More

    ಕಾಂಗ್ರೆಸ್‌ಪಕ್ಷದ ಸಂವಿಧಾನ ಹಿತಾಸಕ್ತಿಗೆ ಬಲಿ ಕೊಡಬೇಡಿ

    ಸಿಂದಗಿ: ಕಾಂಗ್ರೆಸ್ ಪಕ್ಷ ಯಾರನ್ನೇ ಗುರುತಿಸಲಿ, ಪ್ರೋತ್ಸಾಹಿಸಲಿ ಅದನ್ನು ಪ್ರಶ್ನಿಸುವ ಮೂಲಕ ಪಕ್ಷದ ಸಂವಿಧಾನ ಅಲ್ಲಗಳೆದಿರುವ ಮಾಜಿ ಶಾಸಕ ಶರಣಪ್ಪ ಸುಣಗಾರ ಪಕ್ಷದಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ, ಚುನಾವಣೆಗಳಲ್ಲಿ ತಾವು ತೋರಿದ ನಡೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜಿಲ್ಲಾ ಯೋಜನಾ ಆಯೋಗದ ಸದಸ್ಯ ರಾಜಶೇಖರ ಕೂಚಬಾಳ ಟಾಂಗ್ ನೀಡಿದರು.

    ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 20ರಂದು ಸುಣಗಾರ ಸುದ್ದಿಗೋಷ್ಠಿ ನಡೆಸಿ, ವಲಸೆ ಬಂದವರಿಗೆ ಪಕ್ಷ ಟಿಕೆಟ್ ನೀಡಿರುವುದನ್ನು ಪ್ರಶ್ನಿಸಿದ್ದಲ್ಲದೆ, ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಪಕ್ಷವನ್ನು ತಮ್ಮ ಸ್ವಹಿತಾಸಕ್ತಿಗೆ ಬಲಿ ಕೊಡುತ್ತ, ಗೊಂದಲಗಳನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿದ್ದ ಸುಣಗಾರರು, ಅಂದು ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿದ್ದ ವಿಠ್ಠಲ ಕಟಕದೊಂಡ, ಬಿ.ಜಿ. ಪಾಟೀಲ (ಹಲಸಂಗಿ) ಅವರ ವಲಸೆ ಬಗ್ಗೆಯಾಗಲಿ, ಟಿಕೆಟ್ ನೀಡಿರುವ ಬಗ್ಗೆಯಾಗಲಿ, ಅಂದು ಈಗಿನ ಕೈ ಪಕ್ಷದ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಅವರಿಗಾದ ಅನ್ಯಾಯದ ಬಗ್ಗೆ ಮಾತನಾಡದವರು ಈಗ ಉಪ ಚುನಾವಣೆ ಹೊಸ್ತಿಲಲ್ಲಿ ಇಂತಹ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಗೊಂದಲದ ಜತೆಗೆ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

    ಸುಣಗಾರರು ತಮ್ಮ ಸ್ವಹಿತಾಸಕ್ತಿಯ ಹಿನ್ನ್ನೆಲೆಯಿಂದ ಮೂಲ ಕಾಂಗ್ರೆಸ್ಸಿಗರ ಬಗ್ಗೆ ವಲಸೆ ಬಂದವರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕಳೆದ ವಿಧಾನಸಭೆಯಲ್ಲಿ ಸೋಲುಂಡ ಪಕ್ಷದ ಮಲ್ಲಣ್ಣ ಸಾಲಿ ಅವರ ಗೆಲುವಿಗೆ ಏನು ಶ್ರಮಪಟ್ಟಿದ್ದಾರೆ ಎಂದು ಪ್ರಶ್ನಿಸಿದರು.

    ಅಶೋಕ ಬಿಜಾಪೂರ, ಶ್ರೀಶೈಲ ಜಾಲವಾದಿ, ಪರಶುರಾಮ ಕಾಂಬಳೆ, ಹುಯ್ಯೋಗಿ ತಳ್ಳೊಳ್ಳಿ, ಲಕ್ಷ್ಮಣ ಬನ್ನೆಟ್ಟಿ, ಸಾಯಬಣ್ಣ ಪುರದಾಳ, ಸಂತೋಷ ಭಜಂತ್ರಿ, ತಿರುಪತಿ ವಡ್ಡರ ಸುದ್ದಿಗೋಷ್ಠಿಯಲ್ಲಿದ್ದರು.

    ಮನಗೂಳಿ ಕುಟುಂಬದ ರಾಜಕೀಯ ಸಾಮರ್ಥ್ಯ, ಸುಣಗಾರರ ರಾಜಕೀಯ ಸಾಮರ್ಥ್ಯ ಏನು ಅಂತಾ ಈ ಕ್ಷೇತ್ರದ ಜನತೆ ಕಂಡಿದ್ದಾರೆ. ಅಶೋಕ ಮನಗೂಳಿ ಸೇರಿ ಯಾವುದೇ ಅಭ್ಯರ್ಥಿ ಕಣಕ್ಕಿಳಿದರೂ ಅವರನ್ನು ಬೆಂಬಲಿಸಿ ಗೆಲ್ಲಿಸುವ ಪಕ್ಷ ನಿಷ್ಠೆಯನ್ನು ತೋರುತ್ತೇವೆ, ಇದು ನಿಶ್ಚಿತ.
    ರಾಜಶೇಖರ ಕೂಚಬಾಳ ಜಿಲ್ಲಾ ಯೋಜನಾ ಆಯೋಗದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts