More

    ನೀರಿಗಾಗಿ ಡಿಸಿ ಕಾರಿಗೆ ಮುತ್ತಿಗೆ, ಸಮಸ್ಯೆ ಬಗೆಹರಿಸಲು ಆಗ್ರಹ ಅಕ್ರಮ ಕೊಳವೆಬಾವಿಗೆ ಕಡಿವಾಣ ಹಾಕಲು ಪಟ್ಟು

    ಸೂಲಿಬೆಲೆ: ಹೊಸಕೋಟೆ ತಾಲೂಕಿನ ಮುತ್ಸಂದ್ರದಲ್ಲಿ ಮಂಗಳವಾರ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ನೀರು ಪೂರೈಕೆ ವಿಚಾರವಾಗಿ ಖಾಸಗಿ ಬೋರ್‌ವೆಲ್ ಮಾಲೀಕರು ಹಾಗೂ ಗ್ರಾಮಸ್ಥರ ನಡುವೆ ಉಂಟಾಗಿದ್ದ ಸಮಸ್ಯೆ ಬಗೆಹರಿಸಲು ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಮುತ್ಸಂದ್ರದಲ್ಲಿ ಗ್ರಾಪಂ ಕೊರೆಸಿರುವ 5 ಕೊಳವೆಬಾವಿ ಪೈಕಿ ಮೂರು ಬತ್ತಿವೆ, 2 ರಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದೆ. ಆದರೆ ಗ್ರಾಪಂ ವ್ಯಾಪ್ತಿಯಲ್ಲಿ ಕೆಲ ಪ್ರಭಾವಿಗಳು ಸ್ವಂತ ಜಮೀನಿನಲ್ಲಿ ಹೆಚ್ಚು ಬೋರ್‌ವೆಲ್ ಕೊರೆಸಿ ನೀರು ಮಾರಾಟಕ್ಕೆ ಮುಂದಾದ ಪರಿಣಾಮ ಗ್ರಾಪಂ ಕೊಳವೆಬಾವಿಯಲ್ಲಿ ನೀರು ಕಡಿಮೆ ಆಗಿ ಸಮಸ್ಯೆ ಉಲ್ಬಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಗ್ರಾಮದಲ್ಲಿ ಒಂದು ಕೊಳವೆಬಾವಿಗೆ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಮಾಲೀಕರು 10ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿ ಅನಧಿಕೃತವಾಗಿ ಬೆಂಗಳೂರಿನ ವಿವಿಧ ಭಾಗಗಳಿಗೆ ನಿತ್ಯ 300ಕ್ಕೂ ಅಧಿಕ ಲೋಡ್ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದಾರೆ. ಇವರ ಈ ದಂಧೆಗೆ ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡುವ ಸನ್ನಿವೇಶ ಉಂಟಾಗಿದೆ ಎಂದು ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಶಂಕರ್ ದೂರಿದರು.

    ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ರವೀಂದ್ರ, ಮೊದಲು ಗ್ರಾಮಕ್ಕೆ ಅಗತ್ಯ ನೀರು ಸರಬರಾಜು ಆಗಲಿ, ಬಳಿಕ ಬೇರೆಡೆಗೆ ಮಾರಾಟ ಮಾಡಲಿ ಎಂದರು. ಆಕ್ರೋಶಗೊಂಡ ಗ್ರಾಮಸ್ಥರು, ಅಕ್ರಮವಾಗಿ ಕೊಳವೆಬಾವಿ ಕೊರೆಸಿ ನೀರು ಮಾರಾಟಕ್ಕೆ ಮುಂದಾಗಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

    ಮುತ್ಸಂದ್ರ ಗ್ರಾಮದ ನೀರು ಮಹದೇವಪುರ ಕ್ಷೇತ್ರಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ಪ್ರತಿಭಟನೆ ಮಾಡಿ ನೀರು ಸರಬರಾಜು ನಿಲ್ಲಿಸಿದ ಕಾರಣ ಮುಖ್ಯಮಂತ್ರಿ ಮೂಲಕ ಒತ್ತಡ ಹೇರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಕಳುಹಿಸಿದ್ದಾರೆ. ಮಹದೇವಪುರ ಕ್ಷೇತ್ರದ ಶಾಸಕರು ಕಾವೇರಿ ನೀರು ತರಿಸಿಕೊಳ್ಳಲಿ, ಅದು ಬಿಟ್ಟು ಅಧಿಕಾರ ದುರುಪಯೋಗ ಮಾಡಿಕೊಂಡು ಇಲ್ಲಿಂದ ನೀರು ಪಡೆಯಲು ಮುಂದಾದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಮುಖಂಡ ಹರೀಶ್ ರೆಡ್ಡಿ ತಿಳಿಸಿದರು.

    ಜಿಲ್ಲಾ ಉಪವಿಭಾಗಾಧಿಕಾರಿ ಜಗದೀಶ್, ತಹಸೀಲ್ದಾರ್ ಗೀತಾ, ತಾಪಂ ಸದಸ್ಯೆ ಇಂದುಮತಿ ಕೃಷ್ಣಾರೆಡ್ಡಿ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಪಟೇಲ್ ಬಾಬು, ಮಾಜಿ ನಿರ್ದೇಶಕ ಬಾಬುರೆಡ್ಡಿ, ಗ್ರಾಪಂ ಸದಸ್ಯೆ ಕೆ.ವಿನೋದಮ್ಮ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿನೋದ್‌ರೆಡ್ಡಿ, ಮುಖಂಡರಾದ ಕೋಟುರು ಪೂಜಪ್ಪ, ಎಂ.ಹರೀಶ್ ರೆಡ್ಡಿ ಇದ್ದರು.

    ಜಿಲ್ಲಾಧಿಕಾರಿಗಳು ಗ್ರಾಮದಲ್ಲಿರುವ ನೀರಿನ ಸಮಸ್ಯೆಯ ವಾಸ್ತವ ಅರಿತು ಗ್ರಾಮಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ ಸರ್ಕಾರದ ಪ್ರಭಾವಿ ಮುಖಂಡರ ಒತ್ತಡಕ್ಕೆ ಮಣಿದು ನೀರು ಸರಬರಾಜಿಗೆ ಮುಂದಾದರೆ ಗ್ರಾಪಂ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
    ಎಂ.ಕೃಷ್ಣಾರೆಡ್ಡಿ, ಮುತ್ಸಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts