More

    ದೇಶದ ಜನರ ಶಾಂತಿಯುತ ಜೀವನಕ್ಕೆ ಸೈನಿಕರ ತ್ಯಾಗ, ಶ್ರಮ ಕಾರಣ;ಶ್ರೀ ಮರುಳಾರಾಧ್ಯ ಶಿವಾಚಾರ್ಯರು

    ಅಳವಂಡಿ: ದೇಶದಲ್ಲಿ ಜನರು ಸಂತೋಷ, ಶಾಂತಿಯಿಂದ ಬಾಳುತ್ತಿದ್ದಾರೆಂದರೆ ಅದಕ್ಕೆ ಪ್ರಮುಖ ಕಾರಣ ಸೈನಿಕರು ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಗ್ರಾಮದ ಶ್ರೀ ಸಿದ್ದೇಶ್ವರ ಕಾಲೇಜಿನಲ್ಲಿ ಕಾರ್ಗಿಲ್ ಹುತಾತ್ಮ ಯೋಧ ಮಲ್ಲಯ್ಯ ಮೇಗಳಮಠ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರಿಂದ 24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವೀರ ಸೈನಿಕರಿಗೆ ನುಡಿನಮನ ಹಾಗೂ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯುವಪೀಳಿಗೆ ಸೈನಿಕರು, ದಾರ್ಶನಿಕರು, ಸ್ವಾತಂತ್ರೃ ಹೋರಾಟಗಾರರ ಆದರ್ಶ, ಹೋರಾಟ ಮನೋಭಾವ, ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ರೈತ ಹಾಗೂ ಸೈನಿಕರ ಬೆವರಿನ ಹನಿ ಭೂಮಿ ಮೇಲೆ ಬಿದ್ದರೆ, ಇಡೀ ದೇಶವೇ ಸಮೃದ್ಧಿ ಹಾಗೂ ಸಂತೋಷದಿಂದ ಇರಲು ಸಾಧ್ಯ ಎಂದರು.

    ಕರ್ನಲ್ ವೆಂಕಟೇಶ ನಾಯಕ ಮಾತನಾಡಿ, ನೆರೆಹೊರೆ ದೇಶಗಳ ಯುದ್ಧೋನ್ಮಾದ ಮೆಟ್ಟಿ ನಿಂತು ದೇಶದಲ್ಲಿ ಶಾಂತಿ ಇರುವಂತೆ ಮಾಡುವಲ್ಲಿ ಸೈನಿಕರ ಶ್ರಮ ಅಪಾರ. ಕಾರ್ಗಿಲ್ ಯುದ್ಧದಲ್ಲಿ ದೇಶದ ಸುಮಾರು 527 ಯೋಧರು ಹುತಾತ್ಮರಾಗಿದ್ದು, ಸಾವಿರಾರು ಯೋಧರು ಗಾಯಗೊಂಡಿದ್ದಾರೆ. ನೆರೆಯ ದೇಶಗಳು ಅಶಾಂತಿ, ಗಲಭೆ ಸೃಷ್ಟಿಸುವಲ್ಲಿ ನಿರತವಾಗಿವೆ. ಇವುಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಯೋಧರು ಮಾಡುತ್ತಿದ್ದಾರೆ ಎಂದು ಹೇಳಿದರು.

    ಪ್ರಮುಖರಾದ ಹುಸೇನ್‌ಪೀರ್ ಉಮಚಗಿ, ಮಂಜುನಾಥ ಬಾರಕೇರ, ಅಶೋಕ ಕವಲೂರು, ಗವಿಸಿದ್ದಪ್ಪ, ಸಿದ್ದಲಿಂಗಪ್ಪ, ಮಂಜುನಾಥ, ಗೋಣೇಶ, ಸತೀಶ, ಭೀಮೇಶ, ಡಾ.ಗವಿಸಿದ್ದಪ್ಪ ಮುತ್ತಾಳ, ಜಗದೀಶ ಗೌಡ, ದೇವರಡ್ಡಿ ಹಳ್ಳಿಕೇರಿ, ಮಂಜುನಾಥ ಇಟಗಿ, ನೀಲಪ್ಪ, ರಮೇಶ ಇತರರಿದ್ದರು.

    ಸಾರ್ವಭೌಮತ್ವ ಸ್ಥಾಪನೆ, ರಾಜಕೀಯ ಕಾರಣ, ದೇಶ ವಿಭಜಿಸುವ ಸಂಚು ಮುಂತಾದ ದುರಾಲೋಚನೆಯಿಂದ ಯುದ್ಧಗಳು ನಡೆಯುತ್ತಿವೆ. ಆದರೆ, ಭಾರತ ಎಂದೂ ಪಕ್ಕದ ದೇಶಗಳ ಮೇಲೆ ಯುದ್ಧವನ್ನು ಮಾಡಿ ಅಶಾಂತಿ ಸೃಷ್ಟಿಸಿಲ್ಲ. ಶಾಂತಿಯನ್ನು ಬಯಸುವ ದೇಶ ಭಾರತ.
    ಎಸ್.ಆರ್.ರಿತ್ತಿ, ಉಪನ್ಯಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts