More

    ನಾಯಕರ ಮನೆ ಮುಂದೆ ಪರೇಡ್…!

    ವಿಜಯಪುರ: ಸಿಂದಗಿ ವಿಧಾನ ಸಭೆ ಉಪ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದ್ದು ಕೈ-ಕಮಲ ಪಾಳಯದಲ್ಲಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ನಾಯಕರ ಮನೆ ಮುಂದೆ ಪರೇಡ್ ನಡೆಸಿದ್ದಾರೆ.

    ಶಾಸಕ ದಿ. ಎಂ.ಸಿ. ಮನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಯಾವಾಗ ಬೇಕಾದರೂ ಚುನಾವಣೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅಭ್ಯರ್ಥಿ ಆಯ್ಕೆ ಕಸರತ್ತು ಜೋರಾಗಿದೆ. ಪ್ರತಿಯಾಗಿ ಉಭಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಟಿಕೆಟ್‌ಗಾಗಿ ರಾಜಧಾನಿಗೆ ದೌಢಾಯಿಸುತ್ತಿದ್ದಾರೆ.

    ಜೆಡಿಎಸ್ ಸ್ಪರ್ಧೆ ಖಚಿತ
    ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದು ಹೊಂದಾಣಿಕೆಗೆ ಅವಕಾಶ ಇಲ್ಲವೆಂದಿದ್ದಾರೆ. ಹೀಗಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ದಿ. ಮನಗೂಳಿ ಅವರ ಸ್ಥಾನಕ್ಕೆ ಯಾರನ್ನು ಕಣಕ್ಕಿಳಿಸಬೇಕೆಂದು ಇನ್ನೂ ನಿರ್ಧಾರ ಪ್ರಕಟಗೊಂಡಿಲ್ಲ. ಅಶೋಕ ಮನಗೂಳಿ ಅವರು ರಾಜಧಾನಿಗೆ ದೌಢಾಯಿಸಿದ್ದು ವರಿಷ್ಟರೊಂದಿಗೆ ಸಮಾಲೋಚಿಸಿದ್ದಾಗಿ ತಿಳಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ಬಳಿಕ ಕುಟುಂಬಸ್ಥರೊಂದಿಗೆ ಚರ್ಚಿಸಿ ಅಭ್ಯರ್ಥಿ ಹೆಸರು ಬಹಿರಂಗಗೊಳಿಸುವುದಾಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಹುಡುಕಾಟ
    ಕಮಲ ಪಾಳಯದಿಂದ ಅಭ್ಯರ್ಥಿ ಹುಡುಕಾಟ ಜೋರಾಗಿದ್ದು ಒಂದೊಮ್ಮೆ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಕೇಳಿ ಬಂದರೆ ಮತ್ತೊಮ್ಮೆ ಅವರ ಪುತ್ರನ ಹೆಸರು ಕೇಳಿ ಬರುತ್ತಿದೆ. ಆದರೆ, ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಸಿಂದಗಿಯಿಂದ ಸ್ಪರ್ಧಿಸಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರಾದರೂ ಪಕ್ಷದ ತೀರ್ಮಾನವೇ ಅಂತಿಮ ಎನ್ನುವ ಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ.

    ಬಿಜೆಪಿಯಿಂದ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಲೆಕ್ಕಾಚಾರ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ರಮೇಶ ಭೂಸನೂರ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರಾದರೂ ಈ ಬಾರಿ ಹೊಸಬರಿಗೆ ಮಣೆ ಹಾಕುವ ಲಕ್ಷಣಗಳು ಗೋಚರಿಸುತ್ತಿವೆ. ಪಕ್ಷದ ವರಿಷ್ಟರು ಉಸ್ತುವಾರಿಗಳನ್ನು ನೇಮಕ ಮಾಡಿ ಬೂತ್ ಮಟ್ಟದಿಂದ ವರದಿ ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ.

    ಕಾಂಗ್ರೆಸ್‌ನಲ್ಲಿ ಕಾದು ನೋಡುವ ತಂತ್ರ
    ಜೆಡಿಎಸ್- ಬಿಜೆಪಿಯ ನಿರ್ಧಾರ ನೋಡಿಕೊಂಡು ಅಭ್ಯರ್ಥಿಯ ಅಂತಿಮ ಆಯ್ಕೆಗೆ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಈಗಾಗಲೇ ಪಕ್ಷದಲ್ಲಿ ಹುರಿಯಾಳುಗಳ ಪಟ್ಟಿ ಸಿದ್ಧವಾಗಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಆಗಲೇ ಟಿಕೆಟ್ ಖಚಿತ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಮಲ್ಲಣ್ಣ ಸಾಲಿ ಸಹ ಮತ್ತೊಮ್ಮೆ ಅವಕಾಶ ಕೇಳುತ್ತಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಜಿಲ್ಲಾ ಕೇಂದ್ರದಿಂದ ಕೆಲ ಪ್ರಬಲ ನಾಯಕರು ಸಹ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು ಬದಲಾದ ಕಾಲಘಟ್ಟದಲ್ಲಿ ಟಿಕೆಟ್ ವಂಚಿತ ಪ್ರತಿಪಕ್ಷದವರನ್ನೇ ಸೆಳೆದುಕೊಳ್ಳುವ ಸಾಧ್ಯತೆ ಇದೆ.

    ಒಟ್ಟಿನಲ್ಲಿ ಜೆಡಿಎಸ್‌ನಿಂದ ಮನಗೂಳಿ ಅವರ ಕುಟುಂಬ ಸದಸ್ಯರ ಸ್ಪರ್ಧೆಗೆ ಹಸಿರು ನಿಶಾನೆ ಸಿಕ್ಕಿದ್ದು, ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಇನ್ನೂ ಬೆಳೆಯುತ್ತಲೇ ಇದೆ. ಕಾಂಗ್ರೆಸ್ ಮಾತ್ರ ಕಾದು ನೋಡುವ ತಂತ್ರಗಾರಿಕೆಗೆ ಮೊರೆ ಹೋಗಿದೆ.

    ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಯಾರು ಅಭ್ಯರ್ಥಿಯಾಗಬೇಕೆಂದು ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ತೀರ್ಮಾನ ಪ್ರಕಟಿಸಲಾಗುವುದು.
    ಅಶೋಕ ಮನಗೂಳಿ, ಶಾಸಕ ದಿ. ಮನಗೂಳಿ ಅವರ ಪುತ್ರ


    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts