More

  ಹಿರೇಹಳ್ಳಿ ಗ್ರಾಮಸ್ಥರಿಗೆ ಕೆಲಸದ್ದೇ ಚಿಂತೆ

  ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ತಾಲೂಕು ಕೇಂದ್ರ ಚಳ್ಳಕೆರೆಯಿಂದ 24 ಕಿಲೋ ಮೀಟರ್ ದೂರದ ಹಿರೇಹಳ್ಳಿ ಗ್ರಾಮದ ಜನರಿಗೆ ಉದ್ಯೋಗದ್ದೇ ದೊಡ್ಡ ಸಮಸ್ಯೆ. ಬೆಂಗಳೂರು-ಬಳ್ಳಾರಿ 150ಎ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬರುವ ಈ ಗ್ರಾಮದ ಜನಸಂಖ್ಯೆ ಸುಮಾರು 12000ಕ್ಕೂ ಅಧಿಕ. ಬಹುತೇಕರು ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಅನಕ್ಷರಸ್ಥರು.

  ಇಲ್ಲಿ ದುಡಿವ ಕೈಗಳಿಗೆ ಕೆಲಸ ನೀಡುವ ಕೈಗಾರಿಕೆಗಳಿಲ್ಲ. ಕೃಷಿ ಜಮೀನಿದ್ದರೂ ಮಳೆ ನಂಬಿ ಬಿತ್ತನೆ ಮಾಡಬೇಕು. ಕೃಷಿ ಭೂಮಿ ಇಲ್ಲದವರಿಗೆ ಕೂಲಿಯೇ ಗತಿ. ಕೆಲವರು ಕೂಲಿ ಅರಸಿ ಮೊಳಕಾಲ್ಮೂರು, ಆಂಧ್ರಪ್ರದೇಶಕ್ಕೆ ಹೋಗಿದ್ದಾರೆ.

  ಇಲ್ಲಿನ ನಿರಾಶ್ರಿತರು, ಗುಡಿಸಲು ವಾಸಿಗಳು, ಬಡವರಿಗೆ ವಸತಿ ಸೌಲಭ್ಯ ಸಿಗುತ್ತಿಲ್ಲ. ಚಳ್ಳಕೆರೆ ತಾಲೂಕು ಆಡಳಿತಕ್ಕೆ ಒಳಪಟ್ಟಿದ್ದರೂ ಗ್ರಾಮಸ್ಥರು ಮಾತ್ರ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರಕ್ಕೆ ಹಕ್ಕು ಚಲಾವಣೆ ಮಾಡುತ್ತಾರೆ.ಈ ಕಾರಣಕ್ಕೆ ಗ್ರಾಮ ಅತಂತ್ರ ಸ್ಥಿತಿಯಲ್ಲಿದೆ. ಕನಿಷ್ಟ ಮೂಲಸೌಕರ್ಯಗಳು ಸಿಗದೆ ನಿರ್ಲಕ್ಷೃಕ್ಕೆ ಒಳಗಾಗಿದೆ.

  ಸ್ಥಳೀಯವಾಗಿ ಕಾರ್ಖಾನೆ, ಟೈಲರಿಂಗ್ ಘಟಕ ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ಸೃಷ್ಟಿಸಬೇಕು ಎಂದು ಬಿ.ಟಿ.ನಟರಾಜ, ಜಿ.ರಾಜಣ್ಣ, ಆರ್.ರುದ್ರಮುನಿ, ನಾರಾಯಣ, ತಿಪ್ಪೇಸ್ವಾಮಿ, ದುರುಗೇಶಿ, ಪಾಲಣ್ಣ, ಈಶ್ವರಪ್ಪ, ರಾಜಣ್ಣ ಮತ್ತಿತರು ಮನವಿ ಮಾಡಿದ್ದಾರೆ.

  ಧಾರ್ಮಿಕ ಕೇಂದ್ರಗಳು: ಚಿಂತಾಮಣೇಶ್ವರ ಸ್ವಾಮಿ, ಈಶ್ವರನಮಟ್ಟಿ, ವೀರಭದ್ರ ಸ್ವಾಮಿ ಗದ್ದಿಗೆ, ದಡ್ಡಿಸೂರನಾಯಕನ ದೇವಸ್ಥಾನ, ಗಾದ್ರಿ ಪಾಲನಾಯಕ, ದುರ್ಗಾಂಬಿಕಾ ದೇವಿ, ಕೊಲ್ಲಾಪುರದಮ್ಮ ದೇವಿ, ಆಂಜನೇಯಸ್ವಾಮಿ, ಕೋಟೆಗುಡ್ಡ ಮಾರಮ್ಮ, ಹೊನ್ನೂರು ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ಪೀರಲದೇವರು, ಅಡವಿ ಈಶ್ವರನಗುಡಿ ಸೇರಿ 15ಕ್ಕೂ ಹೆಚ್ಚು ದೇವಾಲಯಗಳಿವೆ. ದಡ್ಡಿಸೂರನಾಯಕ ಮತ್ತು ಚಿಂತಾಮಣೇಶ್ವರ ಅದ್ದೂರಿ ಜಾತ್ರೆ ಜತೆಗೆ ವಿಶೇಷವಾಗಿ ಕಾರ್ತಿಕೋತ್ಸವ ಆಚರಿಸಲಾಗುತ್ತಿದೆ.

            ಬೇಡಿಕೆಗಳು

  • ಹೋಬಳಿ ಕೇಂದ ಘೋಷಣೆ.
  • ಸರ್ಕಾರಿ ಪಿಯು ಕಾಲೇಜು ಸ್ಥಾಪನೆ.
  • ರಸ್ತೆ, ಚರಂಡಿ ನಿರ್ಮಾಣ.
  • ಸಮುದಾಯ ಆರೋಗ್ಯ ಕೇಂದ್ರ.
  • ಬಸ್ ನಿಲ್ದಾಣ ಬಳಿ ಸಾಮೂಹಿಕ ಶೌಚಗೃಹ.
  • ಬಸ್ ನಿಲ್ದಾಣ ಕಟ್ಟಡ.
  • ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆ, ಪೊಲೀಸ್ ನಿಯೋಜನೆ.
  • ವಾಲ್ಮೀಕಿ, ಸಾಂಸ್ಕೃತಿಕ ಭವನ.
  • ಸಂತೆ ವ್ಯವಸ್ಥೆಗೆ ಪ್ರತ್ಯೇಕ ಜಾಗ ನಿಗದಿ.

  ಎಂಟು ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ಸಚಿವ ಬಿ.ಶ್ರೀರಾಮುಲು ಅವಧಿಯಲ್ಲಿ ಕೂಡ ಭಿವೃದ್ಧಿ ಕೆಲಸಗಳಾಗಿಲ್ಲ. ಸಮಸ್ಯೆ ಅರಿಯಲು ಗ್ರಾಮಕ್ಕೆ ಆಗಮಿಸಲು ಸಚಿವರು ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ರಾತ್ರಿ ತನಕ ಕಾದರೂ ಬರಲಿಲ್ಲ. ಈಗ ಹೋರಾಟವೊಂದೇ ಉಳಿದಿರುವ ಮಾರ್ಗ.
  ಆರ್.ಬಿ.ನಿಜಲಿಂಗಪ್ಪ ರೈತ ಮುಖಂಡ

  ಪರಿಶಿಷ್ಟರು ಹಾಗೂ ಹಿಂದುಳಿದ ಸಮುದಾಯಗಳಲ್ಲಿ ವಸತಿ ರಹಿತ ಕುಟುಂಬಗಳು ಅಧಿಕವಾಗಿವೆ. ನಿವೇಶನಕ್ಕಾಗಿ ಕಾಯ್ದಿರಿಸಿದ ಸನಂ: 291 ರ 30 ಎಕರೆಯಲ್ಲಿ ಹಕ್ಕುಪತ್ರ ವಿತರಿಸಿಲ್ಲ.ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮತ್ತು ವಸತಿ ನಿವೇಶನಕ್ಕೆ 20 ವರ್ಷದಿಂದ ಹೋರಾಡುತ್ತಿದ್ದರೂ ಫಲ ಸಿಕ್ಕಿಲ್ಲ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
  ಎಸ್.ರಾಜಣ್ಣ ಗ್ರಾಪಂ ಸದಸ್ಯ, ಹಿರೇಹಳ್ಳಿ

  ಮಳೆಗಾಲದಲ್ಲೂ ಕೆರೆಗೆ ನೀರು ಸಂಗ್ರಹವಾಗುತ್ತಿಲ್ಲ. ಜಲಮೂಲದ ಹಳ್ಳಗಳ ಅಭಿವೃದ್ಧಿ ಆಗುತ್ತಿಲ್ಲ. ಹಳ್ಳ- ಕಾಲುವೆಗಳ ಒತ್ತುವರಿಗೆ ಕೆರೆಗಳ ಅಸ್ತಿತ್ವ ಕಳೆದುಹೋಗುತ್ತಿವೆ. ಪಂಚಾಯಿತಿಯಲ್ಲಿ ಇ-ಸ್ವತ್ತು ಸೇರಿ ಯಾವುದೇ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.
  ಜಿ.ತಾಳಕೇರಪ್ಪ ಗ್ರಾಮಸ್ಥ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts