More

    ಮತ್ತೆ ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆ

    ಭರತ್ ಶೆಟ್ಟಿಗಾರ್, ಮಂಗಳೂರು

    ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿವೆ. ದೊಡ್ಡ ಕೈಗಾರಿಕೆಗಳಿಗೆ ಕಾರ್ಯಾಚರಣೆಗೆ ಅವಕಾಶ ನೀಡಿರುವ ಸರ್ಕಾರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳನ್ನು ಮುಚ್ಚುವಂತೆ ನೀಡಿರುವ ಆದೇಶವೂ ದುಬಾರಿಯಾಗಿ ಪರಿಣಮಿಸಿದ್ದು, ಶಾಶ್ವತವಾಗಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಎಂಎಸ್‌ಎಂಇಗಳಿದ್ದು, ಲಕ್ಷದ ವರೆಗೆ ಉದ್ಯೋಗಿಗಳಿದ್ದಾರೆ. ಪ್ರಸ್ತುತ ಅಗತ್ಯ ಸೇವೆ ನೆಲೆಯಲ್ಲಿ ಆಹಾರ ಸಂಸ್ಕರಣೆ ಯುನಿಟ್ ಮತ್ತು ಅದಕ್ಕೆ ಸಂಬಂಧಿಸಿದ ಪ್ಯಾಕೇಜಿಂಗ್ ಘಟಕಗಳು, ಫಾರ್ಮಾ ಸಂಸ್ಥೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದು ಒಟ್ಟು ಕೈಗಾರಿಕೆಗಳ ಶೇ.20ರಷ್ಟು ಮಾತ್ರ. ಬಹುತೇಕ ಘಟಕಗಳಲ್ಲಿ ಒಂದು ತಿಂಗಳಿನಿಂದ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿದ್ದು, ಲಾಕ್‌ಡೌನ್ ಘೋಷಣೆಗೂ ಮೊದಲು ಉತ್ಪಾದನೆಯಾಗಿರುವ ಉತ್ಪನ್ನಗಳು ಗೋಡೌನ್‌ಗಳಲ್ಲಿ ಬಾಕಿಯಾಗಿ, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರದಿಂದ ಸಹಾಯಹಸ್ತ ಸಿಗದಿದ್ದರೆ ಇದರಲ್ಲಿ ಅರ್ಧದಷ್ಟು ಕೆಲಸಗಾರರ ಬದುಕು ಬೀದಿಗೆ ಬರುವ ಸಾಧ್ಯತೆಯಿದೆ.

    ದೊಡ್ಡ ಕೈಗಾರಿಕೆಗಳಿಗೆ ಕೆಲವೊಂದು ಅಗತ್ಯ ಉತ್ಪನ್ನಗಳನ್ನು ಸಣ್ಣ ಕೈಗಾರಿಕೆಗಳೇ ಪೂರೈಸುತ್ತವೆ. ಉದಾಹರಣೆಗೆ ಸಣ್ಣ ಕೈಗಾರಿಕೆಗಳಲ್ಲಿ ತಯಾರಾಗುವ ನಟ್, ಬೋಲ್ಟ್, ಸ್ಕ್ರೂನಂತಹ ಉತ್ಪನ್ನಗಳು ದೊಡ್ಡ ಕೈಗಾರಿಕೆಗಳು ಉತ್ಪಾದಿಸುವ ಯಂತ್ರೋಪಕರಣಗಳ ಜೋಡಣೆಗೆ ಅವಶ್ಯ. ಪ್ರಸ್ತುತ ಸಣ್ಣ ಕೈಗಾರಿಕೆಗಳು ಮುಚ್ಚಿರುವುದರಿಂದ ದೊಡ್ಡ ಕೈಗಾರಿಕೆಗಳು ಹೊರ ರಾಜ್ಯದ ಸಣ್ಣ ಕೈಗಾರಿಕೆಗಳ ಮೊರೆ ಹೋಗಿದ್ದು, ಅಲ್ಲಿಂದ ಪೂರೈಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನೇ ಮುಂದುವರಿಸಿದರೆ ಇಲ್ಲಿನ ಕೈಗಾರಿಕೆಗಳು ಮುಚ್ಚುವುದು ಖಚಿತ. ಇನ್ನೊಂದೆಡೆ ಕೈಗಾರಿಕೆಗಳಿಗೆ ಬೇಕಾದ ಆಕ್ಸಿಜನ್ ಕೂಡ ಪೂರೈಕೆಯಾಗುತ್ತಿಲ್ಲ. ಶೇ.100ರಷ್ಟು ವೈದ್ಯಕೀಯ ಬಳಕೆಗೆ ಹೋಗುತ್ತಿವೆೆ. ಈ ತಿಂಗಳ ವೇತನ ನೀಡುವುದು ಹೇಗೆ ಎನ್ನುವ ಚಿಂತೆ ಕೈಗಾರಿಕೆಗಳ ಮಾಲೀಕರದ್ದಾಗಿದೆ.

    ಸರ್ಕಾರ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ತಕ್ಷಣ ಎಲ್ಲ ಕೈಗಾರಿಕೆಗಳನ್ನು ತೆರೆಯಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರ ಕಳೆದ ಬಾರಿ ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ. ಮೊತ್ತದ ತುರ್ತು ಸಾಲ ಖಾತ್ರಿ ಯೋಜನೆ ಜಾರಿಗೆ ತಂದಿತ್ತು. ಈ ಬಾರಿಯೂ ಅದೇ ಮಾದರಿಯ ಯೋಜನೆ ಜಾರಿಗೆ ತರಬೇಕು ಎನ್ನುವುದು ಸಂಘದ ಪ್ರಮುಖರ ಆಗ್ರಹವಾಗಿದೆ.

    ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶ: ವಿದ್ಯುತ್ ಬಿಲ್ ಪಾವತಿಸದ ಘಟಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಹಿಂದಿನ ಬಿಲ್ ಪಾವತಿಸಲು ಕನಿಷ್ಠ ಜುಲೈವರೆಗೆ ಅವಕಾಶ ನೀಡಬೇಕು. ಕಳೆದ ವರ್ಷದಂತೆ ರಾಜ್ಯದಲ್ಲಿ ಎಂಎಸ್‌ಎಂಇಗಳ ವಿದ್ಯುತ್ ಬಿಲ್‌ಗಳಲ್ಲಿರುವ ಫಿಕ್ಸ್‌ಡ್ ಚಾರ್ಜ್‌ಗಳನ್ನು ಮುಂದಿನ ಮೂರು ತಿಂಗಳವರೆಗೆ ಮನ್ನಾ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆ. ಮುಖ್ಯಮಂತ್ರಿ, ಕೈಗಾರಿಕಾ ಸಚಿವರು ತಕ್ಷಣ ಕೈಗಾರಿಕಾ ಸಂಘಗಳ ಪ್ರಮುಖರ ಸಭೆ ಕರೆದು ಸಣ್ಣ ಕೈಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

    18 ಬೇಡಿಕೆ ಈಡೇರಿಸಿ
    ಪ್ರಧಾನಿಗೆ ಪತ್ರ ಬರೆದ ಕೆಸಿಸಿಐ
    ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರಧಾನಿಗೆ ಪತ್ರ ಬರೆದಿದ್ದು, 18 ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ.
    ಮುಂದಿನ 3-6 ತಿಂಗಳಿನವರೆಗೆ ಪೆಟ್ರೋಲ್/ ಡೀಸೆಲ್ ಬೆಲೆ ಏರಿಕೆ ಮಾಡಬಾರದು. ಆಸ್ತಿ, ವಾಹನ, ಆದಾಯ ತೆರಿಗೆ, ಜಿಎಸ್‌ಟಿ ಏರಿಕೆಗೆ ತಡೆ, ವಿದ್ಯುತ್ ದರ ಇಳಿಕೆ ಜತೆಗೆ ಬಡ್ಡಿ ಮನ್ನಾ, ಜಿಎಸ್‌ಟಿಯಡಿ ಫೈಲ್ ಮಾಡುವ ದಿನಾಂಕ ವಿಸ್ತರಣೆ, ಸಹಕಾರಿ ಮತ್ತು ಕಾರ್ಪೋರೇಟ್ ಕ್ಷೇತ್ರದಲ್ಲಿ ವಾರ್ಷಿಕ ಮಹಾಸಭೆ ಆಯೋಜನೆ ಮತ್ತು ಟಿಡಿಎಸ್ ಕಂಪ್ಲಾಯನ್ಸ್ ಮತ್ತು ಬಡ್ಡಿ ದರ ಕಡಿತ ವಿಸ್ತರಿಸಬೇಕು. ಸಾಲದ ಕಂತು ರಿಯಾಯಿತಿ, ಎಂಎಸ್‌ಎಂಇಗಳಿಗೆ ಎಸ್ಕಾಂಗಳ ಠೇವಣಿ ಶುಲ್ಕಗಳನು ್ನಮನ್ನಾ, ಸಾಲದ ಇಎಂಐ ಪಾವತಿ ಮುಂದೂಡಿಕೆ, ಇಎಸ್‌ಐನಿಂದ ಕಾರ್ಮಿಕರ ವೇತನವನ್ನು ಇಎಸ್‌ಐ ಸಂಬಳ ಎಂದು ನೇರ ಪಾವತಿಗೆ ವ್ಯವಸ್ಥೆ, ಆರ್‌ಬಿಐ ಮತ್ತು ಹಣಕಾಸು ಸಚಿವರಿಂದ ಹೊಸ ಪರಿಹಾರ ಘೋಷಣೆ, ಟ್ರಾವೆಲ್, ಹೋಟೆಲ್, ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್, 2020-21ನೇ ಸಾಲಿನ ಆದಾಯ ತೆರಿಗೆ ಪಾವತಿ ಕೊನೇ ದಿನಾಂಕವನ್ನು ಜೂ.30ಕ್ಕೆ ವಿಸ್ತರಿಸಬೇಕು ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಪತ್ರದ ಪ್ರತಿಯನ್ನು ಕಳುಹಿಸಲಾಗಿದೆ.

    ಸಣ್ಣ ಕೈಗಾರಿಕೆಗಳು ನಷ್ಟದ ಹಾದಿಯಲ್ಲಿವೆ. ಕಳೆದ ಅವಧಿಯಲ್ಲಿ 15 ದಿನಗಳು ಮಾತ್ರ ಸಂಪೂರ್ಣ ಬಂದ್ ಇತ್ತು, ಬಳಿಕ ಹಂತ ಹಂತವಾಗಿ ಆರಂಭವಾಗಿದೆ. ಆದರೆ ಈ ಬಾರಿ ಜೂ.7ರ ವರೆಗೆ ಅವಕಾಶ ಸಿಗದಿದ್ದರೆ ಒಟ್ಟು 45 ದಿನ ಮುಚ್ಚಿದಂತಾಗುತ್ತದೆ. ಬೆಂಗಳೂರನ್ನು ಮಾದರಿಯಾಗಿರಿಸಿ, ರಾಜ್ಯದ ಎಲ್ಲೆಡೆ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನೀಡದಿರುವ ನಿರ್ಧಾರ ಸರಿಯಲ್ಲ.

    ಅಜಿತ್ ಕಾಮತ್, ಅಧ್ಯಕ್ಷ, ಕೆನರಾ ಸಣ್ಣ ಕೈಗಾರಿಕೆಗಳ ಸಂಘ

    ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಕೈಗಾರಿಕಾ ಸಚಿವರು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳ ಜತೆ ಸಭೆ ನಡೆಸಿ ಎಂಎಸ್‌ಎಂಇಗಳ ಕಷ್ಟ ತಿಳಿದು ತುರ್ತು ಪರಿಹಾರ ಘೋಷಿಸಬೇಕು.

    ಪ್ರದೀಪ್ ಜಿ. ಪೈ, ಸಂಚಾಲಕ, ಬಿಜೆಪಿ ಕೈಗಾರಿಕಾ ಪ್ರಕೋಷ್ಠ

    ಜಿಲ್ಲೆಯಲ್ಲಿ ಸುಮಾರು 6 ಸಾವಿರ ಸಣ್ಣ ಕೈಗಾರಿಕೆಗಳಿದ್ದು, ಅಗತ್ಯ ವಸ್ತು ಉತ್ಪಾದಿಸುವ ಶೇ.25ರಷ್ಟು ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಸಂಕಷ್ಟ ಎದುರಿಸುತ್ತಿರುವ ಕೈಗಾರಿಕೆಗಳ ಪುನಶ್ಚೇತನಕ್ಕೆ ಸರ್ಕಾರ ಕಳೆದ ವರ್ಷದಂತೆ ಆರ್ಥಿಕ ಪ್ಯಾಕೇಜ್ ಮುಂದುವರಿಸಬೇಕು. 6 ತಿಂಗಳವರೆಗೆ ಸಾಲ ಮರುಪಾವತಿಗೆ ವಿನಾಯಿತಿ ನೀಡಬೇಕು. ವಿದ್ಯುತ್ ಬಿಲ್ ಪಾವತಿಗೂ ಕಾಲಾವಕಾಶ ನೀಡಬೇಕು.

    ಐ.ಆರ್. ಫರ್ನಾಂಡಿಸ್, ಅಧ್ಯಕ್ಷ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts