More

    ದಾವಣಗೆರೆಯ ಪೈಲ್ವಾನ ಕಿರಣಗೆ ಬೆಳ್ಳಿ ಕಡೆ

    ಬಂಕಾಪುರ: ಬಂಕಾಪುರ ಮತ್ತು ಮುನವಳ್ಳಿ ಸರಹದ್ದಿನಲ್ಲಿರುವ ಟೋಪಿನ ದುರ್ಗಾದೇವಿ ಜಾತ್ರೆ ನಿಮಿತ್ತ ಮೂರು ದಿನಗಳ ರಾಜ್ಯ ಮಟ್ಟದ ಬಯಲು ಜಂಗೀ ಕುಸ್ತಿಯ ಕೊನೆಯ ದಿನ ಸೋಮವಾರ ಪೈಲ್ವಾನರ ಮಧ್ಯೆ ನಡೆದ ಹೋರಾಟ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

    ಅಂತಿಮ ಪಂದ್ಯದಲ್ಲಿ (ಪರಸಿ ಪೈಕಿ)ದಲ್ಲಿ ದಾವಣಗೆರೆಯ ಪೈಲ್ವಾನ ಕಿರಣ ಕಾಟೇ, ಸತತ ಮೂರು ಬಾರಿಯ ವಿಜೇತ ಕಲಬುರಗಿ ಜಿಲ್ಲೆಯ ಬೆಳಮಗಿಯ ಸಿದ್ದಪ್ಪ ಪೂಜಾರ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ, 50 ಸಾವಿರ ನಗದು ಬಹುಮಾನ ಪಡೆದರು.

    ಇನ್ನೊಂದು ಪಂದ್ಯ (ವಾರಗಿ ಪೈಕಿ) ದಲ್ಲಿ ಬೆಳಗಾವಿ ಪೈಲ್ವಾನ್ ಅಪ್ಪಾಸಾಬ ಅವರು ಮಹಾರಾಷ್ಟ್ರ ಸಾತಾರದ ಪೈಲ್ವಾನ ಗೋಪಾಲ ಡಗೆ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ, 25 ಸಾವಿರ ನಗದು ಬಹುಮಾನ ಪಡೆದರು. ವಿಜೇತ ಪೈಲ್ವಾನರಿಗೆ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಬಹುಮಾನ ವಿತರಿಸಿದರು.

    ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಪೈಲ್ವಾನರು ಗೆಲುವಿಗಾಗಿ ಸೆಣಸಾಡಿದರು. ಜಟ್ಟಿಗಳ ಸೆಣಸಾಟ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಆಗಮಿಸಿದ್ದರು.

    ಭಾನುವಾರ ನಡೆದ ಎರಡನೇ ದಿನದ ಕುಸ್ತಿ ಪಂದ್ಯಾವಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಸೋಮವಾರ ನಡೆಯುವ ಅಂತಿಮ ಪಂದ್ಯದ ವಿಜೇತರಿಗೆ ಪ್ರಥಮ ಸ್ಥಾನಕ್ಕೆ 50 ಸಾವಿರ ಮತ್ತು ದ್ವಿತೀಯ ಸ್ಥಾನಕ್ಕೆ 25 ಸಾವಿರ ನಗದು ಬಹುಮಾನ ಘೊಷಣೆ ಮಾಡಿದ್ದರು.

    ಸೋಮನಗೌಡ್ರ ಪಾಟೀಲ, ನಿಂಗನಗೌಡ ಪಾಟೀಲ, ಸುರೇಶ ಗಿಡ್ಡಣ್ಣವರ, ಯಲ್ಲಪ್ಪ ನರಗುಂದ, ಹಣಮಂತಪ್ಪ ತಳ್ಳಳ್ಳಿ, ನಿಂಗಪ್ಪ ಮಾಯಣ್ಣವರ, ಸುರೇಶಪ್ಪ ಹಂಡೆ, ಉಮೇಶ ಅಂಗಡಿ, ಎಫ್.ಸಿ. ಕಾಡಪ್ಪಗೌಡ್ರ, ಮಲ್ಲೇಶ ಮಾಳಗಿಮನಿ, ಶಿವಲಿಂಗಪ್ಪ ದ್ವಾಸಿ, ನಾಗಪ್ಪ ಹಳವಳ್ಳಿ, ಬಸನಗೌಡ ಪಾಟೀಲ, ಮಲ್ಲಪ್ಪ ಕಟಗಿ, ಬೀರಪ್ಪ ಸಣ್ಣತಮ್ಮನವರ, ಸುಮಂತ ಪೂಜಾರ, ಪ್ರತಾಫ ಶಿವಪ್ಪನವರ ಜಾತ್ರಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts