More

    ಬೆಂಗಳೂರಿನಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ..!

    ಬೆಂಗಳೂರು: ಬೆಂಗಳೂರಿನ ಜನತೆಗೆ ಚಿರತೆ ಕಾಟ ತಪ್ಪುವಂತೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಹಲವೆಡೆ ಚಿರತೆ ಪ್ರತ್ಯಕ್ಷಗೊಂಡು ಜನರನ್ನ ಆತಂಕಕ್ಕೆ ಈಡಾಗುವಂತೆ ಮಾಡಿತ್ತು. ಇದೀಗ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿಯ ಮನೆಯೊಂದರ ಬಳಿ ಚಿರತೆ ಕಾಣಿಸಿಗೊಂಡಿದ್ದು ಗ್ರಾಮಸ್ಥರನ್ನ ಭಯಭೀತರನ್ನಾಗಿ ಮಾಡಿದೆ..

    ಈ ಚಿರತೆ ಹೀಗೆಯೇ ಮನೆಯ ಆವರಣದಲ್ಲಿ ಬಿಂದಾಸ್ ಆಗಿ ಓಡಾಡಿದೆ. ಇದನ್ನು ಕಂಡ ನಿವಾಸಿಗಳು ಆತಂಕದಲ್ಲಿ ಇದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಳಿಯ ಗ್ರಾಮ ಒಂದರಲ್ಲಿ.

    ಬನ್ನೇರುಘಟ್ಟ ಕಾಡಿನ ಬಳಿ ಇರುವ ಭೂತಾನಹಳ್ಳಿ ಗ್ರಾಮದ ನಿವಾಸಿ ಪ್ರಸಾದ್ ಎಂಬುವವರ ಮನೆಯ ಆವರಣದಲ್ಲಿ ರಾತ್ರಿ 12.10 ರ ಸುಮಾರಿಗೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರನ್ನ ಆತಂಕಕ್ಕೀಡಾಗುವಂತೆ ಮಾಡಿದೆ. ಮನೆಯ ಕಾಂಪೌಂಡ್ ಜಿಗಿದು ಒಳ ಬಂದ ಚಿರತೆ ಕೆಲ ಸಮಯ ಮನೆಯ ಸುತ್ತಲೂ ಓಡಾಡಿಕೊಂಡಿದೆ. ಮನೆಯ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಬಳಿ ಮೆಲ್ಲನೆ ಬಾಗಿಲಿನ ಕಡೆಗೆ ಬಂದ ಚಿರತೆ ಹಿಂದಕ್ಕೆ ಹೋಗಿ ಮೆಟ್ಟಿಲನ್ನ ಏರಿ ಮನೆಯ ಮೇಲೆ ಓಡಾಡಿದೆ.

    ಸರಿಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮನೆಯ ಸುತ್ತಲೂ ಓಡಾಡಿದ ಚಿರತೆ ಆಹಾರಕ್ಕೆ ಹೊಂಚು ಹಾಕಿತ್ತು. ಮನೆಯ ಪಕ್ಕದಲ್ಲಿಯೇ ನಿರ್ಮಾಣ ಮಾಡಿದ್ದ ಶೆಡ್​ನಲ್ಲಿ ಹಸುಗಳು ಹಾಗೂ ನಾಯಿಗಳನ್ನ ಕಟ್ಟಿ ಹಾಕಲಾಗಿತ್ತು. ಅದಲ್ಲದೇ ಶೆಡ್​ಗೆ ಬಾಗಿಲು ಹಾಕಿದ್ದರಿಂದ ಚಿರತೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಿದೆ. ಚಿರತೆ ಓಡಾಟದ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮನೆ ಮಂದಿಯನ್ನ ಸೇರಿದಂತೆ ಊರಿನ ಗ್ರಾಮಸ್ಥರನ್ನ ಆತಂಕಕ್ಕೀಡಾಗುವಂತೆ ಮಾಡಿದೆ.

    ಇನ್ನೂ ಭೂತಾನಹಳ್ಳಿ ಗ್ರಾಮದ ಪ್ರಸಾದ್ ರವರ ಮನೆಯ ಬಳಿ ಚಿರತೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆ. ಕಳೆದ 4 ನೇ ತಾರೀಖಿನಂದು ರಾತ್ರಿ ಮನೆಯ ಆವರಣಕ್ಕೆ ಎಂಟ್ರಿ ಕೊಟ್ಟಿದ್ದ ಚಿರತೆ ಮನೆಯಲ್ಲಿದ್ದ ಸಾಕು ನಾಯೊಂದನ್ನು ಎತ್ತಿಕೊಂಡು ಹೋಗಿತ್ತು. ಬೆಳಿಗ್ಗೆ ಮನೆಯಲ್ಲಿದ್ದ ಐದು ನಾಯಿಗಳ ಪೈಕಿ ನಾಲ್ಕು ನಾಯಿಗಳು ಮಾತ್ರ ಇದ್ದಿದ್ದನ್ನು ಕಂಡ ಮನೆಯ ಮಂದಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಚಿರತೆ ಬಂದು ನಾಯಿಯನ್ನ ಹೊತ್ತೊಯ್ದಿರುವುದು ದೃಶ್ಯ ಕಂಡು ಶಾಕ್ ಆಗಿದ್ದಾರೆ. ಅಂದಿನಿಂದ ಸಾಕು ನಾಯಿಗಳನ್ನ ಹಾಗೂ ಹಸುಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮನೆಯ ಮಂದಿ ಎಚ್ಚರಿಕೆಯನ್ನ ವಹಿಸಿದ್ದರು.

    ಈ ಹಿಂದೆಯೂ ಸಹ ಕಾಡಂಚಿನ ಭಾಗದ ರೈತರ ಹೊಲಗಳ ಸಮೀಪದ ಬಂಡೆಗಳ ಮೇಲೆ ಸಂಜೆಯಾಗುತ್ತಿದ್ದಂತೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಗ್ರಾಮದ ಜನರು ಮೇಯಿಸಲು ಕರೆದುಕೊಂಡು ಹೋದ ಕುರಿಗಳನ್ನು ಹೊತ್ತೊಯ್ದಿರುವ ಘಟನೆಗಳೂ ನಡೆದಿವೆ. ಇದೀಗ ಮನೆಯ ಬಳಿ ಚಿರತೆ ಬರುತ್ತಿದ್ದು ಮನೆಯಿಂದ ಹೊರಬರಲು ಸಹ ಸಾಕಷ್ಟು ಭಯವಾಗುತ್ತಿದೆ. ಮನೆಯಲ್ಲಿ ಸಣ್ಣಸಣ್ಣ ಮಕ್ಕಳಿದ್ದು ಎಲ್ಲಿ ಚಿರತೆ ದಾಳಿ ಮಾಡುತ್ತದೆ ಎನ್ನುವ ಆತಂಕದಲ್ಲಿ ದಿನ ದೂಡುವಾಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts