More

    ಚಿಕ್ಕ ಸೇತುವೆ ದುರಸ್ತಿಗೊಳಿಸಲು ಆಗ್ರಹ

    ಕೊಕಟನೂರ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಿಂದ ಘಟನಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲಿರುವ ಚಿಕ್ಕ ಸೇತುವೆಯ ಒಂದು ಭಾಗ ಕುಸಿದಿದ್ದರಿಂದ ಅವಘಡಗಳು ಸಂಭವಿಸುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    ಈ ರಸ್ತೆ ಹಲ್ಯಾಳದಿಂದ ಘಟನಟ್ಟಿ, ನಂದಗಾಂವ ಗ್ರಾಮದ ಮಾರ್ಗವಾಗಿ ಬಡಚಿ ಗ್ರಾಮದ ಬಳಿ ಇರುವ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈ ರಸ್ತೆ ಮೇಲಿನ ಸೇತುವೆ ಕುಸಿದು ಹಲವು ದಿನಗಳೇ ಗತಿಸಿವೆ. ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಗುಂಡಿಯಲ್ಲಿ ಸಿಲುಕಿ ಗಾಯಗೊಂಡ ಉದಾಹರಣೆಗಳು ಕೂಡ ಇವೆ. ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇಲ್ಲಿಯವರೆಗೆ ಇತ್ತ ಯಾರೂ ಗಮನಹರಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ರಸ್ತೆಯನ್ನು ಕಳೆದ ಎಂಟು ತಿಂಗಳ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಆಗ ಈ ಸೇತುವೆಯನ್ನು ನಿರ್ಮಿಸಿದ ಗುತ್ತಿಗೆದಾರ ಕಳಪೆ ಕಾಮಗಾರಿ ಕೈಗೊಂಡಿರುವುದು ಎದ್ದು ಕಾಣುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗುಂಡಿ ಬಿದ್ದಿರುವ ಸೇತುವೆಯನ್ನು ವಾರದೊಳಗೆ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಚಿದಾನಂದ ಮುಖಣಿ, ಅಭಿಷೇಕ ಹುಂಬಿ, ಕುಶಾಲ ಬನಸೋಡೆ, ಸಚಿನ ಶಿಂಧೆ, ಅಭಿಜಿತ ಅಂಬಿ, ಗುರು ಕೋಳಿ, ಪ್ರವೀಣ ಭಜಂತ್ರಿ, ಅಜಿತ ಶಿಂಧೆ ಎಚ್ಚರಿಕೆ ನೀಡಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿ ಆದಷ್ಟು ಬೇಗ ಕಾಮಗಾರಿ ಕೈಗೊಂಡು ಸೇತುವೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಒಂದು ವೇಳೆ ಕಳಪೆ ಕಾಮಗಾರಿಯಿಂದ ಸೇತುವೆ ಮೇಲೆ ಗುಂಡಿ ಬಿದ್ದಿರುವುದು ಕಂಡುಬಂದರೆ ಗುತ್ತಿಗೆದಾರನ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಎ.ಜಿ.ಮುಲ್ಲಾ, ಪಿಡಬ್ಲುೃಡಿ ಅಭಿಯಂತ, ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts