More

    ನಮ್ಮದು ನುಡಿದಂತೆ ನಡೆದ ಸರ್ಕಾರ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

    ದೊಡ್ಡಬಳ್ಳಾಪುರ: ಲಾಕ್‌ಡೌನ್ ನಿಂದ ನೊಂದು ಆತ್ಮಹತ್ಯೆಗೆ ಶರಣಾದ ನೇಕಾರರಿಗೆ ತಕ್ಷಣ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ನೇಕಾರರ ಚಿಂತನಾ ಸಭೆಯಲ್ಲಿ ಮಾತನಾಡಿ, ನೇಕಾರರು ಬಹಳ ಸಂಕಷ್ಟದಲ್ಲಿದ್ದು, ಗುಡಿ, ಸಣ್ಣ ಕೈಗಾರಿಕೆಗಳನ್ನೇ ನಂಬಿ ಬೀದಿಗೆ ಬಂದಿದ್ದಾರೆ. ರಾಜ್ಯದಲ್ಲಿ ಅಂದಾಜು 14 ಲಕ್ಷ ಮಂದಿ ನೇಕಾರಿಕೆಯನ್ನೇ ಅವಲಂಬಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಅಲ್ಲದೆ ಕುಟುಂಬಗಳಿಗೆ ಧೈರ್ಯದ ಮಾತುಗಳನ್ನೂ ಹೇಳಿಲ್ಲ ಎಂದು ಟೀಕಿಸಿದರು. ಸಿಎಂ ಬಿ.ಎಸ್.ಯಡಿಯೂರಪ್ಪ ನೇಕಾರರಿಗೆ ಘೋಷಿಸಿದ್ದ 2 ಸಾವಿರ ರೂ. ಪರಿಹಾರ ಹಣ ನೀಡುವಲ್ಲಿ ವಿಲರಾಗಿದ್ದಾರೆ. ನಾನು ಅಧಿಕಾರದಲ್ಲಿದ್ದಿದ್ದರೆ 10 ಸಾವಿರ ರೂ. ನೀಡುತ್ತಿದ್ದೆ ಎಂದರು.

    ಹೋರಾಟಕ್ಕೆ ಬೆಂಬಲ: ಜನರ ತೆರಿಗೆ ಹಣವನ್ನು ವಿವೇಚನೆಯಿಂದ ಖರ್ಚು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ನೇಕಾರರು ಬೃಹತ್ ಪಾದಯಾತ್ರೆ ಅಥವಾ ಯಾವುದೇ ಹೋರಾಟ ಮಾಡಿದರೂ ಅದಕ್ಕೆ ನನ್ನ ಬೆಂಬಲ ಇರುತ್ತದೆ. ನೇಕಾರರ ಸಮಸ್ಯೆಗಳನ್ನು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ರಾಜ್ಯ ನೇಕಾರ ಸಂಘಗಳ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಮಾತನಾಡಿ, ಸರ್ವ ಪಕ್ಷಗಳ ಸಭೆಯಲ್ಲಿ ಸಿಎಂ ಎದುರು ಮಂಡಿಸಲಾಗಿದ್ದ ಬೇಡಿಕೆಗಳನ್ನು ಕಡೆಗಣಿಸಿದ್ದಾರೆ. 29 ಸಮುದಾಯಗಳಿರುವ ನೇಕಾರ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನೇಕಾರರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಮೂರು ನಿಗಮಗಳನ್ನು ಮಾಡಿದೆ. ಆದರೆ ಮೂರೂ ನಿಗಮಗಳು ಇಂದು ಸಮಾಧಿಯಾಗಿವೆ. ಸರ್ಕಾರ ವಿದ್ಯುತ್ ಇಲಾಖೆಗೆ ನೀಡಬೇಕಿದ್ದ 198 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ದೊಡ್ಡಬಳ್ಳಾಪುರ ಭುವನೇಶ್ವರ ನಗರದ ನೇಕಾರ ನಾರಾಯಣ ರೆಡ್ಡಿ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನೇಕಾರರ ಚಿಂತನ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಭೇಟಿ ನೀಡಿದ್ದ ಅವರು, ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯ ಮಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು. ನಾರಾಯಣರೆಡ್ಡಿ ಅವರು 1 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿಕೊಂಡಿದ್ದು, ಅದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು

    ಶಾಸಕ ವೆಂಕಟರಮಣಯ್ಯ ಮಾತನಾಡಿದರು. ನೇಕಾರ ಮುಖಂಡರಾದ ಪಿ.ಎ.ವೆಂಕಟೇಶ್, ಹೇಮಂತರಾಜು, ತಾಪಂ ಅಧ್ಯಕ್ಷೆ ರತ್ನಮ್ಮ ಜಯರಾಂ, ಜಿಪಂ ಸದಸ್ಯ ಚುಂಚೇಗೌಡ, ತಾಪಂ ಸದಸ್ಯ ನಾರಾಯಣಪ್ಪ, ನಗರಭೆ ಮಾಜಿ ಅಧ್ಯಕ್ಷ ಜಗನ್ನಾಥ, ಮುಖಂಡರಾದ ದಯಾನಂದ್, ಸೊಣ್ಣಪ್ಪನಹಳ್ಳಿ ರಮೇಶ್ ಮತ್ತಿತರರಿದ್ದರು.

    ನೇಕಾರ ಸಮುದಾಯ ಶೇ.8.3 ಅಂದರೆ 60 ಲಕ್ಷ ಮಂದಿ ಇದ್ದಾರೆ. ಸಮುದಾಯದ ಏಳಿಗೆಗೆ ನಿಗಮ ಸ್ಥಾಪಿಸಿ 250 ಕೋಟಿ ರೂ. ಅನುದಾನ ನೀಡಬೇಕು. ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯಾದ ಬಳಿಕ, ನಿಗಮ ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಲು ನಿರ್ಧರಿಸುತ್ತೇವೆ
    ಎಂ.ಡಿ. ಲಕ್ಷ್ಮೀನಾರಾಯಣ, ರಾಜ್ಯ ನೇಕಾರ ಸಂಘಗಳ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts