More

    ಶಿರಾ ಕಣಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂಟ್ರಿ

    ಶಿರಾ: ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರವೇಶದೊಂದಿಗೆ ಶಿರಾ ಉಪಸಮರ ಅಖಾಡ ರಂಗು ಪಡೆದುಕೊಂಡಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಂತೆ ಶಿರಾದಲ್ಲೂ ಕಮಲ ಅರಳಿಸುತ್ತೇವೆ ಎನ್ನುವ ಮೂಲಕ ವಿಜಯೇಂದ್ರ ಎದುರಾಳಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

    ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಕೋಟೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲ್ಲುವುದೇ ಇಲ್ಲವೆಂದು ಪ್ರತಿಪಕ್ಷಗಳು ಬೊಬ್ಬೆಹೊಡೆದಿದ್ದವು. ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ, ಅಂತಹ ಕಡೆಯೇ ಪಕ್ಷ ಗೆಲುವು ಸಾಧಿಸಿತು ಎನ್ನುವ ಮೂಲಕ ಶಿರಾದಲ್ಲೂ ಕಮಲ ಅರಳಿಸಲು ರಣತಂತ್ರದ ಸಿದ್ಧತೆಯಲ್ಲಿರುವ ಸ್ಪಷ್ಪ ಸಂದೇಶ ನೀಡಿದರು.

    ಮುಖಂಡರು, ಕಾರ್ಯಕರ್ತರು ಎಲ್ಲ ಒಗ್ಗಟ್ಟಿನ ಹೋರಾಟದ ಫಲವಾಗಿ ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಾಯಿತು. ಅದೇ ರೀತಿ ಶಿರಾದಲ್ಲೂ ಗೆಲುತ್ತೇವೆ, ಪಕ್ಷದ ಅಭ್ಯರ್ಥಿ ಗೆದ್ದರೆ ಶಿರಾ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

    ಬೇರೆ ತಾಲೂಕಿಗೆ ಹೋಲಿಸಿದರೆ ಶಿರಾ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಅನೇಕ ಚುನಾವಣೆಗಳಲ್ಲಿ ಶಿರಾ ಮತದಾರರು ಕಾಂಗ್ರೆಸ್, ಜೆಡಿಎಸ್ ಗೆಲ್ಲಿಸಿದ್ದು ಅವರೆಲ್ಲರೂ ಮಂತ್ರಿಗಳಾಗಿದ್ದಾರೆ. ಆದರೂ ಶಿರಾ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಹರಿಹಾಯ್ದ ವಿಜಯೇಂದ್ರ, ತಾಲೂಕಿನ ನೀರಾವರಿ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಬಗೆಹರಿಸುವುದರಲ್ಲಿ ಸಂಶಯವಿಲ್ಲ ಎಂಬ ಅಭಯವಿತ್ತರು.

    ಮುಖಂಡರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಂಗಸ್ವಾಮಿ, ನಗರಾಧ್ಯಕ್ಷ ವಿಜಯರಾಜು, ಚಿದಾನಂದ್ ಎಂ.ಗೌಡ, ಪಡಿರಮೇಶ್, ಕೃಷ್ಣಮೂರ್ತಿ, ಲತಾಕೃಷ್ಣ, ಸೌಭಾಗ್ಯಮ್ಮ, ಪದ್ಮಾ, ಲಲಿತಮ್ಮ, ಜಯಮ್ಮ, ಬಿ.ಗೋವಿಂದಪ್ಪ, ನಿರಂಜನ್, ಸೂಡಾ ಅಧ್ಯಕ್ಷ ಈರಣ್ಣ, ನರಸಿಂಹರಾಜು, ರವಿಕುಮಾರ್, ವಸಂತ, ತಾಪಂ ಉಪಾದ್ಯಕ್ಷ ರಂಗನಾಥಗೌಡ, ಎಪಿಎಂಸಿ ನಿರ್ದೇಶಕ ಎ.ಬಿ.ಕುಮಾರ್, ಹನುಮಂತನಾಯ್ಕ ಇತರರಿದ್ದರು.

    ನಂಜಾವಧೂತಶ್ರೀ ಭೇಟಿ: ವಿವಿಧೆಡೆ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿದ ಬಳಿಕ ವಿಜಯೇಂದ್ರ ಪಟ್ಟನಾಯಕನಹಳ್ಳಿ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಮತ್ತಿತರರು ಸಾಥ್ ನೀಡಿದರು.

    ಅಭಿವೃದ್ಧಿಯೇ ಮಂತ್ರ: ಕ್ಷೇತ್ರದ ಅಭಿವೃದ್ಧಿಯೇ ಪಕ್ಷದ ಮೂಲಮಂತ್ರ. ಶಿರಾ ಗಡಿಭಾಗಕ್ಕೆ ಹೊಂದಿಕೊಂಡಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆಗಳು, ಶಾಲಾ – ಕಾಲೇಜುಗಳು, ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಿ ಕ್ಷೇತ್ರ ಅಭಿವೃದ್ಧಿ ಪಡಿಸಲಾಗಿದೆ. ಇಂತಹ ಕಲ್ಪನೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಶಿರಾ ತಾಲೂಕು ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಹೇಳಿದರು.

    ಬಿಜೆಪಿಯಿಂದ ವರಿಷ್ಠರು ಯಾರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೂ ಅವರನ್ನು ಒಗ್ಗಟ್ಟಾಗಿ ಗೆಲ್ಲಿಸುತ್ತೇವೆ. ಕೆಲವು ದಿನಗಳಿಂದ ತಾಲೂಕಿನಲ್ಲಿ ಬೂತ್ ಮಟ್ಟದ ಕಮಿಟಿಗಳು ರಚನೆಯಾಗುತ್ತಿದ್ದು, ಈ ಕಾರ್ಯ ಪೂರ್ಣವಾದ ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ರಾಜ್ಯಾಧ್ಯಕ್ಷರು ಅಭ್ಯರ್ಥಿಯ ಆಯ್ಕೆ ಮಾಡಲಿದ್ದಾರೆ.
    ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts