More

    ಕನಕಗಿರಿ ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪ

    ಸಿದ್ದಾಪುರ: ಶಾಸಕ ಬಸವರಾಜ ದಢೇಸುಗೂರು ಕನಕಗಿರಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವುದು ಬಿಟ್ಟು, ಇತರ ಕಾರ್ಯಗಳಿಗೆ ಮಹತ್ವ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

    ಶಾಸಕ ಬಸವರಾಜ ದಢೇಸುಗೂರು ನಡೆ ಹಾಗೂ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಸಿದ್ದಾಪುರದಿಂದ-ಕಾರಟಗಿ ವರೆಗೆ ಗುರುವಾರ ಹಮ್ಮಿಕೊಂಡಿದ್ದ ‘ಜನ ಪ್ರತಿಜ್ಞಾ’ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಕಾಂಗ್ರೆಸ್ ಪಾದಯಾತ್ರೆ ಕುಗ್ಗಿಸಲು ಶಾಸಕರು ಬ್ಯಾನರ್ ಕಿತ್ತೊಗೆಯುವ ಕೆಲಸ ಮಾಡಿದ್ದಾರೆ. ಆದರೆ, ಅವರನ್ನು ಈ ಬಾರಿ ಕ್ಷೇತ್ರದಿಂದ ಜನರೇ ಕಿತ್ತೊಗೆಯುತ್ತಾರೆ. ನನ್ನ ಅಧಿಕಾರ ಅವಧಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್, ಸಬ್ ರಿಜಿಸ್ಟ್ರಾರ್ ಕಚೇರಿ, ಡಿಪ್ಲೊಮಾ ಕಾಲೇಜು, 5 ಹೊಸ ಗ್ರಾಪಂಗಳ ರಚನೆ, ಏತ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಸಕ ದಢೇಸುಗೂರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಪುರಸಭೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಶಿವರಾಜ ತಂಗಡಗಿಗೆ ಟಿಕೆಟ್ ಇಲ್ಲ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಟಿಕೆಟ್ ತಂದು 25-30 ಸಾವಿರ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಶಾಸಕಗೆ ಸವಾಲು ಹಾಕಿದರು.

    ಎಂಎಲ್ಸಿ ಶರಣೇಗೌಡ ಬಯ್ಯಪುರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರೀಮಂತ ಪರವಾಗಿ ಕಾರ್ಯ ಮಾಡುತ್ತಿದೆ. ಹೀಗಾಗಿ ಉದ್ಯಮಿಗಳಾದ ಅಂಬಾನಿ, ಅದಾನಿ ಅತ್ಯಂತ ಶ್ರೀಮಂತರಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು ಇನ್ನೂ ಉದ್ಧಾರ ಆಗಿಲ್ಲ. ಎಸ್ಸಿ, ಎಸ್ಟಿ ಮೀಸಲು ವಿಚಾರದಲ್ಲಿ ಬಿಜೆಪಿ ಚುನಾವಣೆ ಗಿಮಿಕ್ ಮಾಡುತ್ತಿದೆ ಎಂದು ದೂರಿದರು.

    ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ ಮಾತನಾಡಿ, ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಬಡವರಿಗೆ ಹೊರೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಭಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಪ್ರಮುಖರಾದ ಶಿವರಡ್ಡಿ ವಕೀಲರು, ಗಂಗಾಧರ ಸ್ವಾಮಿ ಮಾತನಾಡಿದರು. ಮುಖಂಡರಾದ ರಡ್ಡಿ ಶ್ರೀನಿವಾಸ, ಅಂಬಣ್ಣ ನಾಯಕ, ನಾಗೇಶ್ ಸಿಂಧನೂರು, ಶರಣಪ್ಪ ಪರಕಿ, ಬಸವರಾಜ ಸಾಹುಕಾರ ಬೆನ್ನೂರು, ಸಿದ್ದಪ್ಪ ನೀರಲೂಟಿ, ಅಮರೇಶ್ ಗೋನಾಳ ಇತರರಿದ್ದರು.

    ಬಡ್ಡಿ ಸಮೇತ ವಸೂಲಿ ಮಾಡ್ತಾರೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದ ಜನರು ಕುರಿ, ಕೋಳಿ, ಹಣ, ಭತ್ತ ಸೇರಿ ಇತರ ವಸ್ತುಗಳನ್ನು ಕಾಣಿಕೆ ನೀಡಿ ದಢೇಸುಗೂರನ್ನು ಗೆಲ್ಲಿಸಿದರು. ಆದರೆ, ಗೆದ್ದ ಬಳಿಕ ಅಭಿವೃದ್ಧಿ ಕಾರ್ಯ ಮರೆತರು. ಕ್ಷೇತ್ರದ ಹೆಸರು ಹಾಳು ಮಾಡುವ ಕೆಲಸ ಮಾಡಿದ್ದಾರೆ. ಮುಂದಿನ ಎಲೆಕ್ಷನ್‌ನಲ್ಲಿ ಜನರು ಏನೂ ಕೊಡಲ್ಲ. ಕೊಟ್ಟಿದ್ದನ್ನು ಬಡ್ಡಿ ಸಮೇತ ವಸೂಲಿ ಮಾಡುವುದಕ್ಕೆ ಜನರು ಕಾಯುತ್ತಿದ್ದಾರೆ ಎಂದು ಶಾಸಕ ಬಸವರಾಜ ದಢೇಸುಗೂರು ವಿರುದ್ಧ ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts