More

    ಗೃಹಲಕ್ಷ್ಮೀ ನೋಂದಣಿಗೆ ಶುಲ್ಕ ಆಕರಣೆ, ಬಂಕಾಪುರದಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಮುತ್ತಿಗೆ

    ಬಂಕಾಪುರ: ಗೃಹಲಕ್ಷ್ಮಿ ಯೋಜನೆ ಅರ್ಜಿಗೆ ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನ ಪಕ್ಕದಲ್ಲಿನ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಅರ್ಜಿ ಒಂದಕ್ಕೆ 50 ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಸೇವಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.

    ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000 ವಿತರಣೆ ನೋಂದಣಿ ಜುಲೈ 19ರಿಂದ ಆರಂಭಗೊಂಡಿದ್ದು, ಸರ್ಕಾರ ಉಚಿತ ನೋಂದಣಿ ಎಂದು ಘೊಷಿಸಿದೆ. ಆದರೆ, ಪಟ್ಟಣದ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಅರ್ಜಿ ಸ್ವೀಕರಿಸಲು ಹಣ ಪಡೆಯುತ್ತಿದ್ದಾರೆ. ಹಿಂದೆ ಗೃಹಜ್ಯೋತಿಗೂ ಹಣ ಪಡೆಯುತ್ತಿದ್ದರು ಎಂದು ನೋಂದಣಿ ಮಾಡಿಸಿದ ಮಹಿಳೆಯರು ಆರೋಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇಂದ್ರಕ್ಕೆ ಮುತ್ತಿಗೆ ಹಾಕಿದರು.

    ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ವೆಂಕಟೇಶ ಕುಲಕರ್ಣಿ, ಸಾರ್ವಜನಿಕರಿಂದ ಮಾಹಿತಿ ಪಡೆದು ಸೇವಾ ಕೇಂದ್ರದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದರು. ಗೃಹಜ್ಯೋತಿ ಅರ್ಜಿ ಸಲ್ಲಿಸಲು ಹಣ ಪಡೆದುಕೊಂಡಿದ್ದು ನಿಜ. ಇನ್ನು ಮುಂದೆ ಗೃಹಲಕ್ಷ್ಮಿ ಅರ್ಜಿಗೆ ಹಣ ಪಡೆದುಕೊಳ್ಳುವುದಿಲ್ಲ ಎಂದು ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ. ಒಂದುವೇಳೆ ಹಣ ಪಡೆದ ಬಗ್ಗೆ ದೂರುಗಳು ಬಂದರೆ ಸೇವಾ ಕೇಂದ್ರದ ಮೇಲೆ ಕ್ರಮ ಕೈಗೊಳ್ಳುವುದಾಗಿ ಉಪತಹಸೀಲ್ದಾರ್ ಎಚ್ಚರಿಕೆ ನೀಡಿದರು. ಗೃಹಲಕ್ಷ್ಮಿ ಯೋಜನೆ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಮದ್ಯವರ್ತಿಗಳ ಮಾತು ಕೇಳಿ ಯಾರಿಗೂ ಹಣ ಕೊಡಬೇಡಿ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

    ಗೃಹಲಕ್ಷ್ಮಿ ನೋಂದಣಿ ಮತ್ತು ಅದರ ಮುದ್ರಣದ ಒಂದು ಪ್ರತಿ ಸಹ ಉಚಿತವಾಗಿದೆ. ಇಂದಿನಿಂದ 60ಕ್ಕಿಂತ ಹೆಚ್ಚು ಅರ್ಜಿಗಳನ್ನು ನೋಂದಣಿ ಮಾಡಲು ಸರ್ಕಾರ ಸೂಚಿಸಿದೆ. ಬಂಕಾಪುರದ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಅರ್ಜಿಗೆ 50 ರೂ. ಹಣ ಪಡೆದುಕೊಳ್ಳುತ್ತಿರುವ ವಿಷಯ ಕುರಿತು ಸಿಬ್ಬಂದಿ ಪರಿಶೀಲಿಸಿದ್ದಾರೆ. ಅರ್ಜಿದಾರರು ನೋಂದಣಿ ಅರ್ಜಿಯ ಲ್ಯಾಮಿನೇಷನ್​ಗೆ ಹಣ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಇನ್ನುಮುಂದೆ ಅರ್ಜಿಗೆ ಹಣ ಪಡೆದುಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.

    | ಸಂತೋಷ ಹಿರೇಮಠ, ತಹಸೀಲ್ದಾರ್ ಶಿಗ್ಗಾಂವಿ

    ಪಟ್ಟಣದ ಕರ್ನಾಟಕ ಒನ್​ನಲ್ಲಿ ಎಲ್ಲ ಉಚಿತ ಅರ್ಜಿಗಳಿಗೆ ಹಣ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಹಣ ನೀಡಿದವರ ಅರ್ಜಿಗಳನ್ನು ಮಾತ್ರ ನೋಂದಣಿ ಮಾಡುತ್ತಿದ್ದಾರೆ. ಕಲರ್ ಪ್ರಿಂಟ್ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಸೇವಾ ಕೇಂದ್ರದವರೇ ಒಪ್ಪಿಕೊಂಡಿದ್ದಾರೆ. ಈ ರೀತಿ ಉಚಿತ ಯೋಜನೆಗಳಿಗೆ ಹಣ ಪಡೆದುಕೊಳ್ಳುತ್ತಿರುವ ಸೇವಾ ಕೇಂದ್ರಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

    | ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts