More

    ಆಸ್ಕರ್ ಫರ್ನಾಂಡಿಸ್ ಚೇತರಿಕೆ ವಿಶ್ವಾಸ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ಭೇಟಿ

    ಮಂಗಳೂರು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಮಿದುಳಿನ ಶಸ್ತ್ರಕ್ರಿಯೆ ಕುರಿತು ತಜ್ಞರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಲ್ಲಿ ವರೆಗೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು, ಅವರು ಶೀಘ್ರ ಚೇತರಿಸಿಕೊಳ್ಳುವ ವಿಶ್ವಾಸ ನಮಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

    ಗುರುವಾರ ನಗರದ ಯೇನೆಪೋಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದರು.

    ಶಿವಕುಮಾರ್ ಮಾತನಾಡಿ, 43 ವರ್ಷದ ಹಿಂದೆ ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ಆಸ್ಕರ್ ಅವರನ್ನು ಬಲ್ಲೆ. ಅವರು ಸರಳ, ಸಜ್ಜನ ರಾಜಕಾರಣಿ. ಅಂಥ ಸಮಸ್ಯೆಯೇನೂ ಇಲ್ಲ. ವೈದ್ಯರು, ಕುಟುಂಬ ಸದಸ್ಯರು ವಿಶ್ವಾಸದಲ್ಲಿದ್ದಾರೆ. ಮೂರ‌್ನಾಲ್ಕು ತಜ್ಞರ ಅಭಿಪ್ರಾಯ ಕೇಳಿ ಮುಂದೇನು ಎನ್ನುವುದನ್ನು ನಿರ್ಧರಿಸುತ್ತಾರೆ. ಮಂಗಳೂರಿನ ಆಸ್ಪತ್ರೆಗಳು ದೇಶದಲ್ಲೇ ಉತ್ತಮವಾಗಿವೆ. ಹಾಗಾಗಿ ಬೇರೆ ಕಡೆಗೆ ಕೊಂಡೊಯ್ಯಬೇಕಾಗಿಲ್ಲ ಎಂದರು. ರಾಹುಲ್ ಗಾಂಧಿಯವರೂ ಎಲ್ಲ ವರದಿ ತರಿಸಿ ನೋಡುತ್ತಿದ್ದಾರೆ. ಇಡೀ ಪಕ್ಷವೇ ಅವರಿಗಾಗಿ ಪ್ರಾರ್ಥಿಸುತ್ತಿದೆ ಎಂದೂ ತಿಳಿಸಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಸಲೀಂ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿ’ಸೋಜ ಮುಂತಾದವರಿದ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಸ್ಪತ್ರೆ ಪ್ರಾಂಗಣಕ್ಕೆ ಆಗಮಿಸಿದ್ದರು. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಧ್ಯಾಹ್ನ ಆಸ್ಪತ್ರೆಗೆ ಬಂದು ತೆರಳಿದ್ದಾರೆ.

    ಆರೋಗ್ಯ ಗಂಭೀರ: ಸೋಮವಾರ ವ್ಯಾಯಾಮ ಮಾಡುವ ವೇಳೆ ಬಿದ್ದು ತಲೆಗೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲೇ ಮುಂದುವರಿದಿದೆ. ಗುರುವಾರ ಪ್ರಜ್ಞಾಹೀನ ಸ್ಥಿತಿಯಲ್ಲೇ ಮುಂದುವರಿದಿದ್ದರೂ ದೇಹದಲ್ಲಿ ಚಲನೆ ಇದೆ. ಬಿಪಿ, ಶುಗರ್ ಲೆವೆಲ್, ಪಲ್ಸ್ ಇತ್ಯಾದಿ ಸಾಮಾನ್ಯವಾಗಿದ್ದು ಸ್ಥಿತಿ ಆಶಾದಾಯಕವಾಗಿದೆ ಎಂದು ಸಮೀಪವರ್ತಿಗಳು ತಿಳಿಸಿದ್ದಾರೆ.

    ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಆಸ್ಕರ್ ಅವರಿಗೆ ನಿಗದಿಯಂತೆ ಗುರುವಾರ ಸಂಜೆ ಡಯಾಲಿಸಿಸ್ ನೆರವೇರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಪರಿಶೀಲಿಸಿ ಮುಂದಿನ ಚಿಕಿತ್ಸಾ ನಿರ್ಧಾರವನ್ನು ವೈದ್ಯರು ಕೈಗೊಳ್ಳಲಿದ್ದಾರೆ. ಯೇನೆಪೊಯ ಆಸ್ಪತ್ರೆ ವೈದ್ಯರ ಸಹಿತ ಮಣಿಪಾಲ, ಮಂಗಳೂರಿನ ಪರಿಣತ ವೈದ್ಯರ ತಂಡ ತೀವ್ರ ನಿಗಾ ವಹಿಸಿದೆ. ಆಸ್ಕರ್ ಅವರ ಪತ್ನಿ, ಪುತ್ರ, ಪುತ್ರಿ, ಸಂಬಂಧಿಕರು ಕೂಡ ಆಸ್ಪತ್ರೆಯಲ್ಲೇ ಇದ್ದಾರೆ.

    ಕಾಂಗ್ರೆಸ್ ಸಭೆ ಮುಂದಕ್ಕೆ: ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಈ ಐದು ಜಿಲ್ಲೆಗಳ ಪಕ್ಷದ ಮುಖಂಡರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶುಕ್ರವಾರ ಮಂಗಳೂರಿನಲ್ಲಿ ನಡೆಸಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ. ಆಸ್ಕರ್ ಅವರಿಗೆ ಗೌರವ ನೀಡಿ ಸಭೆ ರದ್ದು ಮಾಡಿದ್ದು, ಚೇತರಿಸಿಕೊಂಡ ಬಳಿಕ ಸಭೆ ನಡೆಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

    ವಿಶ್ವಾಸ ಕಳಕೊಂಡ ಸರ್ಕಾರ: ಕರ್ನಾಟಕದಲ್ಲಿರುವುದು ದೇಶದ ಅತ್ಯಂತ ಭ್ರಷ್ಟ ಸರ್ಕಾರ. ಇದು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿ, ವಲಸೆಯವರೋ ಇನ್ಯಾರೋ ಗೊತ್ತಿಲ್ಲ; ಅವರ ಪಕ್ಷದ ವಿಚಾರ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇದ್ದಾರೆ. ಬದಲಾಯಿಸ್ತಾರೋ, ತೆಗೆಯುತ್ತಾರೋ ಗೊತ್ತಿಲ್ಲ, ಏನಾದರೂ ಮಾಡಲಿ. ಆದರೆ ಸರ್ಕಾರ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಕರೊನಾದಿಂದ ಸಾವಿರಾರು ಮಂದಿ ಸತ್ತರು, ಸರ್ಕಾರದಿಂದ ಬೆಡ್ ಆಗಲೀ ಆಕ್ಸಿಜನ್ ಆಗಲೀ ಕೊಡಿಸಲಾಗಿಲ್ಲ, ನಾವೇನೂ ಹೇಳುವುದಿಲ್ಲ, ಚರ್ಚೆ ಕೂಡ ಮಾಡಲ್ಲ, ಕಾಲ ಬಂದಾಗ ಉತ್ತರ ಸಿಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts