

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರಿಗರಿಗೆ ಇದೀಗ ವರುಣನ ಕರುಣೆ ದಯಪಾಲಿಸಿದ್ದು, ಮಳೆಯ ಸಿಂಚನದಿಂದ ಫುಲ್ ಖುಷ್ ಆಗುವಂತೆ ಮಾಡಿದೆ. ಇಷ್ಟು ದಿನ ಬಿರು ಬಿಸಿಲ ತಾಪಮಾನಕ್ಕೆ ಬೆವರುತ್ತಿದ್ದ ಜನರು, ತಂಪಾದ ಪಾನೀಯ, ರೆಡಿಮೇಡ್ ಜ್ಯೂಸ್, ಐಸ್ಕ್ರೀಂ ಮೊರೆ ಹೋಗುತ್ತಿದ್ದರು. ಆದರೆ, ಮಳೆ ಆರಂಭದ ಬೆನ್ನಲ್ಲೇ ಸದ್ಯ ಬಿಸಿ ಬಿಸಿ ಚಹಾ ಸೇವನೆಯತ್ತ ಮುಖಮಾಡಿದ್ದಾರೆ.
ಸದ್ಯ ಇದೇ ರೀತಿ ಮಹಿಳೆಯೊಬ್ಬರು ಬೆಂಗಳೂರು ಮಳೆಯನ್ನು ಟೀ ಮತ್ತು ಸಿಗರೇಟ್ ಸೇದುವ ಮೂಲಕ ಆನಂದಿಸುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕೊಟ್ಟ ಶೀರ್ಷಿಕೆ ಮಾತ್ರ ಅನೇಕರನ್ನು ಕೆರಳಿಸಿತ್ತು. ಸದ್ಯ ಈ ಫೋಟೋ ಮೇಲಿನ ಟೈಟಲ್ ನೋಡಿ ಕಿಡಿಕಾರಿದ್ದ ನೆಟ್ಟಿಗರು, ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದರು. ಮಹಿಳೆ, 'ಸಿಗರೇಟ್ ಸೇದದವರು ಲೂಸರ್ಸ್' ಎಂದು ಶೀರ್ಷಿಕೆ ಕೊಟ್ಟಿದ್ದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಮಹಿಳೆ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಸಿಗರೇಟ್ ಸೇದದ ಲೂಸರ್ಸ್, ನೀವೆಲ್ಲರೂ ಏನು ಮಾಡ್ತಿದ್ದೀರಾ? ಎಂಬ ಶೀರ್ಷಿಕೆಯಡಿ ಹಂಚಿಕೊಂಡ ಈ ಪೋಸ್ಟ್ ನೋಡಿದ ಬೆಂಗಳೂರು ಮೂಲದ ವೈದ್ಯರೊಬ್ಬರು, "ಟ್ರಿಪಲ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ನಾನು ಕಳುಹಿಸಿದ ಅತ್ಯಂತ ಕಿರಿಯ ರೋಗಿ 23 ವರ್ಷದ ಸಿಗರೇಟ್ ವ್ಯಸನಿಯಾಗಿದ್ದ ಹುಡುಗಿಯೇ. ಈಕೆ ಹೇಳಿದ ಪ್ರಕಾರ, ಸಿಗರೇಟ್ ಸೇದದ ಲೂಸರ್ಸ್ಗಳೆ ನೀವು ಆರೋಗ್ಯವಂತರಾಗಿ ಬಾಳಿರಿ" ಎಂದು ಬರೆದು ರೀ-ಟ್ವೀಟ್ ಮಾಡಿದ್ದಾರೆ.
ಸದ್ಯ ವೈದ್ಯರು ಕೊಟ್ಟ ಟಕ್ಕರ್ಗೆ ನೆಟ್ಟಿಗರು ಫಿದಾ ಆಗಿದ್ದು, ಆಕೆಗೆ ಸಖತ್ ಆಗಿ ಹೇಳಿದ್ದೀರಾ ಸರ್, ಮುಂದೆ ಈ ರೀತಿ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸುವಂತೆ ಮಾಡಿದ್ದೀರಾ ಸೂಪರ್ ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).