಂತೆ, ಗಾಂಧಿ ಪ್ರತಿಮೆ ಮರುನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಅದರ ಭಾಗವಾಗಿಯೇ ಪ್ರಸ್ತುತ ಅಂಡರ್‌ಪಾಸ್‌ನಲ್ಲಿರುವ ಗಾಂಧಿಪಾರ್ಕ್ ಹಸಿರಿನಿಂದ ಕಂಗೊಳಿಸುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ.

    ಆಕರ್ಷಣೀಯ ಸ್ಥಳ:

    ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಪುರಭವನದ ಮುಂಭಾಗದಲ್ಲಿರುವ ಮಂಗಳೂರಿನ ಹಳೇ ಪಾರ್ಕ್‌ಗಳಲ್ಲಿ ಒಂದಾಗಿದ್ದ ಗಾಂಧಿಪಾರ್ಕ್ ಸಂಪೂರ್ಣ ನಾಶಗೊಂಡಿತ್ತು. ಕಾಮಗಾರಿಯ ಮುಂದಿನ ಭಾಗವಾಗಿ ಪಾರ್ಕ್‌ನ ಮರುನಿರ್ಮಾಣ ಕಾಮಗಾರಿ ನಡೆಸಲು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ನಿರ್ಧರಿಸಿತ್ತು. ಅಂಡರ್‌ಪಾಸ್ ಕಾಮಗಾರಿಗೂ ಮುನ್ನ ಪಾರ್ಕ್ ಯಾವ ಸ್ಥಿತಿಯಲ್ಲಿ ಇತ್ತೋ ಅದಕ್ಕಿಂತ ಸುಂದರವಾಗಿ, ಹಸಿರು ಗಿಡಗಳ ಅಲಂಕಾರದ ನಡುವೆ ಆಕರ್ಷಣೀಯವಾಗಿ ಪಾರ್ಕ್ ಕಂಗೊಳಿಸುತ್ತಿದೆ.

    ಸುಲಭ ಸಂಚಾರ:

    ಕ್ಲಾಕ್ ಟವರ್ ಮತ್ತು ಪುರಭವನದ ನಡುವಿನಲ್ಲಿ ಅಂಡರ್‌ಪಾಸ್ ನಿರ್ಮಾಣದಿಂದ ಸಾರ್ವಜನಿಕರಿಗೆ ರಸ್ತೆ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸಿದಂತಾಗಿದೆ. ಮಿನಿವಿಧಾನಸೌಧದ ಆವರಣ ಬಳಿಯಿಂದ ಲೇಡಿಗೋಷನ್ ರಸ್ತೆ ಹಳೇ ತಾಜ್‌ಮಹಲ್ ಹೋಟೆಲ್‌ವರೆಗೆ ಜನರಿಗೆ ಸಂಚರಿಸಲು ಅಂಡರ್‌ಪಾಸ್ ಅನುಕೂಲವಾಗುತ್ತಿದೆ. ಸೆಂಟ್ರಲ್ ರೈಲು ನಿಲ್ದಾಣಕ್ಕೆ, ಮಿನಿ ವಿಧಾನಸೌಧಕ್ಕೆ ಬಂದು-ಹೋಗುವ ಸಾರ್ವಜನಿಕರಿಗೆ ಹಾಗೂ ಹಂಪನಕಟ್ಟೆ ವಿವಿ ಕಾಲೇಜ್ ವಿದ್ಯಾರ್ಥಿಗಳು ಇದೀಗ ಯಾವುದೇ ಅಳುಕಿಲ್ಲದೆ ರಸ್ತೆಯ ಇನ್ನೊಂದು ಬದಿಗೆ ಹೋಗಬಹುದಾಗಿದೆ. *ಓಪನ್ ಪಾರ್ಕ್:
    ಕ್ಲಾಕ್ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತ ಮಾರ್ಗದಿಂದ ಹ್ಯಾಮಿಲ್ಟನ್ ವೃತ್ತ, ರಾವ್ ಆ್ಯಂಡ್ ರಾವ್ ವೃತ್ತವಾಗಿ ಲೇಡಿಗೋಷನ್ ರಸ್ತೆಯಿಂದ ಮತ್ತೆ ಕ್ಲಾಕ್ ಟವರ್‌ವರೆಗೆ ಏಕಮುಖ ಸಂಚಾರ ಇದೆ. ಹೀಗಾಗಿ ಅಂಡರ್‌ಪಾಸ್ ನಿರ್ಮಾಣದಿಂದ ಹೆಚ್ಚು ಅನುಕೂಲವಾಗುತ್ತದೆಂದು ಪೆಡೆಸ್ಟ್ರಿಯನ್ ಪ್ಲಾಜಾ ನಿರ್ಮಿಸಲಾಗಿದೆ. ಆದರೆ, ಇದರ ಮಧ್ಯೆ ಇರುವ ಹಳೇ ಪಾರ್ಕ್‌ಅನ್ನು ಕಾಮಗಾರಿ ವೇಳೆ ಪ್ರತ್ಯೇಕ ಅನುದಾನ ಬಳಸಿ ಅಭಿವೃದ್ಧಿ ಮಾಡಲಾಗಿದೆ. ಮೊದಲಿಗೆ 9 ಕೋಟಿ ರೂ. ಇದ್ದ ಅಂಡರ್‌ಪಾಸ್ ಕಾಮಗಾರಿ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಅದರಂತೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಅಂಡರ್‌ಪಾಸ್ ಒಳಗಿರುವ ಓಪನ್ ಪಾರ್ಕ್‌ಗೆ ಹೊಸ ರೂಪ ನೀಡಲಾಗಿದೆ.

    ಸ್ಮಾರ್ಟ್‌ಸಿಟಿಯ ವಿಭಿನ್ನ ಪರಿಕಲ್ಪನೆ:

    ರಾಜ್ಯದ ಬಹುತೇಕ ನಗರಗಳಲ್ಲಿರುವ ಅಂಡರ್‌ಪಾಸ್ ಪೂರ್ಣಪ್ರಮಾಣದಲ್ಲಿ ಮುಚ್ಚಲ್ಪಟ್ಟ ರೀತಿಯಲ್ಲಿರುತ್ತದೆ. ಆದರೆ, ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ನಿರ್ಮಿಸಿದ ಮೊದಲ ಅಂಡರ್‌ಪಾಸ್ ವಿಭಿನ್ನ ಪರಿಕಲ್ಪನೆಯಿಂದ ಕೂಡಿದೆ. ಮೊದಲು ಅಂಡರ್‌ಪಾಸ್‌ನೊಳಗೆ ಪ್ರವೇಶ, ನಂತರ ಪಾರ್ಕ್ ರಸ್ತೆ, ಪಾರ್ಕ್‌ನೊಳಗೆ ಪ್ರವೇಶಿಸುತ್ತಿದ್ದಂತೆ ಸುಸಜ್ಜಿತ ಬಯಲು ರಂಗ ಮಂದಿರ, ಹುಲ್ಲುಹಾಸು, ಹೂಗಿಡಗಳ ಸಾಲು, ಮತ್ತೆ ಅಂಡರ್‌ಪಾಸ್ ಬಳಿಕ ಹೊರ ಹೋಗಲು ದಾರಿ. ಆದಿ-ಅಂತ್ಯ ಮಾತ್ರವಲ್ಲದೆ, ಅಂಡರ್‌ಪಾಸ್‌ನ ಮಧ್ಯದಲ್ಲಿ ಎರಡು ಕಡೆಯಲ್ಲಿ ಮೇಲೆ ಬರಲು ಅಥವಾ ಒಳಕ್ಕೆ ಹೋಗಲು ಅವಕಾಶ ಇದೆ. ಮಿನಿವಿಧಾನ ಸೌಧದ ಬಳಿ ಅಂಡರ್‌ಪಾಸ್‌ನಲ್ಲಿ ಇಳಿದವರು ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರುಕಟ್ಟೆಗೆ ಹೋಗಬೇಕು ಎಂದಿದ್ದರೆ, ಅಂಡರ್‌ಪಾಸ್‌ನ ಕೊನೇ ಭಾಗದಲ್ಲಿ ಮೇಲಕ್ಕೆ ಬಂದು ಸಾಗಬಹುದು. ಇದರ ನಡುವೆ ನೆಹರು ಮೈದಾನದ ಕಡೆಗೆ ಹೋಗುವವರಿದ್ದರೆ, ಪಾರ್ಕ್‌ನ ಆರಂಭದ ಭಾಗದಲ್ಲಿ ಮೇಲೆ ಬಂದು ಪುರಭವನ, ನೆಹರು ಮೈದಾನ ಕಡೆಗೆ ಸಾಗಬಹುದು. ಬಸ್‌ನಿಲ್ದಾಣಕ್ಕೆ ಹೋಗಬೇಕು ಎನ್ನುವವರು ಪಾರ್ಕ್‌ನ ಇನ್ನೊಂದು ಭಾಗದಲ್ಲಿ ಮೇಲಕ್ಕೆ ಬಂದು ಹೋಗಲು ವಿಶಿಷ್ಟವಾಗಿ ನಿರ್ಮಿಸಲಾಗಿದೆ.


    ಸ್ಮಾರ್ಟ್ ಸಿಟಿಯಿಂದ ಪುರಭವನದ ಮುಂಭಾಗ ಪಾದಚಾರಿ ಅಂಡರ್‌ಪಾಸ್(ಪೆಡೆಸ್ಟ್ರಿಯನ್ ಪ್ಲಾಜಾ) ನಿರ್ಮಾಣಗೊಂಡಿದೆ. ಇಲ್ಲಿದ್ದ ಹಳೇ ಪಾರ್ಕ್‌ಅನ್ನು ಮರುನಿರ್ಮಾಣ ಮಾಡಲು ಪಾಲಿಕೆ ಸ್ಮಾರ್ಟ್‌ಸಿಟಿಗೆ ಸೂಚಿಸಿದ್ದು, ಆ ಕಾರ್ಯವೂ ಅಂತಿಮ ಹಂತದಲ್ಲಿದೆ. ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ನಿರ್ಮಾಣದ ಮೊದಲ ಓಪನ್ ಪಾರ್ಕ್ ಸಹಿತ ಅಂಡರ್‌ಪಾಸ್ ಯೋಜನೆ ವಿಭಿನ್ನ ಪರಿಕಲ್ಪನೆಯಿಂದ ಕೂಡಿದೆ.
    ಜಯಾನಂದ ಅಂಚನ್, ಮೇಯರ್ ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts