More

    ಸಿದ್ದು, ಡಿಕೆಶಿಗೆ ಬಿಜೆಪಿ ಲೀಗಲ್ ನೋಟಿಸ್ | ಸಾರ್ವಜನಿಕವಾಗಿ ಸರ್ಕಾರ, ಪಕ್ಷದ ಕ್ಷಮೆ ಕೋರಲು ಒತ್ತಾಯ

    ಬೆಂಗಳೂರು: ಆರೋಗ್ಯ, ವೈದ್ಯಕೀಯ ಪರಿಕರ ಸೇರಿ ಕರೊನಾ ನಿರ್ವಹಣೆಯಲ್ಲಿ 2 ಸಾವಿರ ಕೋಟಿ ರೂ. ಅಕ್ರಮವಾಗಿದೆ ಎಂದು ಆರೋಪಿಸಿ, ಪ್ರತಿಭಟನೆಯನ್ನೂ ನಡೆಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆಡಳಿತಾರೂಢ ಬಿಜೆಪಿ ಕಾನೂನು ಸಮರಕ್ಕೆ ಇಳಿದಿದೆ.

    ಕರೊನಾ ನಿರ್ವಹಣೆ ಹಣ ದುರ್ಬಳಕೆ ಕಾರಣ ಕೇಳಿ 20 ಬಾರಿ ಪತ್ರ ಬರೆದರೂ ಲೆಕ್ಕ ಕೊಟ್ಟಿಲ್ಲವೆಂಬ ಕಾಂಗ್ರೆಸ್ ನಾಯಕರಿಬ್ಬರ ಆರೋಪವನ್ನು ಪಂಚ ಸಚಿವರು ಬಲವಾಗಿ ಅಲ್ಲಗಳೆದಿದ್ದರು. ದಾಖಲೆಯನ್ನಿಟ್ಟುಕೊಂಡು ಇಲಾಖಾವಾರು ಖರ್ಚು-ವೆಚ್ಚದ ವಿವರಗಳನ್ನು ಒದಗಿಸಿದ್ದರು. ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೂ ಒಂದು ಹೆಜ್ಜೆ ಮುಂದಿಟ್ಟು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.

    ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ವಕೀಲರ ಮೂಲಕ ತಿಳಿವಳಿಕೆ ಪತ್ರ (ಲೀಗಲ್ ನೋಟಿಸ್) ರವಾನಿಸಿದ್ದು, ಬಿಜೆಪಿ ಸರ್ಕಾರ ಮತ್ತು ಪಕ್ಷದ ಗೌರವಕ್ಕೆ ಧಕ್ಕೆ ತಂದಿದಕ್ಕಾಗಿ ಸಾರ್ವಜನಿಕ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ. ಅಧಿಕೃತವಲ್ಲದ ಅಂಕಿ-ಅಂಶ ಇಟ್ಟುಕೊಂಡು ಸರ್ಕಾರದ ಮೇಲೆ ಹೊರಿಸಿರುವ ಆರೋಪ ನಿರಾಧಾರ, ಅವಾಸ್ತವಿಕ. 15 ದಿನಗಳೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಇದನ್ನೂ ಓದಿ: ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ಜನರ ಗಮನಸೆಳೆಯುವ ತಂತ್ರ: ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎನ್.ರವಿಕುಮಾರ್ ಹಾಗೂ ಪಕ್ಷದ ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಕರೊನಾ ಸಂಕಷ್ಟವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ಪ್ಯಾಕೇಜ್ ಸೇರಿ ಉತ್ತಮ ಸಾಧನೆ ಮಾಡಿ ಜನರ ಮೆಚ್ಚುಗೆ ಗಳಿಸಿದೆ. ದಿಟ್ಟ ನಿರ್ಧಾರಗಳಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚುತ್ತಿರುವ ಹೊಟ್ಟೆಕಿಚ್ಚಿನಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿ ಹೇಳಿಕೆ ನೀಡಿ, ಜನರ ಗಮನ ಸೆಳೆಯುವ ತಂತ್ರ ಹೂಡಿದ್ದಾರೆ ಎಂದು ಖಂಡಿಸಿದರು.

    ಇದನ್ನೂ ಓದಿ: ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಫ್​ ತಂತ್ರಜ್ಞಾನದ ಮೊರೆ!

    ನೈತಿಕತೆ ಎಲ್ಲಿದೆ?: ಮಾತೆತ್ತಿದರೆ ನೈತಿಕವಾಗಿ ಎತ್ತರದಲ್ಲಿರುವೆ ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್ ಪಕ್ಕದಲ್ಲೇ ಕುಳಿತುಕೊಂಡು ಹೇಳಿಕೆ ನೀಡುವಾಗ ನೈತಿಕತೆ ಎಲ್ಲಿರುತ್ತದೆ. ಸಿಎಂ ಆಗಿದ್ದಾಗ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡಿದ್ದರು. ಈ ವಾಚ್ ಎಲ್ಲಿಂದ ಬಂತು? ಕೊಟ್ಟವರು ಯಾರು? ಏಕೆ ಕೊಟ್ಟರು? ಎಂಬುದಕ್ಕೆ ಈವರೆಗೂ ಉತ್ತರವಿಲ್ಲ ಎಂದು ರವಿಕುಮಾರ್ ಕುಟುಕಿದರು.

     ನಾನು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೇನೆ. ಅದಕ್ಕೆ ಸಿಎಂ ಅಥವಾ ಮುಖ್ಯ ಕಾರ್ಯದರ್ಶಿ ನೋಟಿಸ್ ಕೊಡೋದು ಸರಿ. ಆದರೆ ಎಂಎಲ್​ಸಿ ರವಿಕುಮಾರ್ ಮೂಲಕ ಕೊಡಿಸಿದ್ದಾರೆ. ಅವರು ನೋಟಿಸ್ ಕೊಡಲಿ ಅಂತಾನೇ ಕಾಯುತ್ತಿದ್ದೆ. ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದಿದ್ದರೆ ಬೀದಿಗಳಿದು ಹೋರಾಟ ನಡೆಸಲಾಗುವುದು.
    | ಸಿದ್ದರಾಮಯ್ಯ
    ವಿಧಾನಸಭೆ ವಿಪಕ್ಷ ನಾಯಕ

    ಕರೊನಾ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಡೆಸಿದ ಭಾರಿ ಪ್ರಮಾಣದ ಭ್ರಷ್ಟಾಚಾರವನ್ನು ಕಾಂಗ್ರೆಸ್ ದಾಖಲೆ ಸಹಿತ ಜನರ ಮುಂದಿಟ್ಟಿದೆ. ಇದು ಸುಳ್ಳಾಗಿದ್ದರೆ ನನ್ನನ್ನು ನೇಣಿಗೇರಿಸಲಿ. ಮಾನನಷ್ಟ ಮೊಕದ್ದಮೆ ಹೂಡಲಿ. ಸರ್ಕಾರದ ಲೀಗಲ್ ನೋಟಿಸ್​ಗೆ ಉತ್ತರ ಕೊಡುತ್ತೇವೆ. ಕೇಸ್ ಹಾಕಿದರೂ ಉತ್ತರಿಸುತ್ತೇವೆ. ಅದಕ್ಕಿಂತ ಮೊದಲು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಿ.
    | ಡಿ.ಕೆ.ಶಿವಕುಮಾರ್
    ಕೆಪಿಸಿಸಿ ಅಧ್ಯಕ್ಷ

    ಆಗಸ್ಟ್​ 31ರ ನಂತರ ಲೋನ್​ ಮೊರಟೋರಿಯಂ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ಯಾಂಕರ್​​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts