More

    ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದೇಕೆ? ಮತ್ತೆ ಅಲ್ಲೇ ಸ್ಪರ್ಧಿಸುತ್ತಾರಾ?: ಎರಡಕ್ಕೂ ಉತ್ತರ ಕೊಟ್ರು ಮಾಜಿ ಸಿಎಂ

    ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ವಿಚಾರ ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ, ಗೊಂದಲ, ಗದ್ದಲಕ್ಕೆ ಕಾರಣವಾಯಿತು. ಅಂತಿಮವಾಗಿ ಎಲ್ಲ ಗೊಂದಲಕ್ಕೆ ತೆರೆ ಎಳೆದ ಸಿದ್ದರಾಮಯ್ಯ ‘ನನ್ನನ್ನು ಖುಷಿ ಪಡಿಸಲೂ ಈ ರೀತಿಯ ಮಾತುಗಳನ್ನು ಆಡಬೇಡಿ. ನಾನು ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ’ ಎಂದು ಘೋಷಿಸಿದರು.

    ಕಾಂಗ್ರೆಸ್ ಭವನದಲ್ಲಿ ಭಾನುವಾರ ಚಾಮುಂಡೇಶ್ವರಿ ಮತ್ತು ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ. ಮರಿಗೌಡ, ಕಳೆದ ಬಾರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಆದರೆ, ಈ ಬಾರಿ ಗೆಲ್ಲುವ ವಾತಾವರಣ ಇರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

    ಮರಿಗೌಡರ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರ ಒಂದು ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಸಾಕು, ಮತ್ತೆ ಅವರನ್ನು ಆ ಕ್ಷೇತ್ರದಲ್ಲಿ ನಿಲ್ಲಿಸಿ ಸೋಲಿಸುವುದು ಬೇಡ ಎಂದು ಕಿಡಿಕಾರಿದರು. ಈ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಏರುಧ್ವನಿಯಲ್ಲಿ ವಾಗ್ವಾದ ನಡೆಸಿದರು.

    ನಾಲ್ಕೈದು ನಿಮಿಷಗಳ ಕಾಲ ಈ ಗೊಂದಲ, ಗದ್ದಲ ಕಂಡು ಬಂತು. ಈ ಗದ್ದಲದ ನಡುವೆಯೇ ಮರಿಗೌಡ ಮಾತು ಮುಂದುವರಿಸಿದರು. ‘ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ವಾತಾವರಣ ಇದೆ. ಅದೇ ರೀತಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ನಾನು ಆಹ್ವಾನ ನೀಡಿದ್ದೇನೆ. ಸ್ಪರ್ಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದರು.

    ನಂತರ ಮಾತನಾಡಿದ ಸಿದ್ದರಾಮಯ್ಯ, ಕಾರ್ಯಕರ್ತರು ಈ ರೀತಿ ಗದ್ದಲ ಮಾಡಬಾರದು. ಪಕ್ಷದಲ್ಲಿ ಶಿಸ್ತು ಇರಬೇಕು. ಶಿಸ್ತು ಇಲ್ಲದ ಪಕ್ಷ ಬಲಯುವತವಾಗಿ ಬೆಳೆಯಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತು ಇಲ್ಲದೆ ಇದ್ದರೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾರೆ. ನನ್ನ ಮೇಲಿನ ಅಭಿಮಾನಕ್ಕೆ ಚಾಮುಂಡೇಶ್ವರಿ ಸ್ಪರ್ಧೆಗೆ ಮರಿಗೌಡ ಆಹ್ವಾನ ನೀಡಿದರು. ಅದಕ್ಕೆ ಬಸವರಾಜು ಹಾಗೂ ಇತರರು ವಿರೋಧ ವ್ಯಕ್ತಪಡಿಸಿದರು. ಇಬ್ಬರ ಅಭಿಪ್ರಾಯ ಕೂಡ ಸರಿ ಇದೆ. ಇಬ್ಬರೂ ನನ್ನ ಮೇಲಿನ ಅಭಿಮಾನಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

    ಯಾವುದೇ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಮುಖ್ಯ. ಪಕ್ಷದ ಗೆಲುವಿಗೆ ಶ್ರಮಿಸುವುದು ಕಾರ್ಯಕರ್ತರು. ಹಾಗಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲ ಪಡಿಸಬೇಕು. ಬೂತ್ ಮಟ್ಟದ ಕಾರ್ಯಕರ್ತರು ಇಲ್ಲದೆ ಹೋದರೆ ಗೆಲುವು ಸಾಧಿಸಲು ಸಾಧ್ಯವಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 338 ಬೂತ್ ಸಮಿತಿ ಇದೆ. ಆದರೆ, ನಾನು ಸ್ಪರ್ಧಿಸುವ ಸಂದರ್ಭ ಅನೇಕ ಕಡೆ ಬೂತ್ ಸಮಿತಿ ಇರಲಿಲ್ಲ. ಹಾಗಾಗಿ ನಾನು ಸೋಲು ಅನುಭವಿಸಬೇಕಾಯಿತು ಎಂದರು.

    ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಹಜವಾಗಿದ್ದು, ಅದನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಸೋತೆ ಎಂಬ ಕಾರಣಕ್ಕೆ ನಾನು ಅಳುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ, 3 ಬಾರಿ ಸೋಲಿಸಿದ್ದಾರೆ. ನನ್ನ ಸೋಲಿಸಿದ್ದಕ್ಕೆ ಮತದಾರರ ಮೇಲೆ ನನಗೆ ಕೋಪ ಇಲ್ಲ. ನನಗೆ ಕೋಪ ಇರುವುದು ಕಾರ್ಯಕರ್ತರ ಮೇಲೆ. ಕಾರ್ಯಕರ್ತರು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ತಿಳಿಸಿದ್ದರೆ ನನಗೆ ಸೋಲು ಉಂಟಾಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಗೋವಾ ಮಾಜಿ ಸಿಎಂ ವಿರುದ್ಧ ಶಿಸ್ತುಕ್ರಮ; ಕಾರ್ಯಕಾರಿ ಸಮಿತಿಯಿಂದಲೇ ಕಿತ್ತೊಗೆದ ಕಾಂಗ್ರೆಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts