More

    ತೆವಳುತ್ತಿದೆ ಸ್ಮಾರ್ಟ್ ಸಿಟಿ ಯೋಜನೆ

    ಮಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸದೆ ಮುಂದುವರಿಯುತ್ತಿರುವ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿನಲ್ಲಿ ಸೃಷ್ಟಿಸಿರುವ ಅಧ್ವಾನಗಳು ಒಂದೆರಡಲ್ಲ.

    ನಿಗದಿತ ಅವಧಿಗಿಂತ ತುಂಬಾ ತಡವಾಗಿ ಟೇಕಾಫ್ ಆದ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಧಾವಂತದಲ್ಲಿ ನಗರ ಹಾಗೂ ಆಸುಪಾಸಿನಲ್ಲಿ ಸಾರ್ವಜನಿಕರ ಸಹಜ ಓಡಾಟಕ್ಕೆ ಕುತ್ತು ತಂದಿದೆ. ನಗರದ ಪ್ರಧಾನ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಆರಂಭಗೊಂಡ ಕಾರಣ ಜನರು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಮಗಾರಿ ಕೈಗೊಂಡಿರುವ ರಸ್ತೆಗಳ ವ್ಯಾಪಾರ ಕೇಂದ್ರಗಳು ಗ್ರಾಹಕರು ಇಲ್ಲದೆ ನಷ್ಟ ಅನುಭವಿಸುತ್ತಿವೆ. ಧೂಳಿನ ಭೀತಿಯಿಂದ ಕೆಲ ಹಿರಿಯ ನಾಗರಿಕರು ಸಾಯಂಕಾಲದ ವಾಕಿಂಗ್ ಅಭ್ಯಾಸ ನಿಲ್ಲಿಸಿದ್ದಾರೆ. ನಾಲ್ಕು ಆಸ್ಪತ್ರೆ, ಆರು ಶಿಕ್ಷಣ ಕೇಂದ್ರಗಳ ಸಂಪರ್ಕ ಹೊಂದಿರುವ ಮಲ್ಲಿಕಟ್ಟೆ ರಸ್ತೆ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಕಳೆದ ಸುಮಾರು ಆರು ತಿಂಗಳಿಂದ ನಿರ್ಬಂಧಿಸಲ್ಪಟ್ಟಿದೆ.

    ಕಾಮಗಾರಿ ಸ್ಥಿತಿಗತಿ: ಪ್ರಸ್ತುತ 18 ಕಾಮಗಾರಿಗಳು ಪೂರ್ಣಗೊಂಡಿದ್ದು, 25 ಕಾಮಗಾರಿಗಳು ಪ್ರಗತಿಯಲ್ಲಿವೆ. 3 ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ. ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೊಸ ಬ್ಲಾಕ್‌ನಲ್ಲಿ 37 ಐಸಿಯು ಹಾಸಿಗೆಗಳ ವಿಭಾಗ, 27 ಸರ್ಕಾರಿ ಕಟ್ಟಡಗಳಿಗೆ ಎಲ್‌ಇಡಿ ವಿದ್ಯುತ್, ಸ್ಮಾರ್ಟ್ ಬಸ್ ನಿಲ್ದಾಣ, ಕ್ಲಾಕ್ ಟವರ್, ಇ ಸ್ಮಾರ್ಟ್ ಶಾಲೆ ಪೂರ್ಣಗೊಂಡ ಕೆಲವು ಪ್ರಮುಖ ಕಾಮಗಾರಿಗಳು.

    ಕಮಾಂಡ್ ಕಂಟ್ರೋಲ್ ಕಟ್ಟಡ ನಿರ್ಮಾಣ, ಎಲ್‌ಇಡಿ ಬೀದಿ ದೀಪ, ಲೇಡಿಗೋಶನ್ ಆಸ್ಪತ್ರೆ ಮೇಲ್ದರ್ಜೆ, ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್, ಕ್ಲಾಕ್‌ಟವರ್ ಸಮೀಪ ಪಾದಚಾರಿಗಳಿಗೆ ಅಂಡರ್‌ಪಾಸ್ ರಸ್ತೆ, ಮಂಗಳಾ ಕ್ರೀಡಾಂಗಣ ನವೀಕರಣ, ಒಳಚರಂಡಿ ಕಾಮಗಾರಿಗಳು, ಪ್ರವಾಸೋದ್ಯಮಕ್ಕೆ ಪೂರಕವಾಗಿ ಕದ್ರಿ ಉದ್ಯಾನವನ ರಸ್ತೆ ಅಭಿವೃದ್ಧಿ, 24*7 ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಪ್ರಗತಿಯಲ್ಲಿರುವ ಕೆಲವು ಪ್ರಧಾನ ಕಾಮಗಾರಿಗಳು. ಜಲಾಭಿಮುಖ ಅಭಿವೃದ್ಧಿ ಸಹಿತ ಮೂರು ಕಾಮಗಾರಿಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ.

    ಕಾಲಾವಧಿ ವಿಸ್ತರಣೆ: 2015-16ರಲ್ಲಿ ಆರಂಭವಾದ ಈ ಯೋಜನೆಯ ಕಾಮಗಾರಿಗಳನ್ನು 2022 ಮಾರ್ಚ್‌ನಲ್ಲಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಸರ್ಕಾರ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು 2023 ಮಾರ್ಚ್ ತನಕ ಕಾಲಾವಕಾಶ ಒದಗಿಸಿದೆ. ಕಾಮಗಾರಿ ವಿಳಂಬಕ್ಕೆ ಕೋವಿಡ್ ನೆಪ ಮುಂದಿಡಲಾಗಿದೆ.

    ಎಷ್ಟು ಅನುದಾನ ಬಿಡುಗಡೆ?: ನಿಗದಿಪಡಿಸಿದ ಒಟ್ಟು ಅನುದಾನ ಕೇಂದ್ರ ಮತ್ತು ರಾಜ್ಯ ಸೇರಿ 100 ಕೋಟಿ ರೂಪಾಯಿ. ಇದರಲ್ಲಿ 930 ಕೋಟಿ ರೂ. ಯೋಜನೆಗಳಿಗೆ ಹಾಗೂ ಆಡಳಿತ ಮತ್ತು ಇತರ ವೆಚ್ಚಗಳಿಗೆ 70 ಕೋಟಿ ರೂ. ನಿಗದಿಪಡಿಸಲಾಗಿದೆ. ಪ್ರಸ್ತುತ ಕೇಂದ್ರದಿಂದ 296 ಕೋಟಿ ರೂ. ಹಾಗೂ ರಾಜ್ಯದಿಂದ 300 ಕೋಟಿ ರೂ. ಸೇರಿ ಒಟ್ಟು 596 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 370 ಕೋಟಿ ರೂ ಕಾಮಗಾರಿ ಪೂರ್ಣಗೊಂಡಿದೆ.

    ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಲಾಗಿಲ್ಲ. ಯೋಜನೆ ರೂಪಿಸುವ ಸಂದರ್ಭ ಎನ್‌ಜಿಒ ಮತ್ತು ರೆಶಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಶನ್ ಸಹಿತ ಜನರ ಸಹಭಾಗಿತ್ವ ಪಡೆಯಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಆದರೆ ಪ್ರಸ್ತಾವಿತ ಯೋಜನೆಯಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶ ಒದಗಿಸಲಾಗಿಲ್ಲ. ಆಡಳಿತ ವ್ಯವಸ್ಥೆಯೇ ನೇಮಿಸಿದ ಕಾನೂನು ಸಲಹೆಗಾರರ ಆಧೀನದಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ. ಆರ್ಥಿಕ ತಜ್ಞರ ಉಪಸ್ಥಿತಿಯಲ್ಲೇ ಆರ್ಥಿಕ ಮೂಲದ ದುರುಪಯೋಗ ಆಗುತ್ತಿದೆ.

    ಪದ್ಮನಾಭ ಉಳ್ಳಾಲ, ನಿವೃತ್ತ ಇಂಜಿನಿಯರ್, ಮನಪಾ

    ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಂಗೀತ ಕಾರಂಜಿ ಮೂರು ತಿಂಗಳು ಕೂಡ ಕಾರ್ಯಾಚರಿಸಿಲ್ಲ. ಹೊಸ ಕ್ಲಾಕ್ ಟವರ್ ಅಗಲಗೊಂಡ ರಸ್ತೆಯ ನಡುವೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕಾಮಗಾರಿ ದೀರ್ಘಕಾಲ ಮುಂದುವರಿದ ಕಾರಣ ಕದ್ರಿ ದೇವಸ್ಥಾನ ಸಮೀಪ ಫುಟ್‌ಪಾತ್‌ಗೆ ಹಾಕಲು ತಂದಿಟ್ಟ ಟೈಲ್ಸ್ ಬಾಕ್ಸ್‌ಗಳಲ್ಲಿ ಹಲವು ಕಳವಾಗಿದೆ. ಹಂಪನಕಟ್ಟೆಯಲ್ಲಿ ಫುಟ್‌ಪಾತ್‌ಗೆ ಹಾಕಿರುವ ಸ್ಟೀಲ್ ರೇಲಿಂಗ್ ವರ್ಷದೊಳಗೆ ತುಕ್ಕು ಹಿಡಿಯಲಿದೆ. ಯೋಜನೆಯಲ್ಲಿ ಇಂತಹ ಎಡವಟ್ಟುಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.

    ಜೆರಾಲ್ಡ್ ಟವರ್, ಸಾಮಾಜಿಕ ಕಾರ್ಯಕರ್ತ

    ಮಂಗಳೂರು ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಲಮಿತಿಯಲ್ಲಿ (2023 ಮಾರ್ಚ್) ಪೂರ್ಣಗೊಳ್ಳಲಿದೆ. ಆರಂಭದಲ್ಲಿ ಕೋವಿಡ್ ಕಾರಣದಿಂದ ಕಾಮಗಾರಿ ಸ್ವಲ್ಪ ವಿಳಂಬವಾದರೂ ಈಗ ಸುಸೂತ್ರವಾಗಿ ನಡೆಯುತ್ತಿದೆ.

    ಅರುಣ್ ಪ್ರಭ ಕೆ.ಎಸ್, ಜನರಲ್ ಮ್ಯಾನೇಜರ್(ಆಡಳಿತ), ಮಂಗಳೂರು ಸ್ಮಾರ್ಟ್ ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts