More

    ಬ್ಯಾಡಗಿ ರೈತರ ಕೈಹಿಡಿದ ರೇಷ್ಮೆ ಕೃಷಿ

    ಬ್ಯಾಡಗಿ: ಗೋವಿನ ಜೋಳ, ಹತ್ತಿ ಹಾಗೂ ಇತರೆ ಬೆಳೆಗಳ ಬೆಲೆ ಇಳಿಮುಖವಾದ ಪರಿಣಾಮ ತಾಲೂಕಿನ ಅನೇಕ ರೈತರು ರೇಷ್ಮೆ ಬೆಳೆಯತ್ತ ಮುಖಮಾಡಿದ್ದು, ರೈತ ಸಮುದಾಯದ ಆದಾಯ ದ್ವಿಗುಣಗೊಂಡಿದೆ.

    ತಾಲೂಕಿನ ಕಲ್ಲೆದೇವರು, ಮೋಟೆಬೆನ್ನೂರು, ಕೆಂಗೊಂಡ, ಗುಂಡೇನಹಳ್ಳಿ, ಕದರಮಂಡಲಗಿ, ಮಲ್ಲೂರು, ಹೆಡಿಗ್ಗೊಂಡ, ಚಿಕ್ಕಣಜಿ, ಬುಡಪನಹಳ್ಳಿ, ಅಳಲಗೇರಿ, ಹಿರೇಹಳ್ಳಿ ಗ್ರಾಮಗಳ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ರೇಷ್ಮೆ ಗೂಡಿಗೆ ಕಿಲೋಕ್ಕೆ 500ರಿಂದ 700 ರೂಪಾಯಿ ದರ ಲಭಿಸುತ್ತಿದೆ. ಹೀಗಾಗಿ ರೇಷ್ಮೆ ಕೃಷಿಯಲ್ಲಿ ಮಹತ್ತರ ಸಾಧನೆಯಾಗುತ್ತಿದೆ.

    2018ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೇಷ್ಮೆ ಬೆಳೆ ಸೇರ್ಪಡೆಗೊಂಡ ಬಳಿಕ ತಾಲೂಕಿನಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿ ರೈತರು ರೇಷ್ಮೆ ಬೆಳೆಗೆ ಮುಂದಾಗಿದ್ದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಸಹಾಯಧನ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತಿವೆ. ಹೀಗಾಗಿ 2 ವರ್ಷಗಳ ಬಳಿಕ ರೈತರು ರೇಷ್ಮೆಯತ್ತ ಇನ್ನಷ್ಟು ಆಕರ್ಷಿತರಾಗಿದ್ದು, ಸುಮಾರು 430 ಹೆಕ್ಟೇರ್ ತಲುಪಿದೆ.

    ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 110 ರೈತ ಕುಟುಂಬಗಳು ರೇಷ್ಮೆಯನ್ನು 15 ವರ್ಷಗಳಿಂದ ಬೆಳೆಯುತ್ತಿದ್ದಾರೆ. ಇದರೊಂದಿಗೆ ಗ್ರಾಮದಲ್ಲಿ ಹೈನುಗಾರಿಕೆ, ಕುರಿ ಸಾಕಾಣಿಕೆಯಂಥ ಉಪಕಸುಬಿನಲ್ಲಿ ಹೆಚ್ಚಳ ಕಂಡುಬಂದಿದೆ.

    5 ಹುದ್ದೆಗೆ ಒಬ್ಬ ಅಧಿಕಾರಿ:

    ರೈತರ ಜೀವನಾಡಿಯಾಗಿರುವ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ರೈತರಿಗೆ ಸಮರ್ಪಕ ಮಾಹಿತಿ ಲಭಿಸುತ್ತಿಲ್ಲ. ಇಲಾಖೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಉಳಿದಿವೆ. ಇಲ್ಲಿನ ರೇಷ್ಮೆ ವಿಸ್ತರ್ಣಾಧಿಕಾರಿಗಳ ಕಾರ್ಯಾಲಯದಲ್ಲಿ ಒಟ್ಟು 4 ಹುದ್ದೆಗಳು ಮಂಜೂರಾಗಿದ್ದು, ಐದು ತಾಲೂಕುಗಳಿಗೆ ಒಬ್ಬರೇ ವಿಸರಣಾಧಿಕಾರಿಯಿದ್ದಾರೆ. ಬ್ಯಾಡಗಿಯಲ್ಲಿ ಪ್ರಭಾರ ಹುದ್ದೆ ಅಧಿಕಾರಿಗಳಾಗಿದ್ದಾರೆ. ಒಬ್ಬ ಗುಮಾಸ್ತರು ಎಲ್ಲ ಹುದ್ದೆಗಳನ್ನು ನಿರ್ವಹಿಸಬೇಕಿದೆ. ಹೀಗಾದರೆ ಕಚೇರಿಯಲ್ಲಿ ರೈತರಿಗೆ ಮಾಹಿತಿ ಕೊಡುವವರು ಯಾರು..? ಹೊಲಗಳಿಗೆ ತೆರಳಿ ಬೆಳೆ ಪರಿಶೀಲನೆ, ಸಲಹೆ, ಸಹಕಾರ ನೀಡುವರು ಯಾರು.. ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

    ಮೆಗಾ ಮಾರುಕಟ್ಟೆ ಆರಂಭವಾಗಿಲ್ಲ:

    ಹೂಲಿಹಳ್ಳಿ ಬಳಿ 10 ಕೋಟಿ ರೂ. ವೆಚ್ಚದ ರೇಷ್ಮೆ ಮಾರುಕಟ್ಟೆ ಮಂಜೂರಾಗಿದೆ. ಕಳೆದ ಆರು ತಿಂಗಳ ಹಿಂದೆ ದೊಡ್ಡ ಮಾರುಕಟ್ಟೆಗೆ ಚಾಲನೆ ಸಿಕ್ಕಿದೆ. ಆದರೆ, ರೇಷ್ಮೆ ಮಾರುಕಟ್ಟೆಗೆ ಮೀಸಲಿಟ್ಟ ಜಾಗದಲ್ಲಿ ಯಾವುದೇ ಕಟ್ಟಡ ನಿರ್ವಣವಾಗಿಲ್ಲ, ಅಲ್ಲದೆ, ರೈತರಿಗೆ ಈತನಕ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ರೈತರು ದೂರದ ರಾಮನಗರದ ಮಾರುಕಟ್ಟೆಗೆ ತೆರಳುವುದು ತಪ್ಪಿಲ್ಲ.

    ಇಲಾಖೆ ಸೌಲಭ್ಯಗಳು

    ರೈತರಿಗೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಡ್ಡಿ ನಾಟಿಗೆ ಎಕರೆಗೆ 52 ಸಾವಿರ ರೂ. ಸಹಾಯಧನ, ರೇಷ್ಮೆ ಮನೆಗೆ 3.37 ಲಕ್ಷ ರೂ. ಸಹಾಯಧನ, ತಾತ್ಕಾಲಿಕ ಶೆಡ್ ನಿರ್ವಣಕ್ಕೆ 1 ಲಕ್ಷ ರೂ., ರೇಷ್ಮೆ ಹುಳು ಸಾಕಣಿಕೆ ಸಲಕರಣೆಗಳಿಗೆ ಶೇ. 75 ಸಹಾಯಧನ, ಗೂಡು ಸಾಕಣಿಕೆಗೆ ಕೀಲೋಗೆ 10 ರೂ., ಚಾಕಿ ವೆಚ್ಚ ನೂರು ಮೊಟ್ಟೆಗೆ 1 ಸಾವಿರ ರೂ. ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಾರ್ಷಿಕವಾಗಿ ಎಲ್ಲ ಬೆಳೆಗಾರರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.

    ಗುಣಮಟ್ಟದ ಹುಳುಗಳ ಪೂರೈಕೆಯಾಗುತ್ತಿಲ್ಲ. ಗೂಡು ಕಟ್ಟುವ ಸಮಯದಲ್ಲಿ ಹಾಲು ಹುಳುಗಳು ಕಾಣಿಸಿಕೊಂಡ ಪರಿಣಾಮ ರೈತನಿಗೆ ನಷ್ಟವಾಗುತ್ತಿದೆ. ಹಿಪ್ಪುನೇರಳೆ ಗಿಡಗಳಿಗೆ ಮುಟುರು ರೋಗ ಬಂದಲ್ಲಿ ಸಮರ್ಪಕ ಔಷಧ, ಸಲಹೆಗಳು ಸಿಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಬೆಳೆ ಪರಿಶೀಲನೆಗೆ ಬರುತ್ತಿಲ್ಲ. ಚಂದ್ರಿಕೆಗಳ ಪೂರೈಕೆಯನ್ನು ಇಲಾಖೆ ನಿಲ್ಲಿಸಿದೆ. ಹೀಗಾಗಿ ಬರಗಾಲದಲ್ಲಿ ರೈತರು ಬಂಡವಾಳ ಹಾಕಿ ಈ ಬೆಳೆಯತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

    | ಪ್ರವೀಣ ಉಜನಿ, ಕದರಮಂಡಲಗಿ

    ಅಲ್ಪಜಮೀನು ಉಳ್ಳ ರೈತರು ಕಡಿಮೆ ವೆಚ್ಚದಲ್ಲಿ ರೇಷ್ಮೆ ಬೆಳೆಗೆ ಮುಂದಾಗಿದ್ದು, ತಾಲೂಕಿನಾದ್ಯಂತ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಏರಿಕೆಯಾಗುತ್ತಿದೆ. ತಾಲೂಕಿನಲ್ಲಿ ಒಬ್ಬ ನೌಕರ ಇದ್ದು ಎಲ್ಲವನ್ನೂ ನಿರ್ವಹಿಸಲಾಗುತ್ತಿದೆ. ಆದರೆ, ರೈತರ ಸಂಖ್ಯೆ ಹೆಚ್ಚಾಗಿದ್ದು, ಸಿಬ್ಬಂದಿ ಅಗತ್ಯವಿದೆ. ಆದರೂ ರೈತರು ಸಹಕಾರ ನೀಡುತ್ತಿದ್ದಾರೆ.

    | ಪ್ರದೀಪ ಒರಟೇರ, ರೇಷ್ಮೆ ಪ್ರದರ್ಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts