More

    ಶೀಘ್ರದಲ್ಲಿ ಕಂದಾಯ ಗ್ರಾಮಗಳ ಘೋಷಣೆ, ಶಾಸಕ ವೆಂಕಟರಾವ ನಾಡಗೌಡ ಮಾಹಿತಿ

    ಸಿಂಧನೂರು: ಕಂದಾಯ ಸಚಿವ ಆರ್.ಅಶೋಕ್ ಮುಂದಿನ ತಿಂಗಳು ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದು, ಈ ಹಿನ್ನೆಲೆ ಸಿಂಧನೂರು ತಾಲ್ಲೂಕಿನ 7 ಕ್ಯಾಂಪ್‌ಗಳನ್ನು ವಾರದೊಳಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

    ಸ್ಥಳೀಯ ತಾಲೂಕು ಆಡಳಿತಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಮತ್ತು ಗಾಪಂಗಳು ಜಂಟಿಯಾಗಿ ಸಮೀಕ್ಷೆ ಮಾಡಲಿದ್ದು, ಲಿಂಗಸುಗೂರು ಸಹಾಯಕ ಆಯುಕ್ತರು ತಂಡ ರಚಿಸಿ ಯಾವ ದಿನಾಂಕದಂದು ಯಾವ ಕ್ಯಾಂಪ್ ಸರ್ವೇ ಮಾಡಬೇಕೆಂದು ತಿಳಿಸಲಿದ್ದಾರೆ. ವಾರದೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದರು.

    ತಾಲೂಕಿನ 18 ಕ್ಯಾಂಪ್‌ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಮನವಿ ಸಲ್ಲಿಸಲಾಗಿದ್ದು, ಕೆಲ ತಾಂತ್ರಿಕ ಕಾರಣದಿಂದ ಮೊದಲ ಹಂತದಲ್ಲಿ 7 ಕ್ಯಾಂಪ್‌ಗಳನ್ನು ಮಾತ್ರ ಸರ್ವೇ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಸವರಾಜೇಶ್ವರಿ ಕ್ಯಾಂಪ್‌ನ್ನು ಬಸವರಾಜೇಶ್ವರಿ ನಗರ ಎಂದು ಪರಿವರ್ತಿಸಲಾಗುತ್ತಿದೆ. ಅದರಂತೆ ದೇವಿಕ್ಯಾಂಪ್ ದೇವಿನಗರ, ಗಣೇಶಕ್ಯಾಂಪ್ ಗಣೇಶನಗರ, ವೆಂಕಟರಾಮ ಕ್ಯಾಂಪ್ ವೆಂಕಟರಾಮ ನಗರ, ದುರ್ಗಾಕ್ಯಾಂಪ್ ದುರ್ಗಾದೇವಿನಗರ, ಸತ್ಯನಾರಾಯಣಕ್ಯಾಂಪ್ ಸತ್ಯನಗರ, ರೈತನಗರಕ್ಯಾಂಪ್ ರೈತನಗರ ಈ ಗ್ರಾಮಗಳಿಗೆ ಮಾತ್ರ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

    ಲಿಂಗಸುಗೂರು ಸಹಾಯಕ ಆಯುಕ್ತ ರಾಹುಲ್ ಬಿ.ಸಂಕನೂರು, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾಪಂ ಇಒ ಲಕ್ಷ್ಮೀ ದೇವಿ, ಭೂದಾಖಲೆಗಳ ಜಿಲ್ಲಾ ಉಪನಿರ್ದೇಶಕಿ ರೇಷ್ಮಾ ಪಾಟೀಲ್, ತಾಲೂಕು ಅಧೀಕ್ಷಕ ಶಾಂತಕುಮಾರ, ಎಡಿಎಲ್‌ಆರ್ ಅನಿಲಕುಮಾರ ಇದ್ದರು.

    ಬಂಗಾಲಿಗರ ಅರ್ಜಿ ವಿಲೇವಾರಿ: ಈಗಾಗಲೇ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿಯಾಗಿದ್ದು, ಹೊಸ ಮಾರ್ಗಸೂಚಿಗಳು ಇನ್ನೂ ಪ್ರಕಟವಾಗಿಲ್ಲ. ಅದರನ್ವಯ ಇನ್ನುಳಿದ ಅರ್ಜಿಗಳನ್ನು ಕ್ರಮಬದ್ಧಗೊಳಿಸಲಾಗುವುದು. ಆರ್.ಎಚ್.ಕ್ಯಾಂಪ್‌ಗಳಲ್ಲಿ ಪೌರತ್ವ ಸಿಗದೆ ಬಂಗಾಲಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ತಹಸೀಲ್ದಾರ್‌ರು 800 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 280 ಜನ ಮಾತ್ರ ಗುರುತಿನ ಚೀಟಿ ಪಡೆಯಲು ಅರ್ಹರಾಗಿದ್ದಾರೆ. 1987 ರಿಂದ 2003 ರೊಳಗೆ ಇಲ್ಲಿಯೇ ಜನಿಸಿದ ವ್ಯಕ್ತಿಯ ತಂದೆ ಮತ್ತು ತಾಯಿ ಇಬ್ಬರಲ್ಲಿ ಒಬ್ಬರಿಗಾದರೂ ಪೌರತ್ವ ಇದ್ದರೆ ಅಂಥವರು ಗುರುತಿನ ಚೀಟಿ ಪಡೆಯಲು ಅರ್ಹರಾಗಿದ್ದಾರೆ. ಅದೇ ರೀತಿ 2003ರ ನಂತರ ಜನಿಸಿದವರ ತಂದೆ ಮತ್ತು ತಾಯಿ ಇಬ್ಬರು ಪೌರತ್ವ ಪಡೆದಿದ್ದರೆ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಶಾಸಕ ವೆಂಕಟರಾವ ನಾಡಗೌಡ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts