More

    ಎಸ್ಟಿ ಮೀಸಲಾತಿ ಹೋರಾಟ ತೀವ್ರ; ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

    ಕಲಬುರ್ಗಿ ವಿಭಾಗ ಮಟ್ಟದ ಸಮಾವೇಶ

    ಸಿಂಧನೂರು: ಎಸ್‌ಟಿ ಮೀಸಲಾತಿ ಪಡೆಯಲು ಕುರುಬರು ಅರ್ಹರಿರುವ ಕಾರಣ ಜಗದ್ಗುರುಗಳ ನೇತೃತ್ವದಲ್ಲಿ ಎಸ್‌ಟಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ಷಾ ಅವರ ಗಮನ ಸೆಳೆದು ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಯತ ಮಾಡುವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಲಬುರ್ಗಿ ವಿಭಾಗ ಮಟ್ಟದ ಎಸ್‌ಟಿ ಮೀಸಲಾತಿ ಹೋರಾಟ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ 4 ಸಮಾವೇಶ ಯಶಸ್ವಿಗೊಂಡಿವೆ. ಮೀಸಲಾತಿ ಕೂಗು ಪ್ರತಿಯೊಬ್ಬರ ಧ್ವನಿಯಾಗಬೇಕಿದೆ. ಇಲ್ಲಿ ಕೇವಲ ಈಶ್ವರಪ್ಪ ಹೋರಾಡಿದರೆ ಸಾಲದು, ಪಕ್ಷಾತೀತ ಹೋರಾಟ ಅಗತ್ಯ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆ ಇಲ್ಲ. ಆರ್‌ಎಸ್‌ಎಸ್, ಹಿಂದುತ್ವವನ್ನು ಇದಕ್ಕೆ ಜೋಡಿಸುವುದು ಸರಿಯಲ್ಲ. ಜ.15 ರಿಂದ ಕಾಗಿನೆಲೆಯಿಂದ ಬೆಂಗಳೂರುವರೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

    ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕಗುರುಪೀಠದ ಜಗದ್ಗುರು ನಿರಂಜನಾನಂದ ಸ್ವಾಮೀಜಿ ಮಾತನಾಡಿ, ನಮ್ಮದು ಎಸ್‌ಟಿ ಮೀಸಲಾತಿ ಪಡೆಯುವುದೊಂದೇ ಗುರಿ. ಗೊಂದಲದ ಸೃಷ್ಟಿ ಬೇಡ. ಜನರಲ್ಲಿ ದ್ವಂದ್ವ ಬರಬಾರದು. ದೃಢ ಸಂಕಲ್ಪ ತೊಡುವ ಮೂಲಕ ಎಸ್‌ಟಿ ಮೀಸಲಾತಿ ಪಡೆಯಬೇಕು ಎಂದರು.

    ಕನಕಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯ ದೊಡ್ಡದು. ಗೊಂದಲಗಳಿಗೆ ಅವಕಾಶ ಕೊಡಬಾರದು. ಹಕ್ಕು ಪಡೆಯುವುದು ಸಮುದಾಯದ ಮೂಲಭೂತ ಹಕ್ಕಾಗಿದೆ ಎಂದರು.

    ಅಹಿಂದ ಮುಖಂಡ ಮುಕುಡಪ್ಪ ಮಾತನಾಡಿ, ಎಂದೋ ಸಿಗಬೇಕಾದ ಎಸ್‌ಟಿ ಮೀಸಲಾತಿಗೆ ಇಂದು ಧ್ವನಿಯೆತ್ತಿದ್ದೇವೆ. ಏಕೆ ಸಿಗಲಿಲ್ಲ ಎನ್ನುವುದನ್ನು ಸಮುದಾಯದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

    ಆಂಧ್ರ ಸಂಸದ ಗೊರಟ್ಲಿ ಮಾಧವ, ಎಸ್‌ಟಿ ಹೋರಾಟ ಸಮಿತಿ ಖಜಾಂಚಿ ಕಾಂತೇಶ, ಸಾನ್ನಿಧ್ಯ ವಹಿಸಿದ್ದ ಈಶ್ವರಾನಂದ ಸ್ವಾಮೀಜಿ ಮಾತನಾಡಿದರು. ಶಾಂತಮಲ್ಲ ಸ್ವಾಮೀಜಿ, ನಂಜುಂಡಯ್ಯ ಗುರುವಿನ್, ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್, ವೆಂಕಟೇಶಮೂರ್ತಿ, ಟಿಬಿ ಬೆಳಗಾವಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಇದ್ದರು.

    ಎಸ್ಟಿ ಮೀಸಲಾತಿ ಹೋರಾಟ ತೀವ್ರ; ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts