More

    ಐಸಿಸಿಯಿಂದ ಟಿ20ಗೆ ಹೊಸ ನಿಯಮ, ನಿಧಾನಗತಿ ಓವರ್‌ಗೆ ಫೀಲ್ಡರ್ ಕಡಿತ ಶಿಕ್ಷೆ!

    ದುಬೈ: ಹೊಸ ವರ್ಷದ ಆರಂಭದಲ್ಲೇ ಐಸಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರನ್ವಯ ನಿಧಾನಗತಿ ಓವರ್‌ಗೆ ಇನ್ನು ತಂಡಗಳು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ನಿಗದಿತ ಸಮಯಕ್ಕೆ ತಕ್ಕಂತೆ ಓವರ್‌ಗತಿ ಪಾಲಿಸದ ತಂಡಗಳು ಇನ್ನು 30 ಯಾರ್ಡ್ ಸರ್ಕಲ್ ಹೊರಗಿನ ಫೀಲ್ಡರ್ ಕಡಿತದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
    ನಿಧಾನಗತಿ ಓವರ್‌ಗೆ ಐಸಿಸಿ ಈ ಮುನ್ನ ಡಿಮೆರಿಟ್ ಅಂಕ ಮತ್ತು ಪಂದ್ಯ ಸಂಭಾವನೆ ಕಡಿತದ ಶಿಕ್ಷೆಗಳನ್ನು ತಂಡದ ನಾಯಕ ಮತ್ತು ಇತರ ಆಟಗಾರರಿಗೆ ವಿಧಿಸುತ್ತಿತ್ತು. ಇದೀಗ ಅದರೊಂದಿಗೆ ಫೀಲ್ಡರ್ ಕಡಿತದ ಶಿಕ್ಷೆಯನ್ನೂ ಎದುರಿಸಬೇಕಾಗುತ್ತದೆ.

    ಏನಿದು ನಿಯಮ: ಓವರ್‌ಗತಿ ಪಾಲನೆ ನಿಯಮದನ್ವಯ ನಿಗದಿತ ಸಮಯಕ್ಕೆ ಅಥವಾ ವಿಳಂಬಗೊಂಡ ಪಂದ್ಯದಲ್ಲಿ ಮರುನಿಗದಿಯಾದ ಸಮಯದ ವೇಳೆ ಅಂತಿಮ ಓವರ್‌ನ ಮೊದಲ ಎಸೆತ ಎಸೆಯಬೇಕು. ಇಲ್ಲದಿದ್ದರೆ ಆ ಇನಿಂಗ್ಸ್‌ನಲ್ಲಿ ಬಾಕಿ ಉಳಿದಿರುವ ಓವರ್ ಪೂರ್ತಿ 30 ಯಾರ್ಡ್ ಸರ್ಕಲ್ ಹೊರಗಿನ ಓರ್ವ ಫೀಲ್ಡರ್, ಒಳ ಸರ್ಕಲ್‌ನೊಳಗೆ ನಿಲ್ಲಬೇಕಾಗುತ್ತದೆ.
    ಸದ್ಯ ಮೊದಲ 6 ಓವರ್ ಪವರ್‌ಪ್ಲೇ ಬಳಿಕ 30 ಯಾರ್ಡ್ ಸರ್ಕಲ್ ಹೊರಗೆ 5 ಫೀಲ್ಡರ್‌ಗಳು ನಿಲ್ಲಲು ಅವಕಾಶವಿದೆ. ಆದರೆ ನಿಧಾನಗತಿ ಓವರ್ ಮಾಡಿದರೆ, ನಾಲ್ಕೇ ಫೀಲ್ಡರ್‌ಗಳು ನಿಲ್ಲಬೇಕಾಗುತ್ತದೆ.

    ಫೀಲ್ಡಿಂಗ್ ತಂಡ ಓವರ್‌ಗತಿ ಪಾಲನೆ ಮಾಡದಿದ್ದಾಗ ಬೌಲರ್ ಎಂಡ್ ಅಂಪೈರ್, ಓರ್ವ ಫೀಲ್ಡರ್‌ಅನ್ನು 30 ಯಾರ್ಡ್ ಸರ್ಕಲ್ ಒಳಗೆ ಕರೆತರಲು ಆ ತಂಡದ ನಾಯಕನಿಗೆ ಸೂಚಿಸಲಿದ್ದಾರೆ. ಅಲ್ಲದೆ ಆ ಇನಿಂಗ್ಸ್‌ನ ಆರಂಭದಲ್ಲೇ ಕೊನೇ ಓವರ್‌ನ ಮೊದಲ ಎಸೆತ ಶುರುವಾಗಬೇಕಾದ ನಿಗದಿತ ಸಮಯದ ಬಗ್ಗೆಯೂ ಅಂಪೈರ್ ನಾಯಕನಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗುತ್ತದೆ.

    ಐಸಿಸಿ ಕ್ರಿಕೆಟ್ ಸಮಿತಿ ಮಾಡಿದ ಶಿಾರಸಿನ ಅನ್ವಯ ಐಸಿಸಿ, ಪಂದ್ಯದ ಗತಿ ಕಾಯ್ದುಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸಿದ್ದ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಇಂಥದ್ದೇ ನಿಯಮ ಜಾರಿಯಿಂದ ಓವರ್‌ಗತಿ ಸಮರ್ಪಕವಾಗಿ ಪಾಲನೆಯಾಗಿದ್ದರಿಂದ ಸ್ಫೂರ್ತಿ ಪಡೆದು ಈ ನಿಯಮ ರೂಪಿಸಲಾಗಿದೆ.

    ಡ್ರಿಂಕ್ಸ್ ಬ್ರೇಕ್ ಜಾರಿ
    ಮತ್ತೊಂದು ಬದಲಾವಣೆಯ ಅನ್ವಯ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಇನಿಂಗ್ಸ್ ನಡುವೆ 2 ನಿಮಿಷಗಳ ಡ್ರಿಂಕ್ಸ್ ಬ್ರೇಕ್‌ಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಇನಿಂಗ್ಸ್‌ನ ನಡುವೆ ಇದು ಜಾರಿಯಾಗಲಿದ್ದು, ದ್ವಿಪಕ್ಷೀಯ ಸರಣಿಗಳಲ್ಲಿ ಉಭಯ ಮಂಡಳಿಗಳು ಸಹಮತದೊಂದಿಗೆ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.

    ಜನವರಿ 16ರಿಂದ ಜಾರಿ
    ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಐಸಿಸಿ ಜಾರಿಗೆ ತಂದಿರುವ ಹೊಸ ನಿಯಮಗಳು ಜನವರಿ 16ರಿಂದ ಜಾರಿಯಾಗಲಿವೆ. ಅಂದು ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳ ನಡುವೆ ಸಬಿನಾ ಪಾರ್ಕ್‌ನಲ್ಲಿ ವರ್ಷದ ಮೊದಲ ಟಿ20 ಪಂದ್ಯ ನಡೆಯಲಿದೆ. ಜ.18ರಿಂದ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವೆ ಸೆಂಚುರಿಯನ್‌ನಲ್ಲಿ ನಡೆಯಲಿರುವ ಟಿ20 ಸರಣಿಯೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲೂ ಈ ನಿಯಮ ಜಾರಿಗೆ ಬರಲಿದೆ.

    VIDEO: ಅಂಪೈರ್ ನೀಡಿದ್ದು ಎಲ್‌ಬಿಡಬ್ಲ್ಯು, ಆಗಿದ್ದು ಬೋಲ್ಡ್, ಆದರೂ ಸ್ಟೋಕ್ಸ್ ಔಟಾಗಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts